ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿಗೆ ನಮ್ಮ ಪವರ್ ರನ್ ಹೆಸರಲ್ಲಿ ಭಾನುವಾರ ಮ್ಯಾರಥಾನ್ ನಡೆಸಲಾಯಿತು. ಮ್ಯಾರಥಾನ್‌ಗೆ ಅಶ್ವಿನಿ ಪುನೀತ್ ರಾಜಕುಮಾರ್ ಫ್ಲ್ಯಾಗ್ ಆಫ್ ಮಾಡಿದರು.
ಸೂತ್ರ ಫಿಟ್ನೆಸ್ ಸೆಂಟರ್ ಹಾಗೂ ರಾಜಕುಮಾರ್ ಟ್ರಸ್ಟ್ ಸಹಯೋಗದಲ್ಲಿ ನೈಸ್ ರೋಡ್‌ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಮಕ್ಕಳು, ಮಹಿಳೆಯರು, ಯುವಕರು ಹಾಗೂ ವೃದ್ಧರು ಸೇರಿದಂತೆ ಸುಮಾರು ಎರಡು ಸಾವಿರ ಜನ ಭಾಗವಹಿಸಿದ್ದರು.
ಮ್ಯಾರಥಾನ್‌ಗೆ ಚಾಲನೆ ಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್
ಬಾಡಿ ಫಿಟ್ನೆಸ್‌ಗೆ ನಟ ಪುನೀತ್ ರಾಜಕುಮಾರ್ ಆದ್ಯತೆ ನೀಡುತ್ತಿದ್ದರು. ಯೋಗ, ವ್ಯಾಯಾಮ, ರನ್ನಿಂಗ್ ಮಾಡುವುದರಿಂದ ದೇಹ ಸಧೃಡವಾಗಿರಲು ಸಾಧ್ಯವಾಗುತ್ತದೆ. ಹೀಗಾಗಿ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ರಾಘವೇಂದ್ರ ರಾಜಕುಮಾರ್, ನಿರೂಪಕಿ ಅನುಶ್ರೀ ಹಾಗೂ ನಟಿ ಧನ್ಯರಾಮ್ ಕುಮಾರ್ ಸಹ ಆಗಮಿಸಿದ್ದರು.
ವ್ಯಾಯಾಮ ಮಾಡುವಾಗ ಅಪ್ಪು ಸತ್ತಿದ್ದು!
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, ಅಪ್ಪು ವ್ಯಾಯಾಮ ಮಾಡುತ್ತಿದ್ದಾಗಲೇ ಸಾವನ್ನಪ್ಪಿದ್ದರು, ನಮಗ್ಯಾಕೆ ಬೇಕು ಎಂಬ ತಪ್ಪು ಕಲ್ಪನೆಯಲ್ಲಿ ವ್ಯಾಯಾಮ ಮಾಡುವುದನ್ನು ಜನರು ಬಿಟ್ಟಿದ್ದಾರೆ. ಆದರೆ ಆ ತಪ್ಪು ಭಾವನೆಯನ್ನು ಹೋಗಲಾಡಿಸಬೇಕೆಂದು ತಿಳಿಸಿದರು.
ಅಪ್ಪು ವ್ಯಾಯಾಮದ ಕುರಿತು ರಾಘವೇಂದ್ರ ರಾಜಕುಮಾರ್ ಮಾತು
ವ್ಯಾಯಾಮ ಮಾಡುವಾಗ ಅಪ್ಪು ಸತ್ತಿದ್ದು ಎಂಬ ಸುದ್ದಿ ಅಳಿಸಬೇಕು. ವ್ಯಾಯಾಮ ಮಾಡುವುದರಿಂದ ಸಾವು ಬರುವುದಿಲ್ಲ. ಹುಟ್ಟಿದ ಮನುಷ್ಯನಿಗೆ ಒಂದಲ್ಲ ಒಂದು ದಿನ ಸಾವು ಬಂದೇ ಬರುತ್ತದೆ. ಆದರೆ ಅಲ್ಲಿಯವರೆಗೂ ನಾವು ದೇಹವನ್ನು ಸದೃಢವಾಗಿಟ್ಟುಕೊಳ್ಳಬೇಕು. ಈ ಬಾರಿಯ ಮ್ಯಾರಥಾನ್‌ನಲ್ಲಿ ನಾನು ಓಡಲು ಆಗುವುದಿಲ್ಲ. ಮುಂದಿನ ವರ್ಷ ಏರ್ಪಡಿಸುವ ಪವರ್ ರನ್ ಮ್ಯಾರಥಾನ್‌ನಲ್ಲಿ ಓಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದರು.
ಇದನ್ನೂ ಓದಿ: Road Accident: ಮದುವೆಗೆಂದು ಹೋಗುತ್ತಿದ್ದಾಗ ಸ್ಕಾರ್ಪಿಯೋ ಪಲ್ಟಿ; ಒಬ್ಬ ಸಾವು, ಇಬ್ಬರು ಗಂಭೀರ
ಬಳಿಕ ವೇದಿಕೆ ಮೇಲೆ ಮಕ್ಕಳೊಂದಿಗೆ ಅಪ್ಪು ಸಿನಿಮಾದ ಹಾಡುಗಳ ಮೂಲಕ ರಾಘವೇಂದ್ರ ರಾಜಕುಮಾರ್ ರಂಜಿಸಿದರು. ಇದೇ ವೇಳೆ ಅಪ್ಪು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಪ್ರಮಾಣ ಸ್ವೀಕರಿಸಲಾಯಿತು. ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆದವರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಕೆಲ ಸಾಧಕರಿಗೆ ಬಹುಮಾನ ನೀಡಿ ಸನ್ಮಾನಿಸಿಸಲಾಯಿತು. ಪವರ್ ಸ್ಟಾರ್ ಹೆಸರಲ್ಲಿ ಆಯೋಜಿಸಿದ್ದ ನಮ್ಮ ಪವರ್ ರನ್ ಮ್ಯಾರಥಾನ್‌ಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಪ್ರತಿವರ್ಷವೂ ಪುನೀತ್ ಹುಟ್ಟುಹಬ್ಬದ ದಿನ ಮ್ಯಾರಥಾನ್ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ