ಬೆಂಗಳೂರು: ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ರಾಜ್ಯದ ವಿವಿಧೆಡೆ ಶುಕ್ರವಾರ ಸಂಭ್ರಮದಿಂದ ಆಚರಿಸಲಾಗಿದೆ. ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನದಾನ, ರಕ್ತದಾನ ಹಾಗೂ ಸಸಿ ನೆಡುವ ಮೂಲಕ ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಿಸಿದ್ದಾರೆ.
ಹುಬ್ಬಳ್ಳಿ: ನಗರದ ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು. ಈ ವೇಳೆ ಎದೆ ಮೇಲೆ ಬಾಲಕ ಅಪ್ಪು ಟ್ಯಾಟೂ ಹಾಕಿಸಿಕೊಂಡಿರುವುದು ಗಮನ ಸೆಳೆಯಿತು.
ಕಲಬುರಗಿಯಲ್ಲಿ 48 ಕೆ.ಜಿ. ಕೇಕ್ ಕತ್ತರಿಸಿ ಸಂಭ್ರಮ
ಕಲಬುರಗಿ: ನಗರದ ಪಾಲಿಕೆ ವೃತ್ತದಲ್ಲಿ ಅಪ್ಪು 48ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 48 ಕೆ.ಜಿ. ಕೇಕ್ ಕತ್ತರಿಸಿ ಅಪ್ಪು ಅಡ್ಡಾದ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಕೇಕ್ ಜತೆಗೆ ಪುನೀತ್‌ಗೆ ಪ್ರಿಯವಾದ ಚಿಕನ್ ಬಿರಿಯಾನಿ ಊಟ ವ್ಯವಸ್ಥೆ (100 ಕೆ.ಜಿ) ಮಾಡಲಾಗಿತ್ತು. ಕೇಕ್ ಕಟ್ ಮಾಡಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸಿ ಅಭಿಮಾನಿಗಳು ಸಂಭ್ರಮಿಸಿದರು.
ವಿಜಯಪುರದಲ್ಲಿ ರಕ್ತದಾನ, ನೇತ್ರದಾನ, ಅನ್ನದಾನ
ವಿಜಯಪುರ: ನಗರದ ಜೋರಾಪುರ ಪೇಠದಲ್ಲಿ ಅಪ್ಪು 48ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ರಕ್ತದಾನ, ನೇತ್ರದಾನ ಹಾಗೂ ಅನ್ನದಾನ ಮಾಡಿದರು. ಇದೇ ವೇಳೆ ಸಾರ್ವಜನಿಕರಿಗೆ ಗುಲಾಬಿ ಸಸಿ ವಿತರಿಸಲಾಯಿತು. ಹಾಗೆಯೇ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು, ಸ್ವಯಂ ಪ್ರೇರಣೆಯಿಂದ ಹಣ ಸಂಗ್ರಹಿಸಿ ವಿಶೇಷಚೇತನರಿಗೆ ತ್ರಿಚಕ್ರ ಸೈಕಲ್ ವಿತರಿಸಿದರು. ನಂತರ ಅಪ್ಪು ಭಾವಚಿತ್ರ ಹಿಡಿದು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಇದನ್ನೂ ಓದಿ | Puneeth Rajkumar: ಅಪ್ಪು… ನಿನ್ನ ನೆನಪುಗಳು ಎಂದಿಗೂ ಅಮರ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಶಿವಣ್ಣ
ಪುನೀತ್ ರಾಜಕುಮಾರ್ ನೆನೆದ ಹಿರಿಯ ನಟ ಹೆಬ್ಳೀಕರ್
ಧಾರವಾಡ: ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಜನ್ಮ ದಿನದಂದು ಹಿರಿಯ ನಟ ಸುರೇಶ ಹೆಬ್ಲೀಕರ್ ಅವರು ಅಪ್ಪು ಅವರನ್ನು ನೆನೆದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಒಬ್ಬ ಒಳ್ಳೆಯ ನಟ. ಅದರಲ್ಲಿ ಸಂಶಯವೇ ಇಲ್ಲ. ಬಹಳಷ್ಟು ಶಾಲೆಗಳಿಗೆ ಹಾಗೂ ಹಲವು ಕಡೆ ಸಹಾಯ ಮಾಡಿದ್ದಾರೆ. ನಾನೂ ಕೂಡ ಈ ಬಗ್ಗೆ ಕೆಲವು ಪುಸ್ತಕದಲ್ಲಿ ಬರೆದಿದ್ದೇನೆ. ರಾಜಕುಮಾರ ಒಬ್ಬ ಪ್ರತಿಭಾವಂತ ಕಲಾವಿದರು. ಅವರ ಮಗ ಪುನೀತ್‌ಗೆ ನಟನೆ ರಕ್ತಗತವಾಗಿ ಬಂದಿತ್ತು. ನಾವು ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ ಹಾಗೂ ಬಾಲೆಖಾನ್ ಅವರನ್ನು ನೆನೆಪಿಸಿಕೊಳ್ಳುತ್ತೇವೆ. ಅದೇ ರೀತಿ ನಟನೆಯಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರು.