Site icon Vistara News

Puneeth Rajkumar: ಬೆಟ್ಟದ ಹೂವಿನ ಬಾಲಕ

Bettada Hoovu

Bettada Hoovu

| ಪ್ರಸನ್ನ ಸಂತೇಕಡೂರು, ಮೈಸೂರು

ಪುನೀತ್ ರಾಜಕುಮಾರ್ ಬಗ್ಗೆ ನನಗೆ ಮೊದಲು ತಿಳಿದದ್ದು ಅವರ ಬೆಟ್ಟದ ಹೂವು ಚಲನಚಿತ್ರದಿಂದ ಎಂದು ಹೇಳಬಹುದು. ಅವರು ಬಾಲ್ಯದಲ್ಲಿ ನಮಗೆಲ್ಲ ಮಾಸ್ಟರ್ ಲೋಹಿತ್ (Puneeth Rajkumar) ಎಂದೇ ಪರಿಚಯವಿದ್ದದ್ದು. ಆಗ ನಮ್ಮ ಸಂತೇಕಡೂರಿನಲ್ಲಿ ಡಾ. ರಾಜಕುಮಾರ್ ಅವರ ಅಭಿಮಾನಿಗಳು ತುಂಬ ಇದ್ದರು. ಈ ಅಭಿಮಾನಿಗಳು ರಾಜಕುಮಾರ್ ಅವರ ಯಾವುದೇ ಹೊಸ ಚಲನಚಿತ್ರ ಶಿವಮೊಗ್ಗಕ್ಕೆ ಬಂದರೂ ಮೊದಲ ದಿನದ ಮೊದಲ ಆಟಕ್ಕೆ ಬೆಳಿಗ್ಗೆ ಆರುಗಂಟೆಗೆ ವೀರಭದ್ರೇಶ್ವರ ಚಿತ್ರಮಂದಿರದ ಮುಂದೆ ಹಾಜರಾಗುತ್ತಿದ್ದರು. ಈ ಅಭಿಮಾನಿಗಳ ಗುಂಪಿನಲ್ಲಿ ನನಗೆ ಒಂದು ಕಡೆ ಸೋದರಮಾವನಂತೆ, ಇನ್ನೊಂದು ಕಡೆ ಅಣ್ಣನಂತಿರುವ ನಮ್ಮೂರಿನ ರಾಜು ಕೂಡ ಒಬ್ಬನಾಗಿದ್ದ. ಇವನು ಒಂದು ರೀತಿ ಗೊರೂರು ರಾಮಸ್ವಾಮಿ ಅಯ್ಯಂಗಾರರ “ನಮ್ಮ ಊರಿನ ರಸಿಕರು” ಪುಸ್ತಕದಲ್ಲಿ ಬರುವ ನಾಣಿಯಂತೆ ಬಹುರೂಪಿ. ಇವನು ಮಾಡದ ಕೆಲಸಗಳೇ ಇಲ್ಲ ಎಂದು ಹೇಳಬಹುದು.

ಇವನು ಕನ್ನಡದ ಎಲ್ಲಾ ಸಿನಿಮಾಗಳ ಸಿನಿಮಾ ನಟನಟಿಯರ ಮಾಹಿತಿ ಕಣಜವೇ ಆಗಿದ್ದ, ಈಗಲೂ ಹಾಗೆಯೇ ಇದ್ದಾನೆ. ಈ ರಾಜು ಒಂದು ದಿನ ಅವರ ಗದ್ದೆಗೆ ನನ್ನನ್ನು ಕರೆದುಕೊಂಡು ಹೋಗಿ ಬರುವಾಗ ಬೆಟ್ಟದ ಹೂವು ಸಿನಿಮಾ ಕತೆ ಹೇಳುತ್ತ ಬಂದ. ಆ ಸಿನಿಮಾವನ್ನು ಅವನು ಆಗ ಎಲ್ಲಿ ನೋಡಿದ್ದನೋ ನನಗೆ ತಿಳಿಯದು. ಆದರೆ ಆ ಚಿತ್ರಕತೆ ನನ್ನ ಮನಸಿನಲ್ಲಿ ಅಚ್ಚಳಿಯದೆ ಹಾಗೆ ಉಳಿಯಿತು. ಆ ಮೇಲೆ ದೆಹಲಿ ದೂರದರ್ಶನ ಕೇಂದ್ರದಿಂದ ಮಧ್ಯಾಹ್ನದ ಹೊತ್ತು ಪ್ರಸಾರವಾಗುತ್ತಿದ್ದ ಪ್ರಾದೇಶಿಕ ಚಲನಚಿತ್ರಗಳಲ್ಲಿ ಒಂದು ದಿನ ನಮ್ಮ ಕನ್ನಡದ ಈ ಬೆಟ್ಟದ ಹೂವು ಚಲನಚಿತ್ರ ಪ್ರಸಾರವಾದಾಗ ನಾನು ನಮ್ಮೂರಿನ ಹೊನ್ನಪ್ಪ ಅವರ ಮನೆಯ ಟಿವಿಯಲ್ಲಿ ನೋಡಿದ್ದೆ. ಅದರಲ್ಲಿ ಬಾಲಕ ರಾಮುವಿನ ಪಾತ್ರದಲ್ಲಿ ಪುನೀತ್ ರಾಜಕುಮಾರ್ ತುಂಬಾ ಚೆನ್ನಾಗಿ ಅಭಿನಯಿಸಿದ್ದರು. ಅಲ್ಲಿ ರಾಮು ಇಂಗ್ಲಿಷ್ ಕಲಿಯಲು ಪ್ರಯತ್ನಿಸುವುದು, ಪೈಸೆ ಪೈಸೆಯನ್ನು ಉಳಿಸಿ ರಾಮಾಯಣ ಪುಸ್ತಕ ಕೊಳ್ಳಲು ಬಡತನದ ಜೊತೆ ಹೋರಾಟ ಮಾಡುವುದು, ಕೊನೆಗೆ ಶೆರ್ಲಿ ಮೇಡಂಗೆ ಬೆಟ್ಟದ ಹೂವು ತರಲು ಕಾಡಿಗೆ ಹೋಗುವುದು, ಈಗಲೂ ನನ್ನ ಕಣ್ಣ ಮುಂದೆ ಬರುತ್ತದೆ. ಆ ಸಿನಿಮಾ ನೋಡಿದ ಮೇಲೆ ಶಿವಮೊಗ್ಗದ ಮಕ್ಕಳ ವಿದ್ಯಾ ಸಂಸ್ಥೆಯ ಮಹಾತ್ಮ ಗಾಂಧಿ ಪಾರ್ಕ್ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದ ನಾನು ರಸ್ತೆಯಲ್ಲಿ ಯಾವುದೇ ಇಂಗ್ಲಿಷ್ ಭಾಷೆಯ ಪದಗಳು ಕಂಡರೂ ಅವುಗಳನ್ನು ಕೂಡಿಸಿ ಓದಲು ಆರಂಭಿಸಿದೆ.

ನಾನು ಅಮೆರಿಕದಲ್ಲಿದ್ದಾಗ ಈ ಚಲನಚಿತ್ರವನ್ನ ಮತ್ತೆ ಮತ್ತೆ ಯುಟ್ಯೂಬ್‌ನಲ್ಲಿ ನೋಡಿ ಈ ಚಿತ್ರ ಕತೆಯ ಲೇಖಕಿ ಶೆರ್ಲಿ ಎಲ್. ಅರೋರಾ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಮೂಲ ಕಾದಂಬರಿ ವಾಟ್ ದೆನ್, ರಾಮನ್? ಕೂಡ ರಿಚ್ಮಂಡ್ ನಗರದ ಗ್ರಂಥಾಲಯದಿಂದ ತಂದು ಓದಿದ್ದೆ. ಆ ದೇಶದಲ್ಲಿ ನಾನಿದ್ದ ಪೂರ್ವ ಕರಾವಳಿಯ ವರ್ಜಿನೀಯಾದಿಂದ ಪಶ್ಚಿಮ ಕರಾವಳಿಯ ಕ್ಯಾಲಿಫೋರ್ನಿಯಾಲ್ಲಿದ್ದ ಶೆರ್ಲಿ ಎಲ್. ಅರೋರಾ ಅವರನ್ನೇ ಸಂಪರ್ಕಿಸಿ ಮಾತನಾಡಿದ್ದೆ. ಇದೆಲ್ಲ ಆಗಿದ್ದು ಪುನೀತ್ ಅವರ ಅಮೋಘ ಅಭಿನಯದಿಂದ ಎಂದು ಹೇಳಬಹುದು. ಇನ್ನು ಭಕ್ತ ಪ್ರಹ್ಲಾದ ಚಲನಚಿತ್ರದಲ್ಲೂ ಪುನೀತ್ ಅವರು ಪ್ರಹ್ಲಾದನಾಗಿ ಅದ್ಭುತವಾಗಿ ನಟಿಸಿದ್ದಾರೆ. ಬಾಲನಟನಾಗಿ ಅವರ ನಟನೆ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಯಾರಿವನು ಇನ್ನು ಮುಂತಾದ ಚಲನಚಿತ್ರಗಳಾಗಿ ಬಹಳ ಚೆನ್ನಾಗಿ ಮೂಡಿಬಂದಿದೆ. ಆ ನಟನೆಯೇ ಅವರನ್ನು ನಾಡಿನಾದ್ಯಂತ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ್ದು ಎಂದು ಎಲ್ಲರಿಗೂ ತಿಳಿದಿರುವ ವಿಷಯ.

ಅವರು ಯುವ ನಟನಾಗಿ ಅಭಿನಯಿಸಿರುವ ಅಪ್ಪು, ಅಭಿ, ಆಕಾಶ್ ಮತ್ತು ಮಿಲನ ಚಲನಚಿತ್ರಗಳು ನನಗೆ ತುಂಬ ಇಷ್ಟವಾಗಿವೆ. ಕಿರುತೆರೆಯಲ್ಲಿ ಅವರು ಅದ್ಭುತವಾಗಿ ನೆಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಾನು ತಪ್ಪದೆ ನೋಡಿದ್ದೇನೆ. ಅವರ ಬದುಕು ಅವರು ಹುಟ್ಟಿದ ದಿನದಿಂದಲೂ ಕನ್ನಡಿಗರ ಮುಂದೆ ತೆರೆದ ಪುಸ್ತಕವಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲ ಒಂದು ರೀತಿ ಪ್ರಭಾವಿಸಿದೆ ಎಂದರೆ ತಪ್ಪಾಗಲಾರದು.

ಅವರಿಗೆ ಹಠಾತ್ತಾಗಿ ಕಾಣಿಸಿಕೊಂಡ ಎದೆನೋವಿನಿಂದ ಆದ ತೀವ್ರ ಹೃದಯಾಘಾತದಿಂದ ಅವರು ಇಲ್ಲ ಎಂದು ಕೇಳಿದಾಗ ಪ್ರತಿಯೊಬ್ಬ ಕನ್ನಡಿಗನಿಗೂ ಬಹುದೊಡ್ಡ ಆಘಾತವಾಗಿತ್ತು. ಆ ಕ್ಷಣ ಏನಾಗುತಿದೆ ಎಂದು ಯೋಚಿಸಲು ಆಗದೆ ತಮ್ಮದೇ ಮನೆಯ ಮಗನನ್ನ, ಅಣ್ಣನನ್ನ, ತಮ್ಮನನ್ನ ಕಳೆದುಕೊಂಡಾಗ ಆಗುವ ತೀವ್ರಸ್ವರೂಪದ ನೋವಿಗಿಂತ ಪುನೀತ್ ಅವರ ಅಗಲಿಕೆಯ ನೋವು ಹೆಚ್ಚು ಆಗಿತ್ತು. ಡಾ.ರಾಜಕುಮಾರ್ ಅವರ ಆ ದೊಡ್ಡ ಕುಟುಂಬ ತಮ್ಮ ಉದಾತ್ತ ಗುಣದಿಂದ ತಮ್ಮ ನೇತ್ರಗಳನ್ನ ದಾನ ಮಾಡುವುದಕ್ಕೆ ಬಹಳ ವರ್ಷಗಳ ಹಿಂದೆಯೇ ಸಹಿ ಮಾಡಿದ್ದರಿಂದ ಮತ್ತು ಡಾ. ರಾಜಕುಮಾರ್ ಅವರು ಕೂಡ ತಮ್ಮ ಆದರ್ಶಮಯವಾದ ಬದುಕು ಮತ್ತು ನಡೆಯಿಂದ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋಗಿದ್ದರು ಎಂದು ತಿಳಿದುಬಂದಿದೆ. ಅದೇ ಮಾರ್ಗದಲ್ಲಿ ಸಾಗಿದ್ದ ಪುನೀತ್ ಅವರು ಕೂಡ ತಮ್ಮ ಸಾವಿನಲ್ಲೂ ತಮ್ಮ ನೇತ್ರಗಳು ಬೇರೆಯವರಿಗೆ ಬೆಳಕಾಗುವಂತೆ ಮಾಡಿ ಹೋಗಿದ್ದಾರೆ.

ಅವರ ಅಂತ್ಯ ಸಂಸ್ಕಾರದ ದಿನ ಕಂಠೀರವ ಸ್ಟುಡಿಯೋ ಹೊರಭಾಗದ ರಸ್ತೆಗಳಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳ ವಿದಾಯದ ಕಣ್ಣೀರು ಪುನೀತ್ ರಾಜಕುಮಾರ್ ಅವರ ಬದುಕಿನ ಸಾರ್ಥಕತೆ ಮತ್ತು ಸಾಧನೆ, ಎರಡನ್ನೂ ತೋರಿಸುತ್ತದೆ. ಬೆಟ್ಟದ ಹೂವು ಚಲನಚಿತ್ರದಲ್ಲಿ ಯಾವುದೋ ಕಾಡಿನ ಬೆಟ್ಟದಲ್ಲಿ ಕೆಲವೇ ಕೆಲವು ಪೈಸೆ ಹಣಕ್ಕೋಸ್ಕರ ಕೆಲವೇ ಕೆಲವು ಹೂಗಳನ್ನು ಕಿತ್ತು ತರಲು ಹೋಗುವ ಆ ಬಾಲಕನಿಗೆ ಲಕ್ಷಾಂತರ ಜನರು ಲಕ್ಷಾಂತರ ಹೂವಿನ ಸರಮಾಲೆಗಳನ್ನೇ ಹಾಕಿ ಬೀಳ್ಕೊಟ್ಟಿದ್ದು ಇಂದಿಗೂ ನನ್ನ ಕಣ್ಣ ಮುಂದೆ ಹಾಗೆಯೇ ಇದೆ.

ಇದನ್ನೂ ಓದಿ: Puneeth Rajkumar Statue: ಬಳ್ಳಾರಿಯಲ್ಲಿ 23 ಅಡಿ ಎತ್ತರದ ಅಪ್ಪು ಪುತ್ಥಳಿ ಅನಾವರಣ; ಭಾವುಕರಾದ ಅಶ್ವಿನಿ ಪುನೀತ್‌ ರಾಜಕುಮಾರ್

ಖ್ಯಾತ ಕಾದಂಬರಿಕಾರ ತರಾಸು ಅವರು “ಬೆಳಕು ತಂದ ಬಾಲಕ” ಎಂಬ ಕಾದಂಬರಿ ಬರೆದಿದ್ದಾರೆ. ಈ ಕಾದಂಬರಿ ಪುರಾಣಗಳಲ್ಲಿ ಮೃತ್ಯವನ್ನು ಮತ್ತು ಯಮನನ್ನು ಗೆದ್ದು ಬರುವ ಅಪಾರವಾದ ಜ್ಞಾನವುಳ್ಳ ಬಾಲಕ ನಚಿಕೇತನ ಕುರಿತದ್ದಾಗಿದೆ. ಮಾಸ್ಟರ್ ಲೋಹಿತ್ ಎಂಬ ಹೆಸರು ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ವನ ಹಾಗೆ ಈ ಬಾಲಕನಿಗೆ ಅಲ್ಪಾಯುಷ್ಯವನ್ನು ತೋರಿಸುತಿದೆ. ಆ ಕಾರಣದಿಂದ ನೀವು ಹೆಸರನ್ನು ಬದಲಿಸಿ ಬೇರೆ ಹೆಸರು ಇಟ್ಟರೆ ಒಳ್ಳೆಯದು ಎಂದು ರಾಜಕುಮಾರ್ ಅವರಿಗೆ ಯಾರೋ ಜೋತಿಷಿಗಳು ಹೇಳಿದ್ದರಂತೆ. ಅದರಂತೆ ಲೋಹಿತ್ ಎಂಬ ಹೆಸರನ್ನು ಬದಲಿಸಿ ಪುನೀತ್ ಎಂದು ನಾಮಕರಣ ಮಾಡಿದರು ಎಂದು ತಿಳಿದುಬರುತ್ತದೆ. ಆದರೂ ಬೆಟ್ಟದ ಹೂವಿನ ಆ ಬಾಲಕ ಬೆಳಕು ತಂದ ಬಾಲಕ ನಚಿಕೇತನ ಹಾಗೆ ದೀರ್ಘಾಯುಷಿ ಆಗದ್ದೂ ಕಾಲದ ನಿಯಮವೋ ಕಾಲನ ನಿಯಮವೋ ಅದು ಮನುಷ್ಯನ ಬುದ್ಧಿಗೆ ಮತ್ತು ಶಕ್ತಿಗೆ ನಿಲುಕದ್ದು.

Exit mobile version