Site icon Vistara News

Puneeth Rajkumar: ಮರೆಯಲಾಗದ ಅಮೂಲ್ಯ ರತ್ನ ಅಪ್ಪು

Puneeth Rajkumar Birthday

Puneeth Rajkumar Birthday

| ಪರಶಿವಮೂರ್ತಿ ಎನ್.ಪಿ, ಶಿಕ್ಷಕರು, ನಂಜೀಪುರ, ಸರಗೂರು ತಾಲೂಕು

ಬಾಲನಟನಾಗಿ ಭೂಲೋಕಕ್ಕೆ ಬಂದು ಕೋಟಿ ಕನ್ನಡಿಗರ ಮನದಾಳದಲ್ಲಿ ‘ಕರ್ನಾಟಕ ರತ್ನ’ನಾಗಿಯೇ ಜನರ ಮನದಲ್ಲಿ ಅಪ್ಪು (Puneeth Rajkumar) ಅಜರಾಮರವಾಗಿ ಅಚ್ಚಳಿಯದೆ ನೆಲೆಸಿದ್ದಾರೆ. ಕನ್ನಡದ ಅದ್ಭುತ ಪ್ರತಿಭೆಯನ್ನು ಹೊಂದಿದ್ದ ಚಿತ್ರರಂಗದ ಜನಪ್ರಿಯ ನಟ ಅಪ್ಪು ನಟನೆಗೆ ಸೀಮಿತವಾಗದೆ, ಸಮಾಜದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಸದ್ದಿಲ್ಲದೆ ಎಲೆಮರೆಕಾಯಿಯಂತೆ ಮಾಡುತ್ತಿದ್ದರು, ಸರ್ಕಾರಕ್ಕೆ ಕೋವಿಡ್ ಸಂದರ್ಭದಲ್ಲಿ 50 ಲಕ್ಷ ರೂ. ನೀಡಿದ್ದರು, ಕೆಎಂಎಫ್ ಹಾಲಿನ ರಾಯಭಾರಿಯಾಗಿ 13 ವರ್ಷಗಳಿಂದ ಗೌರವಧನ ಸ್ವೀಕರಿಸದೆ ನೆರವಾದರು, ಮೈಸೂರಿನಲ್ಲಿರುವ ಶಕ್ತಿಧಾಮ ಮೂಲಕ ನಿರ್ಲಕ್ಷಿತ, ನೊಂದ, ಅನಾಥ, ನಿರ್ಗತಿಕ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಿದರು. ಬೆಂಗಳೂರಿನ ವಿಜಯನಗರದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಐಎಎಸ್ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ, ಅನಾಥ ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗಿ ಕಾಮಧೇನು ಆಗಿದ್ದರು, ವೃದ್ಧಾಶ್ರಮಗಳ, ಗೋಶಾಲೆ ವೆಚ್ಚಗಳನ್ನು ಹಾಗೂ ಸಾವಿರಾರು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಧನಸಹಾಯ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದ ರೀತಿ ಬೆಳೆಯುತ್ತಾ ಹೋಗುತ್ತದೆ, ಬಡವರು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂದು ಅವರ ಮನ ಯಾವಾಗಲೂ ಮಿಡಿಯುತ್ತಿತ್ತು, ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ನೂರಾರು ಸಂಘ-ಸಂಸ್ಥೆಗಳಿಗೆ ದಾನ ಧರ್ಮವನ್ನು ಮಾಡುತ್ತಿದ್ದರು. ಸಹಾಯವನ್ನು ಮಾಡಿದ ನಂತರ ಎಲ್ಲೂ ಕೂಡ ನನ್ನ ಹೆಸರನ್ನು ಹೇಳಬಾರದೆಂದು ತಾಕೀತು ಮಾಡುತ್ತಿದ್ದರು. ಇದು ಅವರ ಮಾನವೀಯ, ಸದ್ಗುಣ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ, ಇಂದಿನ ದಿನಗಳಲ್ಲಿ ತಾವು ಮಾಡುವ ಸಹಾಯ, ನೆರವು, ದಾನ, ಧರ್ಮಗಳನ್ನು ವಿಭಿನ್ನ ರೀತಿಯ ಫೋಟೊ ಮೂಲಕ ಪತ್ರಿಕೆ, ಮೀಡಿಯಾಗಳ ಮುಖಾಂತರ ಪುಟಗಟ್ಟಲೆ ವಿಶೇಷ ಸಂಚಿಕೆಯಲ್ಲಿ ಅದ್ಧೂರಿ ಪ್ರಚಾರವನ್ನು ಮಾಡಿ ಸಮಾಜದೆದುರು ತೋರ್ಪಡಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಇದಕ್ಕೆ ತದ್ವಿರುದ್ಧವಾಗಿ ಸಮಾಜದ ಮುಂದೆ ಡಂಗೂರ ಬಾರಿಸಿ ಕೊಳ್ಳದೆ, ಬಲಗೈನಿಂದ ಮಾಡಿದ ದಾನ ಎಡಗೈಗೂ ತಿಳಿಯಬಾರದು ಎಂಬುದನ್ನು ಅಕ್ಷರ ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. “ಹುಟ್ಟುವಾಗ ಉಸಿರು ಇರುತ್ತದೆ ಹೆಸರಿರುವುದಿಲ್ಲ, ಸತ್ತಾಗ ಉಸಿರು ಇರುವುದಿಲ್ಲ ಹೆಸರಿರುತ್ತದೆ” ಎಂಬುದನ್ನು ಬಹುಶಃ ಇವರನ್ನು ನೋಡಿಯೇ ಹೇಳಿದ್ದಾರೆ ಎಂದನಿಸುತ್ತದೆ.

ಇದನ್ನೂ ಓದಿ: Gandhadagudi on OTT: ಒಟಿಟಿಗೆ ಬರಲು ಸಜ್ಜಾಯ್ತು ಪುನೀತ್‌ ಗಂಧದ ಗುಡಿ

ಭೌತಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಅವರು ಸಮಾಜಕ್ಕೆ ನೀಡಿರುವ ಅಪಾರ ಕೊಡುಗೆಗಳು ಸ್ಮರಿಸುವಂತೆ ಮಾಡುತ್ತವೆ. ಅಭಿಮಾನಿಗಳೆಂದರೆ ಪುನೀತ್‌ಗೆ ಪಂಚಪ್ರಾಣ, ಪುನೀತ್ ಮತ್ತು ಅಭಿಮಾನಿಗಳ ನಡುವೆ ಅನನ್ಯ ನಿಷ್ಕಲ್ಮಶ, ಅಭಿಮಾನ, ಪ್ರೀತಿ ಇತ್ತು. ಆದ್ದರಿಂದಲೇ ಅವರ ನಿಧನದ ಸುದ್ದಿ ಕೇಳಿ ದುಃಖ ತಡೆಯಲಾರದೆ ಅಪ್ಪು ಇರದ ಜೀವನ ಶೂನ್ಯ ಎಂದು ಅನೇಕ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿರುವುದು ಸಾಕ್ಷಿಯಾಗಿದೆ. ಸಾವಿನಲ್ಲೂ ಎರಡು ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಡಿಗೆ ಬೆಳಕಾಗಿ ಸಾರ್ಥಕ್ಯ ಮೆರೆದಿದ್ದಾರೆ. ಒಮ್ಮೊಮ್ಮೆ ಯೋಚಿಸಿದರೆ ದೇವರೇ ಪುನೀತರನ್ನು ತನ್ನ ಬಳಿಗೆ ಬೇಗ ಕರೆದುಕೊಂಡಿದ್ದಾನೆ ಎಂದೆನಿಸುತ್ತದೆ. ಏಕೆಂದರೆ ಇವನು ಭೂಮಿಯಲ್ಲಿದ್ದರೆ ನನಗೆ ಬೆಲೆ ಇಲ್ಲದಂತಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಪ್ರಪಂಚದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿ, ಆರಾಧ್ಯ ದೇವರಂತೆ ಮನೆ ಮನೆಗಳಲ್ಲಿ‌ ಪೂಜಿಸುತ್ತಿದ್ದಾರೆ, ಇವರ ಸಮಾಜ ಸೇವೆ, ಕಲಾ ಸೇವೆಯನ್ನು ಮನಗಂಡ ಕರ್ನಾಟಕ ಸರ್ಕಾರವು ಪುನೀತ್ ಹುಟ್ಟಿದ ದಿನವಾದ ಮಾರ್ಚ್ 17 ರಂದು ಪ್ರತಿ ವರ್ಷವೂ ಸ್ಫೂರ್ತಿಯ ದಿನವೆಂದು ಆಚರಿಸಲಾಗುತ್ತದೆ.

Happy Birthday Appu…

Exit mobile version