ಬಳ್ಳಾರಿ: ನಗರದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 23 ಅಡಿ ಎತ್ತರದ ಪುತ್ಥಳಿ ಶನಿವಾರ ಅನಾವರಣಗೊಂಡಿತು. ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಪ್ಪು ಅವರ 23 ಅಡಿಯ ಪುತ್ಥಳಿಯನ್ನು (Puneeth Rajkumar Statue) ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅವರ ಪತ್ನಿ ಅಶ್ವಿನಿ ಪುನೀತ್ ಭಾವುಕರಾದರು.
ಅಪ್ಪು ಪುತ್ಥಳಿ ಅನಾವರಣಗೊಳಿಸಿದ ಬಳಿಕ ರಾಘವೇಂದ್ರ ರಾಜಕುಮಾರ್ ಅವರು ನೀನೆ ರಾಜಕುಮಾರ ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ಅಶ್ವಿನಿ ಅವರು ಪುನೀತ್ ಅವರನ್ನು ಸ್ಮರಿಸಿಕೊಂಡು ಕಣ್ಣೀರಿಡುತ್ತಾ, ಅಪ್ಪು ಅವರ ಬಗ್ಗೆ ಜನರ ಅಭಿಮಾನ ಕಂಡು ಭಾವುಕರಾದರು.
ಸಂಜೆ 4.30ಕ್ಕೆ ಪುತ್ಥಳಿ ಅನಾವರಣಗೊಳ್ಳಲಿದೆ ಎಂದು ನಿಗದಿತ ಸಮಯಕ್ಕೂ ಮುಂಚಿತವಾಗಿಯೇ ನೂರಾರು ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿದ್ದರು. ಅಪ್ಪು ಭಾವಚಿತ್ರ ಹಿಡಿದು ಅಪ್ಪು ಪರ ಘೋಷಣೆ ಕೂಗುತ್ತಾ, ಡಾ. ರಾಜಕುಮಾರ್ ಹಾಗೂ ಅಪ್ಪು ಅವರ ಹಾಡುಗಳಿಗೆ ಡ್ಯಾನ್ಸ್ ಮಾಡಿದರು.
ಇದನ್ನೂ ಓದಿ | Singer Mangli: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ; ಲಾಠಿ ಚಾರ್ಚ್
ನಿಗದಿತ ಸಮಯಕ್ಕಿಂತ ಸುಮಾರು ಒಂದೂವರೆ ಗಂಟೆ ತಡವಾಗಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತಾದರೂ ಅಭಿಮಾನಿಗಳು ಅಲ್ಲಿಂದ ಕದಲಲಿಲ್ಲ. ರಾಘವೇಂದ್ರ ರಾಜಕುಮಾರ್, ಮಂಗಳಮ್ಮ, ಪುನೀತ್ ಪತ್ನಿ ಅಶ್ವಿನಿ, ಸಚಿವ ಬಿ. ಶ್ರೀರಾಮುಲು ಸೇರಿ ಜನಪ್ರತಿನಿಧಿಗಳು ಆಗಮಿಸಿ ಅಪ್ಪು ಪುತ್ಥಳಿಯನ್ನು ಅನಾವರಣಗೊಳಿಸಿದರು.
ರಾಜ್ ಕುಟುಂಬ ಪುತ್ಥಳಿಯನ್ನು ಅನಾವರಣಗೊಳಿಸಲು ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದರೂ ಪೊಲೀಸ್ ಇಲಾಖೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಭಿಮಾನಿಗಳು ನುಗ್ಗದಂತೆ ಬ್ಯಾರಿಕೇಡ್ ಅಳವಡಿಸದ ಕಾರಣ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.