Site icon Vistara News

Raghaveswara Swamiji | ಕುದುರೆ ಸವಾರಿಯಿಂದ ಆತ್ಮವಿಶ್ವಾಸ : ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

Raghaveswara Swamiji Gokarna Vishnugupta Vishwa Vidyapeetha

ಕಾರವಾರ: ಕುದುರೆ ಸವಾರಿ ನಮ್ಮ ಜೀವನಕ್ಕೆ ಆತ್ಮವಿಶ್ವಾಸ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕುದುರೆ ಸವಾರಿಯಲ್ಲಿ ವೇಗ ಎಷ್ಟು ಮುಖ್ಯವೋ ನಿಯಂತ್ರಣ ಹಾಗೂ ಪ್ರೀತಿ ಕೂಡ ಅಷ್ಟೇ ಮುಖ್ಯ. ಇವು ನಮ್ಮ ಬದುಕಿಗೆ ಮಾರ್ಗದರ್ಶಿ ತತ್ತ್ವಗಳೂ ಆಗಿವೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveswara Swamiji) ನುಡಿದರು.

ಕುಮಟಾ ತಾಲೂಕಿನ ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಭಿವೃದ್ಧಿಪಡಿಸಿರುವ ಅಶ್ವಶಾಲೆ ‘ಪದಲಯ’ ಲೋಕಾರ್ಪಣೆ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಬದುಕು ಕೂಡ ಒಂದು ಕುದುರೆ ಇದ್ದಂತೆ. ಆ ಕುದುರೆಯನ್ನು ಏರಿ ಸವಾರಿ ಮಾಡಬೇಕು. ಅದಕ್ಕೆ ಸೂಕ್ತ ತಯಾರಿ ಇಲ್ಲದಿದ್ದರೆ ಪತನವಾಗುತ್ತದೆ. ಆ ಆತ್ಮವಿಶ್ವಾಸವನ್ನು ಕುದುರೆ ಸವಾರಿ ನಮಗೆ ನೀಡುತ್ತದೆ. ಜೀವನವನ್ನು ಪ್ರೀತಿ ಮಾಡುವ ಮಹತ್ವವನ್ನೂ ಇದು ಕಲಿಸಿ ಕೊಡುತ್ತದೆ ಎಂದು ಬಣ್ಣಿಸಿದರು. ಜೀವನವನ್ನು ಕೂಡ ಪ್ರೀತಿಯಿಂದ ನಿಯಂತ್ರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ | NASA | ಚಂದ್ರನ ಮೇಲೂ ಹಕ್ಕು ಸಾಧಿಸಲು ಹವಣಿಸುತ್ತಿದೆ ಚೀನಾ: ನಾಸಾ ಮುಖ್ಯಸ್ಥ ಆರೋಪ

ವಿವಿವಿ ಪರಿಪೂರ್ಣತೆಯ ಕಡೆಗೆ ದಾಪುಗಾಲಿಡುತ್ತಿದೆ. ವಿದ್ಯಾರ್ಥಿಗಳಿಗೆ ಅಶ್ವಾರೋಹಣ ಬೋಧಿಸುವ ಸಲುವಾಗಿ ಅಭಿವೃದ್ಧಿಪಡಿಸಲಾದ ಅಶ್ವಶಾಲೆ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಎಂದು ಹೇಳಿದರು. ಕುದುರೆಯ ಚಲನೆ ಲಯಬದ್ಧವಾಗಿರುತ್ತದೆ. ಸಂಗೀತ, ನೃತ್ಯದಂತೆ ಅಶ್ವಾರೋಹ ಕೂಡ ಒಂದು ಅಪೂರ್ವ ವಿದ್ಯೆ. ನೃತ್ಯಕ್ಕೆ ಲಯ ಮುಖ್ಯ; ಆದರೆ ಕುದುರೆಗಳಿಗೆ ಸಹಜವಾಗಿಯೇ ಈ ಲಯ ಇರುತ್ತದೆ. ಅಶ್ವಗಳ ಕುರಿತ ಈ ಅಪೂರ್ವ ವಿಜ್ಞಾನವನ್ನು ಮಕ್ಕಳಿಗೆ ಕಲಿಸುವುದು ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ | Kannada Sahitya Sammelana | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆ; ಕನಕದಾಸರ ಕೋಟೆ ಮಾದರಿ ವೇದಿಕೆ

ನಮ್ಮ ಪುರಾಣಗಳಲ್ಲಿ ಕಾರ್ತವೀರ್ಯಾರ್ಜುನ, ಲಕ್ಷ್ಮಣ, ನಳ ಚಕ್ರವರ್ತಿಯಂಥ ಅಪೂರ್ವ ಅಶ್ವಾರೋಹಿಗಳು ಕಾಣಸಿಗುತ್ತಾರೆ. ಅಶ್ವಾರೋಹದಲ್ಲಿ ವೇಗ ಹಾಗೂ ಕುದುರೆಯ ನಿಯಂತ್ರಣ ಎರಡೂ ಮುಖ್ಯ. ವೇಗಕ್ಕೆ ದಿಕ್ಕು ನೀಡಿದಾಗ ಗುರಿ ತಲುಪಲು ಸಾಧ್ಯ. ಅಶ್ವಗಳಿಗೆ ಪ್ರೀತಿ ಕೂಡ ಅತ್ಯಂತ ಮುಖ್ಯ. ಪ್ರೀತಿಯಿಂದ ನಿಯಂತ್ರಿಸಬೇಕು. ನಮ್ಮ ಇಚ್ಛೆ ಪ್ರಕಾರ ಕುದುರೆಯನ್ನು ಓಡಿಸುವ ಕಲೆಯೇ ಅಶ್ವಾರೋಹ ಎಂದು ವಿಶ್ಲೇಷಿಸಿದರು.

ಜಗತ್ತಿನ ಯಾವುದೇ ವಾಹನಗಳಿಗಿಂತ ಹೆಚ್ಚು ಬೆಲೆ ಬಾಳುವಂಥದ್ದು ಕುದುರೆ. ಅದಕ್ಕೆ ಹಣದಿಂದ ಬೆಲೆ ಕಟ್ಟಲಾಗದು. ಅದು ಅಮೂಲ್ಯ. ಇದನ್ನು ಯುವ ಜನಾಂಗ ಅರ್ಥ ಮಾಡಿಕೊಳ್ಳಬೇಕು. ವಿಶ್ವವಿದ್ಯಾಪೀಠಕ್ಕೆ ಗೋವುಗಳು ಕಣ್ಣಿದ್ದಂತೆ; ಅಶ್ವಶಾಲೆ ಕಾಲುಗಳಿದ್ದಂತೆ. ನಮ್ಮ ಚಲನೆಯ ಸಂಕೇತ ಎಂದರು.

ಇದನ್ನೂ ಓದಿ | M Rudresh | ಚಾಮರಾಜನಗರದ ವಿವಿಧ ಮಠಗಳಿಗೆ ಕೆಆರ್‌ಐಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಭೇಟಿ

ವಿದ್ಯಾರ್ಥಿಗಳು ಈ ಅಶ್ವಶಾಲೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಪ್ರಕೃತಿಯ ಬಗ್ಗೆ, ನೆಲ- ಜಲ, ಪ್ರಾಣಿ- ಪಕ್ಷಿಗಳು ಹೀಗೆ ಪ್ರತಿಯೊಂದರ ಬಗ್ಗೆಯೂ ಆಸಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ಮಾಡಿದರು.

ಕರ್ನಾಟಕ ಇಂಡೀಜೀನಿಯಸ್ ಹಾರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಲಕ್ಷ್ಮೀಕಾಂತರಾಜ್ ಅರಸ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಮೇಖಲಾ ಕಾಗ್ಲಿ ಕೆ, ಖಜಾಂಚಿ ಎಂ.ಅಶ್ವಿನ್, ಕಾನೂನು ವಿಭಾಗದ ಸಚಿನ್ ಎಸ್.ಈರೇಶನವರ್, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವ್ಯವಸ್ಥಾಪಕ ಮನು, ರವಿಶಂಕರ್ ಕಡತೋಕ ಉಪಸ್ಥಿತರಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲದ ವಿದ್ಯಾರ್ಥಿಗಳಿಗೆ ಕುದುರೆ ಸವಾರಿ ಅಭ್ಯಾಸಕ್ಕಾಗಿ (ಅಶ್ವಾರೋಹ) ಈ ಅಶ್ವಶಾಲೆ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಶ್ರೀಗಳು ಆಹಾರ ಸ್ವೀಕರಿಸುತ್ತಿಲ್ಲ, ಆಸ್ಪತ್ರೆಗೆ ಶಿಫ್ಟ್‌ ಆಗಲು ಒಪ್ಪುತ್ತಿಲ್ಲ: ವೈದ್ಯ ಪಾಟೀಲ್‌

Exit mobile version