ಚಿಕ್ಕಮಗಳೂರು: ಸ್ಯಾಂಡಲ್‌ವುಡ್ ನಾಯಕ ನಟ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ (Puneeth Rajkumar) ಅಗಲಿ ವರ್ಷ ಉರುಳಿದೆ. ಆದರೂ ಅಭಿಮಾನಿಗಳು ಮಾತ್ರ ಅಪ್ಪುವನ್ನು ನೆನೆಯದ ದಿನಗಳೇ ಇಲ್ಲ ಎಂಬಂತಾಗಿದೆ. ಯಾವುದೇ ಕಾರ್ಯಕ್ರಮಗಳು, ಸಮಾರಂಭಗಳು, ಪೂಜೆ-ಪುನಸ್ಕಾರಗಳೇ ಇರಲಿ ಅಲ್ಲಿ ಪುನೀತ್ ಪ್ರತ್ಯಕ್ಷವಾಗಿ ಬಿಡುತ್ತಾರೆ. ಅದ್ಧೂರಿಯಾಗಿ ನಡೆದ ದೇವಿರಮ್ಮನ ಜಾತ್ರೆಯಲ್ಲೂ ಅಭಿಮಾನಿಗಳು ಪುನೀತ್‌ರನ್ನು ಸ್ಮರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಇಲ್ಲಿನ ಅರವಿಂದ ನಗರದ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬ ದೇವಿರಮ್ಮನ ಬೆಟ್ಟ ಹತ್ತುವಾಗ ಅಪ್ಪು ಭಾವಚಿತ್ರ ಇರುವ ಟೀ ಶರ್ಟ್ ಧರಿಸಿ, ಭುಜದ ಮೇಲೆ ಅಪ್ಪು ಬ್ಯಾನರ್ ಹಿಡಿದು ಬೆಟ್ಟ ಹತ್ತಿ ಗಮನ ಸೆಳೆದಿದ್ದಾರೆ. ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ದೇವಸ್ಥಾನವು ಸಮುದ್ರಮಟ್ಟದಿಂದ ಸುಮಾರು 3,800 ಅಡಿ ಎತ್ತರದಲ್ಲಿದೆ. ಇಲ್ಲಿನ ದೇವಿ ಬಿಂಡಿಗ ದೇವೀರಮ್ಮನಿಗೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಬೆಟ್ಟ ಹತ್ತಿ ಹೋಗಿ ಸೇವೆ ಸಲ್ಲಿಸುತ್ತಾರೆ.
ಚಿಕ್ಕಮಗಳೂರಿನಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರುವ ರವಿ ಅವರು “ಅಪ್ಪು ರವಿ” ಎಂದೇ ಫೇಮಸ್ ಆಗಿದ್ದು, ಬೆಟ್ಟ ಹತ್ತುವಾಗ ಟೀ ಶರ್ಟ್‍ನಲ್ಲಿ ಹಿಂದೆ-ಮುಂದೆ ಅಪ್ಪು ಫೋಟೊ, ಕೈನಲ್ಲಿದ್ದ ಕನ್ನಡದ ಬಾವುಟದಲ್ಲೂ ಅಪ್ಪು ಫೋಟೊ ಹಿಡಿದು ಸಂಭ್ರಮಿಸಿದರು. ಜತೆಗೆ ಇದೇ 28ರಂದು ಬಿಡುಗಡೆಯಾಗುವ ಅಪ್ಪು ಅಭಿನಯದ ಗಂಧದ ಗುಡಿ ಚಿತ್ರದ ಕಟೌಟ್ ಅನ್ನು ಬೆಟ್ಟದ ಮೇಲೆ ಪ್ರದರ್ಶಿಸಿದರು. ಕೆಲವು ಸಮಯ ಅವರು ಭಾವುಕರಾಗಿದ್ದೂ ಕಂಡುಬಂತು.
ಅಪ್ಪು ಕ್ಯಾಂಟೀನ್
ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸಿತ್ತಿರುವ ರವಿ ಈ ಮೊದಲು ತಮ್ಮ ಕ್ಯಾಂಟೀನ್‍ಗೆ ಮಗಳ ಹೆಸರನ್ನು ಇಟ್ಟಿದ್ದರು. ಆದರೆ, ಕಳೆದೊಂದು ವರ್ಷದಿಂದ ಮಗಳ ಹೆಸರನ್ನು ತೆಗೆದು ಅಪ್ಪು ಕ್ಯಾಂಟೀನ್ ಎಂದು ಮರು ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ.
ಇದನ್ನೂ ಓದಿ | Puneeth Rajkumar | ಸಮುದ್ರದ ಆಳದಲ್ಲಿ ಪುನೀತ್ ʼಗಂಧದ ಗುಡಿʼಯ ಪ್ರಚಾರ!