Site icon Vistara News

ಸರ್ಕಾರಿ ಕಾಲೇಜಲ್ಲಿ ಕೆಂಪು ದಾರ, ಟೈ ಹೊಂದಿದ ವೋಡಾಫೋನ್‌ ಜೂ಼ಜೂ಼ ಬೊಂಬೆ ಪತ್ತೆ; ವಾಮಾಚಾರ ಶಂಕೆ

ವಾಮಾಚಾರದ

ಚಿಕ್ಕಬಳ್ಳಾಪುರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂತ್ರಿಸಿರುವ ಕೆಂಪು ದಾರದೊಂದಿಗೆ ವೋಡಾಫೋನ್‌ ಜೂ಼ಜೂ಼ ಬೊಂಬೆ ಪತ್ತೆಯಾಗಿದ್ದು, ವಾಮಾಚಾರದ ಶಂಕೆ ವ್ಯಕ್ತವಾಗಿದೆ. ಕಾಲೇಜಿಗೆ ಹೊಸ ಪ್ರಾಂಶುಪಾಲರು ಬಂದ ಸಂದರ್ಭದಲ್ಲಿ ಬೊಂಬೆ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ಶಕುಂತಲಾ ಎಂಬುವವರು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸಿಬ್ಬಂದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ದಾರದಿಂದ ಕಟ್ಟಿದ ಪ್ಲಾಸ್ಟಿಕ್ ಬೊಂಬೆ, ಮಂತ್ರಿಸಿದ ಕೆಂಪು ದಾರ ಪತ್ತೆಯಾಗಿದೆ.

ಇದನ್ನೂ ಓದಿ | ಶಾಲೆ ಮುಂಭಾಗದ ರಸ್ತೆಯಲ್ಲಿ ವಾಮಾಚಾರ: ಕೋಳಿ, ನಿಂಬೆ ಕಂಡು ಬೆಚ್ಚಿ ಬಿದ್ದ ಮಕ್ಕಳು!

ಈ ಕಾಲೇಜು ಮೊದಲಿನಿಂದಲೂ ವಿದ್ಯಾರ್ಥಿಗಳು ದಾಖಲಾತಿ, ಪರೀಕ್ಷೆ, ಪ್ರಾಂಶುಪಾಲರ ಅಧಿಕಾರ ಸ್ವೀಕಾರ, ಉಪನ್ಯಾಸಕರ ವರ್ಗಾವಣೆ ಸೇರಿ ನಾನಾ ವಿಚಾರಗಳಿಗೆ ವಿವಾದಕ್ಕೆ ಗುರಿಯಾಗುತ್ತಿದೆ. ಸೇವಾ ಹಿರಿತನದ ಹೆಸರಿನಲ್ಲಿ ಇಲ್ಲಿನ ಉಪನ್ಯಾಸಕರು ನಿರಂತರ ತಗಾದೆ ತೆಗೆಯುವ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ದೀರ್ಘಕಾಲಿಕವಾಗಿ ಕೆಲಸ ಮಾಡುವುದಿಲ್ಲ, ಬೇಗ ವರ್ಗಾವಣೆಯಾಗಿ ಹೋಗುತ್ತಾರೆ. ಹೀಗಾಗಿ ಇಲ್ಲಿ ಬಹುತೇಕ ಪ್ರಭಾರ ಪ್ರಾಂಶುಪಾಲರು ಇರುತ್ತಾರೆ. ಇದರ ನಡುವೆ ಹೊಸ ಪ್ರಾಂಶುಪಾಲರು ಬಂದ ಸಂದರ್ಭದಲ್ಲಿ ಬೊಂಬೆ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಪ್ರಮೋಷನ್ ಇಲ್ಲವೇ ಯಾರಾದರೂ ಉನ್ನತ ಹುದ್ದೆಗೆ ಬಂದರೆ ಕೆಲಸ ಮಾಡದೇ ಭಯದಲ್ಲಿ ವಾಪಸ್ ಹೋಗಲಿ ಎಂಬ ಕುತಂತ್ರದಿಂದ ಮಾಟ-ಮಂತ್ರ ಮಾಡಿಸಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೂತನ ಪ್ರಾಂಶುಪಾಲೆ ಶಕುಂತಲಾ, “ಇಲ್ಲಿ ಯಾವ ಕಾರಣಕ್ಕೆ ಬೊಂಬೆಯನ್ನು ಇಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಆದರೆ, ಒಂದು ವೇಳೆ ಯಾರಾದರೂ ಬೆದರಿಸುವ ಉದ್ದೇಶದಿಂದ ಈ ಕೆಲಸ ಮಾಡಿದ್ದರೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲೇಜಿನ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ತಿಳಿಸಿದ್ದಾರೆ.

ಜಾಹೀರಾತಿನಲ್ಲಿ ಜೂ಼ ಜೂ಼ ಗೊಂಬೆ ಫೇಮಸ್‌

ವೋಡಾಫೋನ್‌ ಟೆಲಿಕಾಂ ಸಂಸ್ಥೆಯ ಕೆಲವು ವರ್ಷಗಳ ಹಿಂದಿನ ಜಾಹೀರಾತುಗಳಲ್ಲಿ ಜೂ಼ ಜೂ಼ ಗೊಂಬೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದವು. ಈ ಸಂಬಂಧ ಹಲವಾರು ರೀತಿಯ ಮೀಮ್ಸ್‌ಗಳು ಸೇರಿದಂತೆ ಇನ್ನಿತರ ಕಾರ್ಟೂನ್‌ಗಳು ಸಹ ಸೋಷಿಯಲ್‌ ಮೀಡಿಯಾಗಳಲ್ಲಿ ಗಮನಸೆಳೆದಿದ್ದವು. ಅಲ್ಲದೆ, ಅದೇ ಮಾದರಿಯ ಗೊಂಬೆಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಈಗ ಆ ಗೊಂಬೆಯನ್ನೇ ಮಾಟಕ್ಕೆ ಬಳಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Covid 19 Vaccine | 75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್‌ ಡೋಸ್‌: ಸಚಿವ ಸುಧಾಕರ್‌

Exit mobile version