ತೀರ್ಥಹಳ್ಳಿ: ಸಾವಯವ ಕೃಷಿಯ ಹರಿಕಾರ ‘ಕೃಷಿ ಋಷಿ’ ದಿವಂಗತ ಪುರುಷೋತ್ತಮ ರಾಯರು ಹಾಗೂ ಅವರ ಧರ್ಮ ಪತ್ನಿ ಶಾಂತಾ ಪುರುಷೋತ್ತಮ ರಾಯರ ನೆನಪಿನಲ್ಲಿ “ಪುರುಷೋತ್ತಮ ಸನ್ಮಾನ” (Purushothama Sanmana) ಕಾರ್ಯಕ್ರಮವು ನಗರದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜ.27ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.
ತೀರ್ಥಹಳ್ಳಿಯ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಸಾಧಕರಾಗಿರುವ ಗುಜರಾತ್‌ನ ಧನುಬೆನ್ ಮತ್ತು ಮಗನ್ ಭಾಯ್ ಕುಟುಂಬವನ್ನು ಸನ್ಮಾನಿಸಲಾಗುವುದು. ಪ್ರತಿಷ್ಠಾನದ ಅಧ್ಯಕ್ಷ ವರದಾಚಾರ್ ಎಸ್. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ ಭಾಗವಹಿಸುವರು. ಪ್ರತಿಷ್ಠಾನದ ಉಪಾಧ್ಯಕ್ಷರೂ ಆದ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತರಿರುವರು. ಅಂದು ಸಾವಯವ ಕೃಷಿ ಉತ್ಪನ್ನಗಳು, ಪುಸ್ತಕಗಳು, ದೇಸಿ ಬೆಳೆ ಬೀಜಗಳ ಪ್ರದರ್ಶನ ಇರುತ್ತದೆ.
ಈ ಕಾರ್ಯಕ್ರಮಕ್ಕೆ ಕೃಷಿ ಪ್ರಯೋಗ ಪರಿವಾರ, ಸಾವಯವ ಕೃಷಿ ಪರಿವಾರ, ಸುಭಿಕ್ಷಾ ಆರ್ಗಾನಿಕ್ ಫಾರ್ಮ್ಸ್ ಮಲ್ಟಿಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಲಿ. ಹಾಗೂ ರಾಜ್ಯದ ವಿವಿಧ ತಾಲೂಕಿನ ಸಾವಯವ ಕೃಷಿ ಪರಿವಾರಗಳು ಸಹಕಾರ ನೀಡುತ್ತಿವೆ. ಈ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಸಾವಯವ ಕೃಷಿಕರು ಹಾಗೂ ಗ್ರಾಹಕರು ಆಗಮಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ವರದಾಚಾರ್ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದ್ದಾರೆ.
ಇದನ್ನೂ ಓದಿ | Stray Cattle : ಬೆಂಗಳೂರು ವಾಹನ ಸವಾರರಿಗೆ ಬಿಡಾಡಿ ದನಗಳ ಕಾಟ: ರಸ್ತೆಯಲ್ಲಿ ದನಗಳು ಕಂಡರೆ ಈ ಸಂಖ್ಯೆಗೆ ಕರೆ ಮಾಡಿ
ಪ್ರತಿಷ್ಠಾನದ ಕಿರು ಪರಿಚಯ
ತೀರ್ಥಹಳ್ಳಿಯ ಕೃಷಿ ಋಷಿ ದಿ. ಪುರುಷೋತ್ತಮ ರಾಯರು ಸಾವಯವ ಕೃಷಿಯ ಪ್ರಯೋಗ, ಪ್ರಚಾರಾಂದೋಲನದ ನೇತೃತ್ವ ವಹಿಸಿಕೊಂಡವರು. ಅವರ ಪ್ರೇರಣೆಯಿಂದ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ರೈತರ ಸಂಖ್ಯೆ ನೂರಾರು. ಅವರು ತಮ್ಮ ಕರ್ಮಭೂಮಿ ‘ಕೃಷಿ ನಿವಾಸ’ವನ್ನು ಸಾವಯವ ಕೃಷಿಯಲ್ಲಿ ಪ್ರಯೋಗ, ಪ್ರಚಾರ ಮತ್ತು ಶಿಕ್ಷಣ ಕಾರ್ಯಗಳಿಗಾಗಿ ಮೀಸಲಿಟ್ಟಿವರಾಗಿದ್ದರು. 1998ರಲ್ಲಿ ವಿಧಿವಶರಾದರು. ಹೀಗಾಗಿ ಅವರ ಆಶಯದಂತೆ 1999ರಲ್ಲಿ ಅಸ್ತಿತ್ವಕ್ಕೆ ಬಂದ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನವು ಕಳೆದ 24 ವರ್ಷಗಳಿಂದ ಸಾವಯವ ಕೃಷಿ ಮತ್ತು ಗ್ರಾಮ ವಿಕಾಸಗಳಿಗೆ ಪೂರಕವಾಗುವ ಪ್ರಯೋಗ, ಪ್ರಚಾರ, ಪ್ರಕಾಶನ ಹಾಗೂ ಶಿಕ್ಷಣ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಷ್ಠಾನವು ಪ್ರತಿ ವರ್ಷ ಶ್ರೀ ಪುರುಷೋತ್ತಮ ರಾವ್ ಹಾಗೂ ಶ್ರೀಮತಿ ಶಾಂತಾ ಪುರುಷೋತ್ತಮ ರಾವ್ ದಂಪತಿಗಳ ಸವಿ ನೆನಪಿನಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕೃಷಿಕ ದಂಪತಿಗೆ ಅಥವಾ ಸಂಸ್ಥೆಗೆ ‘ಪುರುಷೋತ್ತಮ ಸನ್ಮಾನ’ವನ್ನು ನೀಡಿ ಗೌರವಿಸುತ್ತಿದೆ.
ಇದನ್ನೂ ಓದಿ |Viral Video : ಐದು ವರ್ಷ ಬಾಲಕನೇ ಪೊಲೀಸರಿಗೆ ಮುಖ್ಯಸ್ಥ! ವೈರಲ್ ಆಯ್ತು ಈ ವಿಶೇಷ ವಿಡಿಯೊ
ಪುರುಷೋತ್ತಮ ಸನ್ಮಾನಕ್ಕೆ ಭಾಜನರಾದವರ ಕಿರು ಪರಿಚಯ
ಭೂಮಿಯನ್ನು ತಾಯಿಯಂತೆ ಕಾಣುವುದು ಎಂದರೇನು ಎಂಬ ಪ್ರಶ್ನೆಗೆ ಉತ್ತರ ಎನ್ನುವಂತೆ ಬದುಕುತ್ತಿರುವ ಅಪರೂಪದ ರೈತ ಕುಟುಂಬ ಧನುಬೆನ್ ಮತ್ತು ಮಗನ್ ಭಾಯ್ ಅವರದು. ಗುಜರಾತ್‌ನ ಕಟ್ ಜಿಲ್ಲೆಯಲ್ಲಿನ ಅಂಜ ತಾಲೂಕಿನ ನಿಂಗಲ್ ಗ್ರಾಮದಲ್ಲಿ ಇವರು ತಮ್ಮ ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಈ ಪರಿವಾರವು ಭೂಮಿಗೆ ಕಿಂಚಿತ್ತೂ ವಿಷವುಣಿಸದೇ ಮರುಭೂಮಿ ಸೆರಗಿನ ಜವುಳು ಭೂಮಿಯಲ್ಲಿ ಅಕ್ಷರಶಃ ಚಿನ್ನದ ಬೆಳೆ ತೆಗೆಯುತ್ತಿದೆ. ಪರಿಸರ ಸ್ನೇಹಿ ಬೆಳೆ ಪದ್ಧತಿ, ಹೈನುಗಾರಿಕೆ, ಸಾವಯವ ಗೊಬ್ಬರ ಬಳಕೆ, ದೇಸಿ ತಳಿಗಳ ಬಳಕೆ, ನೀರಿನ ಸದ್ಬಳಕೆ.. ಹೀಗೆ ರೈತರ ಬದುಕಿನ ಭಾಗವಾಗಿರುವ ಎಷ್ಟೋ ಜಿಜ್ಞಾಸೆಗಳಿಗೆ ಇವರ ಕೃಷಿಯಲ್ಲಿ ಉತ್ತರವಿದೆ. ಕಠಿಣ ಪರಿಶ್ರಮ, ನಂಬಿದ ತತ್ತ್ವದ ಶ್ರದ್ಧೆಯ ಪಾಲನೆ ಈ ಕುಟುಂಬವನ್ನು ಇತರ ರೈತ ಕುಟುಂಬಗಳಿಗಿಂತ ಭಿನ್ನ ಎನ್ನುವಂತೆ ಮಾಡಿದೆ.
ಇದನ್ನೂ ಓದಿ | Congress Protest : ರಸ್ತೆ ಗುಂಡಿಗಳ ರಾಜಧಾನಿ ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ