| ಕಾರ್ತಿಕ್ ಸೂರ್ಯ
ಚಿಕ್ಕ ವಯಸ್ಸಿನಲ್ಲಿ ಚಲನಚಿತ್ರ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿದ್ದ ನನಗೆ, ಚಿತ್ರವನ್ನು ನೋಡಿದ ಕೂಡಲೇ ಯಾವ ಚಿತ್ರ?ಯಾರು ನಟ ನಟಿಯರು? ನಿರ್ದೇಶಕ ಯಾರು? ಸಂಗೀತ ನಿರ್ದೇಶಕ ಯಾರು? ಸಾಹಿತ್ಯ ಬರೆದವರು ಯಾರು ? ಹಾಡು ಹಾಡಿದವರು ಯಾರು? ಎಂದು ಕ್ಷಣಾರ್ಧದಲ್ಲೇ ಉತ್ತರಿಸುತ್ತಿದ್ದೆ. ಈ ಪರಿ ಹುಚ್ಚು ಹೊಂದಿದ್ದ ನನಗೆ, ಮುಂದೆ ಬರಬರುತ್ತಾ ಚಿತ್ರನಟರೆಂದರೆ ಕೇವಲ ತೆರೆಯ ಮೇಲೆ ಹೀರೋಗಳಷ್ಟೇ, ಕೇವಲ ಮನರಂಜನೆಗೆ ಮಾತ್ರ ಹೀರೋಗಳು, ಚಿತ್ರದಲ್ಲಿ ಇರುವ ಹಾಗೆ ನಿಜ ಜೀವನದಲ್ಲಿ ಅವರು ಇರಲಾರರು, ಹಲವು ಸುದ್ದಿಗಳನ್ನು ನೋಡಿ ಕೇಳಿದ ಪರಿಣಾಮ ಆ ನಟ ಹಾಗಂತೆ ಈ ನಟ ಹೀಗಂತೆ ಎಂದು ಕೆಟ್ಟ ಅಭಿಪ್ರಾಯಗಳನ್ನು ಹೊಂದಿದ್ದೆ. ಆದರೂ ಕನ್ನಡ ಚಿತ್ರಗಳನ್ನು ಚಿತ್ರಮಂದಿರಲ್ಲಿ ಹೋಗಿ ವೀಕ್ಷಣೆ ಮಾಡುವುದು ಕಡಿಮೆ ಏನು ಆಗಿರಲಿಲ್ಲ. ಎಲ್ಲ ನಟರನ್ನು ಒಂದೇ ರೀತಿ ಕಾಣುತ್ತಿದ್ದ ನಾನು, ಎಲ್ಲ ನಟರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡುತ್ತಿದ್ದೆ. ಆ ನಟ ಮೇಲೆ ಈ ನಟ ಕೆಳಗೆ ಅವರು ನಮ್ಮ ಬಾಸ್ ಇವರು ನಮ್ಮ ಬಾಸ್ ಅನ್ನೋ ಅಭಿಪ್ರಾಯ ನನ್ನಲ್ಲಿರಲಿಲ್ಲ. ಹೊಸ ನಟರ ಚಿತ್ರಗಳನ್ನು ಸಹ ನೋಡುತ್ತಿದ್ದೆ. ಎಲ್ಲ ನಟರಂತೆಯೇ ಪುನೀತ್ (Puneeth Rajkumar) ಅವರ ಮೇಲೆಯೂ ಸಾಮಾನ್ಯ ಅಭಿಪ್ರಾಯವೇ ನನ್ನಲ್ಲಿತ್ತು. ಆದರೆ ಆ ಒಂದು ಘಟನೆ ನಿಜಕ್ಕೂ ಅಪ್ಪು ವಿಚಾರದಲ್ಲಿ ಆಶ್ಚರ್ಯಚಕಿತನಾಗಿಸಿತ್ತು.
ನಾನು ಹುಟ್ಟಿ ಬೆಳೆದ ಪೀಣ್ಯದಿಂದ ಸ್ವಲ್ಪ ದೂರದಲ್ಲೇ HMT ವಾಚ್ ಕಾರ್ಖಾನೆಯಿದ್ದು, ಈ ಸ್ಥಳವು ಕನ್ನಡ ಚಿತ್ರರಂಗದ ಶೂಟಿಂಗ್ ಹಾಟ್ ಸ್ಪಾಟ್ ಎಂದರೆ ತಪ್ಪಾಗಲಿಕ್ಕಿಲ್ಲ. ಶೂಟಿಂಗ್ ನಡೆಯುತ್ತಿದೆ ಎಂದು ನಮಗೆ ತಿಳಿದ ಕೂಡಲೇ ಶೂಟಿಂಗ್ ಜಾಗಕ್ಕೆ ನಮ್ಮ ಗ್ಯಾಂಗ್ ಹಾಜರ್ ಆಗುತ್ತಿದ್ದ ಸಮಯವದು. ಅತಿ ಹೆಚ್ಚು ಫೈಟಿಂಗ್ ಸನ್ನಿವೇಶಗಳ ಚಿತ್ರೀಕರಣ ನಡೆಯುವ ಈ ಜಾಗದಲ್ಲಿ ಈಗಲೂ ಅನೇಕ ಚಿತ್ರಗಳ ಶೂಟಿಂಗ್ ಭರದಿಂದ ಸಾಗುತ್ತಲೇ ಇರುತ್ತದೆ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಚಿತ್ರಗಳು ಅತಿ ಹೆಚ್ಚು ಚಿತ್ರೀಕರಣ ಇಲ್ಲೇ ನಡೆದಿವೆ. ಅಪ್ಪು, ವೀರ ಕನ್ನಡಿಗ, ಯಾರೇ ಕೂಗಾಡಲಿ, ಮಿಲನ… ಹೀಗೆ ಅಪ್ಪು ಅವರ ಅನೇಕ ಚಿತ್ರಗಳ ಸನ್ನಿವೇಶಗಳು HMTಯಲ್ಲೇ ಚಿತ್ರೀಕರಣಗೊಂಡಿವೆ. ಪ್ರಥಮವಾಗಿ ಪುನೀತ್ ಅವರನ್ನು ವೀರ ಕನ್ನಡಿಗ ಚಿತ್ರೀಕರಣದ ಸಮಯದಲ್ಲಿ ನೋಡಿ ಕೈ ಕುಲುಕಿದ್ದೆ.
ಹೀಗೆ ಒಂದು ದಿನ ನಾನು ಮತ್ತು ನನ್ನ ಗೆಳೆಯ ಬೈಕ್ ನಲ್ಲಿ HMT ಯತ್ತ ಸಾಗುತ್ತಿರಬೇಕಾದರೆ ಪಾಳು ಬಿದ್ದ HMT ಕಾರ್ಖಾನೆಯೊಳಗೆ ಯಾವುದೋ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನನ್ನ ಗೆಳೆಯ ಬಾ ಮಗ ಯಾವ ಸಿನಿಮಾ ನೋಡೋಣ ಅಂತ ಹೇಳಿ ಬೈಕ್ ಪಾರ್ಕ್ ಮಾಡಿಸಿ ಶೂಟಿಂಗ್ ಜಾಗಕ್ಕೆ ಕರೆತಂದ. ನಾವು ನಿಂತಿದ್ದ ಗೇಟ್ ನಿಂದ ಸುಮಾರು 200 ಮೀಟರ್ ದೂರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಗೇಟ್‌ನಲ್ಲಿದ್ದ ಕಾವಲುಗಾರನನ್ನು ಅಣ್ಣ ಯಾವ ಚಿತ್ರ ಅಣ್ಣ ಅಂತ ಕೇಳಿದಾಗ ಅಪ್ಪುರವರ ಅಂಜನಿಪುತ್ರ ಚಿತ್ರ ಎಂದು ಹೇಳಿದ ಕೂಡಲೇ ಹೋ ಹೌದಾ !! ಪುನೀತ್ ರಾಜಕುಮಾರ್ ಇದ್ದಾರಾ ಅಣ್ಣ ಅಂತ ನನ್ನ ಗೆಳೆಯ ಕೇಳಿದ, ಹು ಕಣಪ್ಪ ಅಂತ ಕಾವಲುಗಾರ ಹೇಳಿದ ಕೂಡಲೇ ನನ್ನ ಗೆಳೆಯ ಮಗ ಪ್ಲೀಸ್ ಮಗ ನೋಡಿಕೊಂಡು ಹೋಗೋಣ ಪ್ಲೀಸ್ ಪ್ಲೀಸ್ ಅಂತ ಹಠ ಮಾಡಿದ. ನಾನು ಸರಿ ಆಯ್ತು ಅಂತ ಗೇಟ್ ನಲ್ಲೇ ಪುನೀತ್ ಅವರಿಗಾಗಿ ಕಾಯುತ್ತ ನಿಂತಿದ್ದೆವು. ಮಧ್ಯಾಹ್ನದ ಸಮಯ ಆ ಬಿಸಿಲಿನ ಝಳದಲ್ಲಿ ನಮ್ಮೊಡನೆ ಸುಮಾರು 30 ಜನ ನಿಂತಿದ್ದರು.
ಇದನ್ನೂ ಓದಿ: 100 Days Of Gandhadagudi: 100 ದಿನ ಪೂರೈಸಿದ ಪುನೀತ್ ಅಭಿನಯದ ಗಂಧದಗುಡಿ ಸಿನಿಮಾ, ಅಪ್ಪು ಪತ್ನಿ ಅಶ್ವಿನಿ ಸಂತಸ
ಒಂದು ಸನ್ನಿವೇಶ ಚಿತ್ರೀಕರಣ ಮುಗಿದ ಬಳಿಕ ಹೊರ ಬಂದ ಪುನೀತ್ ಕ್ಯಾರವಾನ್ ಕಡೆ ಹೆಜ್ಜೆ ಹಾಕುತ್ತಿದ್ದರು. ಇದನ್ನ ಕಂಡ ಎಲ್ಲರೂ ಅಪ್ಪು , ಅಪ್ಪು ಎಂದು ಕೂಗು ಹಾಕಲು ಶುರು ಮಾಡಿದರು. ಅಷ್ಟು ದೂರದಲ್ಲಿದ್ದ ಅಪ್ಪು ನಮ್ಮ ಕಡೆ ತಿರುಗಿ ನೋಡಿ ಹಾಯ್ ಮಾಡಿ ಕ್ಯಾರವಾನ್ ಕಡೆ ತೆರಳಲಿಲ್ಲ. ಎಲ್ಲರೂ ಕ್ಷಣ ಕಾಲ ಪುಳಕಿತರಾದರು. ಇಷ್ಟಕ್ಕೆ ಒಬ್ಬ ನಟ ಸುಮ್ಮನಾಗಿ ತಮ್ಮ ಕಾರ್ಯದ ಕಡೆ ಗಮನ ಕೊಡಬಹುದಿತ್ತು. ಆದರೆ ಅಪ್ಪು ಹಾಗೆ ಮಾಡಲಿಲ್ಲ ಅಷ್ಟು ದೂರದಿಂದ ನಾವಿದ್ದಲ್ಲಿಗೆ ನಡೆದುಕೊಂಡು ಬಂದು ನಮ್ಮನ್ನೆಲ್ಲ ನೋಡಿ ಖುಷಿಗೊಂಡು ನೋಡಿ “ತುಂಬಾ ಬಿಸಿಲಿದೆ ಆ ಕಡೆ ಸೈಡ್ ನಲ್ಲಿ ನೆರಳಲ್ಲಿ ನಿಂತಿರಿ, ಒಂದೇ ಒಂದು ಸೀನ್ ಬಾಕಿ ಇದೆ, ಅದು ಮುಗಿಸ್ಕೊಂಡು ಬಂದು ನಿಮ್ಮನ್ನ ಮಾತಾಡಿಸ್ತೀನಿ” ಅಂತ ನಗುಮುಖದಲ್ಲಿ ಹೇಳಿ ಹೊರಟರು. ಎಲ್ಲರ ಮುಖದಲ್ಲಿ ಏನೋ ಒಂದು ರೀತಿ ಸಂತೋಷ. ಅಪ್ಪು ಸೀನ್ ಮುಗಿದ ಕೂಡಲೇ ಏಕಾಂಗಿಯಾಗಿ ಬಂದು ಎಲ್ಲರನ್ನು ಪ್ರತ್ಯೇಕವಾಗಿ ಎಲ್ಲಿಂದ ಬಂದಿದ್ದೀರ? ಮನೇಲಿ ಎಲ್ಲರೂ ಕ್ಷೇಮವಾಗಿದ್ದೀರ ಎಂದು ವಿಚಾರಿಸಿದ ಅಪ್ಪುವನ್ನು ಕಂಡು ನಾವೆಲ್ಲ ನಿಜಕ್ಕೂ ಆಶ್ಚರ್ಯಚಕಿತವಾಗಿದ್ದಂತೂ ಸುಳ್ಳಲ್ಲ. ಚಿಕ್ಕ ವಯಸ್ಸಿನಿಂದ ಅನೇಕ ನಟರನ್ನು ಹತ್ತಿರದಿಂದ ನೋಡಿರುವ ನನಗೆ ಅಭಿಮಾನಿಗಳ ಕಡೆ ತಿರುಗಿಯೂ ನೋಡದ, ಕೆಲ ನಟರ ಮಧ್ಯೆ ಅಪ್ಪು ಸಾಮಾನ್ಯರನ್ನು ಅಸಮಾನ್ಯರಂತೆ ಕಂಡು ಗೌರವ ಕೊಟ್ಟು ಮಾತನಾಡಿಸುತ್ತಿದ್ದ ರೀತಿ ಕಂಡು ಬೆರಗಾಗದೆ ಇರಲು ಸಾಧ್ಯವಾಗಲಿಲ್ಲ.
ಇಂತಹ ಆದರ್ಶಗಳನ್ನು ಹೊಂದಿದ್ದ ಅಪ್ಪು ನೀವಿನ್ನು ಇರಬೇಕಿತ್ತು… ಈ ಕನ್ನಡಿಗರಿಗಾಗಿ ಮತ್ತೊಮ್ಮೆ ಹುಟ್ಟಿ ಬನ್ನಿ… ಹ್ಯಾಪಿ ಬರ್ತ್‌ಡೇ ಅಪ್ಪು…