Site icon Vistara News

Yakshagana Performance: ಆ.26ರಂದು ಬೆಂಗಳೂರಿನಲ್ಲಿ ʼರಾಘವ ರಾಘವ ರಾಜಾ ರಾಘವʼ ಯಕ್ಷಗಾನ ಪ್ರದರ್ಶನ

Yakshagana in bangalore

ಬೆಂಗಳೂರು: ಧಾರ್ಮಿಕ್‌ ಸಂಸ್ಥೆಯ ಸಂಯೋಜನೆಯಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಅವರ ಉಪಸ್ಥಿತಿಯಲ್ಲಿ ಆಗಸ್ಟ್‌ 26ರಂದು ರಾತ್ರಿ 10ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ʼರಾಘವ ರಾಘವ ರಾಜಾ ರಾಘವʼ ಯಕ್ಷಗಾನ ಪ್ರದರ್ಶನ (Yakshagana Performance) ಆಯೋಜಿಸಲಾಗಿದೆ.

ಪ್ರಥಮ ಬಾರಿಗೆ ಪೆರ್ಡೂರು ಮೇಳದ ರಂಗದಲ್ಲಿ ಬಳ್ಕೂರು ಕೃಷ್ಣಯಾಜಿ ಅವರ ದಶರಥ ಗತ್ತು ಗಾಂಭೀರ್ಯ, ಕೊಂಡದ ಕುಳಿಯವರ ರಾವಣ ಶೃಂಗಾರ ಭರಿತ ಪಟ್ಟಾಭಿಷೇಕ, ರಾಘವನಾಗಿ ತೋಟಿ ಮನೆ, ಯಕ್ಷ ಸಿಂಹ ಥಂಡಿಮನೆಯವರ ರಾಜಾ ರಾಘವ; ಕೊಳಗಿ, ಜನ್ಸಾಲೆ, ಬಾಳ್ಕಲರ ಗಾನ ರಸಧಾರೆ, ಕಡಬಾಳ, ತೊಂಬಟ್ಟು, ಕಾರ್ತಿಕ, ಬೆಡೊಳ್ಳಿಯವರ ವಿವಿಧ ಪಾತ್ರ ವಿನ್ಯಾಸ, ಯಲಗುಪ್ಪ, ಉಪ್ಪೂರು, ಸುಕುಮಾರ್‌ ಅವರ ಮನಮೋಹನ ಸ್ತ್ರೀ ಭೂಮಿಕೆ, ರವೀಂದ್ರ, ಮೂಡ್ಕಣಿಯವರ ಹಾಸ್ಯ ರಸಾಯನ, ಸುನೀಲ್‌ ಭಂಡಾರಿ, ಅಕ್ಷಯ್‌, ರಾಕೇಶ್‌ ಮಲ್ಯ, ಪ್ರಜ್ವಲ್ ಅವರ‌ ಚಂಡೆ ಮದ್ದಳೆಗಳ ನಿನಾದವಿರಲಿದೆ.

ರಾಘವ ಯಕ್ಷಗಾನ ಪ್ರದರ್ಶನದಲ್ಲಿ ದಶರಥನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬಳ್ಳೂರು ಕೃಷ್ಣಯಾಜಿ, ರಾಘವನಾಗಿ ಗಣಪತಿ ಹೆಗಡೆ ತೋಟಿಮನೆ, ಕೈಕೆಯಾಗಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಲಕ್ಷ್ಮಣನಾಗಿ ಕಾರ್ತಿಕ್ ಚಿಟ್ಟಾಣಿ, ಮಂಥರೆಯಾಗಿ ರವೀಂದ್ರ ದೇವಾಡಿಗ, ಸೀತೆಯಾಗಿ ಸುಕುಮಾರ್‌ ನೀರ್ಜೆಡ್ಡು,‌ ಕೌಸಲ್ಯೆಯಾಗಿ ಶ್ರೀಧರ್‌ ಕುಡ್ಲ ಅವರು ಅಭಿನಯಿಸಲಿದ್ದಾರೆ.

ರಾಘವ ಯಕ್ಷಗಾನ ಪ್ರಸಂಗದಲ್ಲಿ ರಾವಣನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ರಾಘವನಾಗಿ ವಿನಯ್ ಭಟ್ ಬೆರೊಳ್ಳಿ, ಮಂಡೋದರಿಯಾಗಿ ಸುಧೀರ್‌ ಸೇರ್ವೆಗಾರ್‌ ಉಪ್ಪೂರು, ಮಾತಲಿಯಾಗಿ ದರ್ಶನ್‌ ಭಟ್‌ ಭಾಗವಹಿಸಲಿದ್ದಾರೆ.

ರಾಜಾ ರಾಘವ ಯಕ್ಷಗಾನ ಪ್ರಸಂಗದಲ್ಲಿ ರಾಜಾ ರಾಘವನಾಗಿ ಥಂಡಿಮನೆ ಶ್ರೀಪಾದ್ ಭಟ್, ಲವನಾಗಿ ಉದಯ ಹೆಗಡೆ ಕಡಬಾಳ, ಕುಶನಾಗಿ ವಿಶ್ವನಾಥ ಆಚಾರ್ಯ ತೊಂಬಟ್ಟು, ಶತ್ರುಘ್ನನಾಗಿ ಅಣ್ಣಪ್ಪ ಗೌಡ ಮಾಗೋಡು, ವಾಲ್ಮೀಕಿಯಾಗಿ ದರ್ಶನ್ ಭಟ್, ಮಾಣಿಯಾಗಿ ಪುರಂದರ ಮೂಡ್ಕಣಿ ಬಣ್ಣ ಹಚ್ಚಲಿದ್ದಾರೆ.

ಇದನ್ನೂ ಓದಿ | Job Fair: ಆ.26ರಂದು ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಬೆಂಗಳೂರಿನಲ್ಲಿ ಉದ್ಯೋಗ ಮೇಳ

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ʼರಾಘವ ರಾಘವ ರಾಜಾ ರಾಘವʼ ಯಕ್ಷಗಾನ ಪ್ರದರ್ಶನ ವೀಕ್ಷಿಸಲು ಪ್ರವೇಶ ಉಚಿತವಿರಲಿದ್ದು, ಯಕ್ಷಗಾನ ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಧಾರ್ಮಿಕ್‌ ಸಂಸ್ಥೆ ಸದಸ್ಯರು ಹಾಗೂ ರಾಘವೇಂದ್ರ ಆಚಾರ್ಯ ಜನ್ಸಾಲೆ ಯಕ್ಷಾಭಿಮಾನಿ ಬಳಗ ಮನವಿ ಮಾಡಿದೆ.

Exit mobile version