ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳೇ ನಿರ್ಮಿಸುತ್ತಿರುವ ಖ್ಯಾತ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಹೊತ್ತ “ಪುನೀತ್’ ಉಪಗ್ರಹವನ್ನು (Puneeth Satellite) ನ.15 ರಿಂದ ಡಿ.31ರ ಒಳಗೆ ಉಡಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಹೇಳಿದ್ದಾರೆ.
ಈ ಉಪಗ್ರಹ ಯೋಜನೆಯ ಪ್ರಗತಿ ಕುರಿತು ವಿಕಾಸಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ” ಶ್ರೀಹರಿಕೋಟಾದಿಂದ ಈ ಉಪ್ರಗಹ ಉಡಾವಣೆಯಾಗಲಿದೆ. ಇದರ ಅಂಗವಾಗಿ ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಮತ್ತು ಆಸಕ್ತಿ ಬೆಳೆಸಲು ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲೆ, ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಅಂತಿಮವಾಗಿ 1 ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉಪಗ್ರಹ ಉಡಾವಣೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲಾಗುವುದು” ಎಂದವರು ತಿಳಿಸಿದ್ದಾರೆ.
ಸ್ಪರ್ಧೆಗಳ ವೇಳಾಪಟ್ಟಿ
ನೋಂದಣಿಗೆ ಕೊನೆ ದಿನ: ಸೆಪ್ಟೆಂಬರ್ 10, ೨೦೨೨
ಜಿಲ್ಲಾ ಮಟ್ಟದ ಕ್ವಿಜ್ ಸ್ಪರ್ಧೆ: ಸೆಪ್ಟೆಂಬರ್ 19ರಿಂದ 23, ೨೦೨೨
ಪ್ರಬಂಧಗಳನ್ನು ಅಪ್‌ಲೋಡ್ ಮಾಡಲು ಕೊನೆ ದಿನ: ಸೆಪ್ಟೆಂಬರ್ 20,೨೦೨೨
ಜಿಲ್ಲಾ ಮಟ್ಟದ ವಿಜ್ಞಾನ ಚಿತ್ರಕಲೆ ಸ್ಪರ್ಧೆ: ಸೆಪ್ಟೆಂಬರ್ 26ರಿಂದ 30
ವಿಭಾಗ ಮಟ್ಟದ ಪೋಸ್ಟರ್ ಸ್ಪರ್ಧೆ: ಅಕ್ಟೋಬರ್ 3ರಿಂದ 7
ಜಿಲ್ಲಾ ಮಟ್ಟದ ಫಲಿತಾಂಶ ಪ್ರಕಟಣೆ: ಅಕ್ಟೋಬರ್ ಮಧ್ಯ ಭಾಗ
ರಾಜ್ಯ ಮಟ್ಟದ ಕ್ವಿಜ್: ಅ.17ರಿಂದ 19
ರಾಜ್ಯ ಮಟ್ಟದ ಪೋಸ್ಟರ್ ಸ್ಪರ್ಧೆ (ಆನ್‌ಲೈನ್): ಅ.18ರಿಂದ 20
ರಾಜ್ಯ ಮಟ್ಟದ ಫಲಿತಾಂಶ ಘೋಷಣೆ: ಅಕ್ಟೋಬರ್ ಕೊನೆಯ ವಾರ
ಸ್ಪರ್ಧೆಯ ಭಾಗವಾಗಿ ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್ ರಸಪ್ರಶ್ನೆ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಪೋಸ್ಟರ್ ರಚನೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಈ ಸಂಬಂಧ ಎಲ್ಲಾ 31 ಜಿಲ್ಲೆಗಳ ಡಿಡಿಪಿಐಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಸ್ವಾತಂತ್ರದ 75ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶಾಲಾ ವಿದ್ಯಾರ್ಥಿಗಳಿಂದಲೇ 75 ಉಪಗ್ರಹಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಘೋಷಿಸಿದ್ದರು. ಈ ಪೈಕಿ, ಬೆಂಗಳೂರು ವಲಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ‘ಕೆಜಿಎಸ್3ಸ್ಯಾಟ್’ ಉಪಗ್ರಹವನ್ನು 1.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಇವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ದಿವಂಗತ ನಟ ಪುನೀತ್ ಅವರ ಸ್ಮರಣಾರ್ಥ ಈ ಉಪಗ್ರಹಕ್ಕೆ ಅವರ ಹೆಸರನ್ನಿಡಲಾಗಿದೆ. ಪ್ರಧಾನಿಯವರ ಕಾರ್ಯಕ್ರಮದಡಿ ಉಡಾವಣೆಗೊಳ್ಳುತ್ತಿರುವ ದೇಶದ ಪ್ರಥಮ ಉಪಗ್ರಹ ಇದಾಗಿದೆ” ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಕೇವಲ ಉಪಗ್ರಹ ಅಭಿವೃದ್ಧಿ ಯೋಜನೆಯಲ್ಲಿ ಪಾಲ್ಗೊಂಡರೆ ಸಾಲದು. ಬದಲಿಗೆ ಬಾಹ್ಯಾಕಾಶ, ಖಗೋಳ ವಿಜ್ಞಾನ, ಅಂತರಿಕ್ಷ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು, ಸಂಭ್ರಮಿಸಬೇಕು ಎನ್ನುವುದು ಸರಕಾರದ ಆಶಯವಾಗಿದೆ. ಹೀಗಾಗಿ ಸ್ಪರ್ಧೆ ಮತ್ತು ವಿಜೇತರಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಸೇರಿದಂತೆ ಇತರ ಹಿರಿಯ ವಿಜ್ಞಾನಿಗಳು ಸಭೆಯಲ್ಲಿ ಹಾಜರಿದ್ದರು.
ಇದನ್ನೂ ಓದಿ| ನವೆಂಬರ್ 1ಕ್ಕೆ ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರದಾನ; ಸಿಎಂ ಬೊಮ್ಮಾಯಿ ಘೋಷಣೆ