Site icon Vistara News

ನಿಮ್ಮ ಪ್ರೀತಿಯ ನಾಯಕ ಬಾಲಿವುಡ್​ ನಟಿಯಿಂದ ಗುಲಾಬಿ ಸ್ವೀಕರಿಸಲಿಲ್ಲವೇ?-ಕಾಂಗ್ರೆಸ್​ಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಅಣ್ಣಾಮಲೈ

Rahul Gandhi

#image_title

ನವ ದೆಹಲಿ: ಕರ್ನಾಟಕದಲ್ಲಿ ಖ್ಯಾತ ನಟ ಕಿಚ್ಚ ಸುದೀಪ್​ (Kichcha Sudeep)ಅವರು ಬಿಜೆಪಿಗೆ ಬೆಂಬಲ ನೀಡಿ, ಪಕ್ಷದ ಸ್ಟಾರ್​ ಪ್ರಚಾರಕರಾದ ಬೆನ್ನಲ್ಲೇ, ಕಾಂಗ್ರೆಸ್​ ಪಕ್ಷ ಬಿಜೆಪಿ ಮತ್ತು ಬಸವರಾಜ ಬೊಮ್ಮಾಯಿಯವರ ವಿರುದ್ಧ ವ್ಯಂಗ್ಯವಾಡಿತ್ತು. ‘ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಇತರ ನಾಯಕರ ಮಾತುಗಳನ್ನು ಜನರು ಕೇಳುತ್ತಿಲ್ಲ. ಹೀಗಾಗಿ ಜನರ ಗಮನ ಸೆಳೆಯಲು ಬಿಜೆಪಿ ಪಕ್ಷವು ಈಗ ಸಿನಿಮಾ ತಾರೆಯರನ್ನು ಕರೆತಂದಿದೆ. ರಾಜಕಾರಣಿಗಳ ಹಣೆಬರಹವನ್ನು ನಿರ್ಧರಿಸುವುದು ಚಿತ್ರತಾರೆಯರಲ್ಲ, ಜನರು’ ಎಂದು ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೇವಾಲಾ ಟ್ವೀಟ್​ ಮಾಡಿದ್ದರು.

ಸುರ್ಜೇವಾಲಾ ಅವರ ಈ ಮಾತಿಗೆ ಈಗ ಬಿಜೆಪಿ ತಿರುಗೇಟು ಕೊಟ್ಟಿದೆ. ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಪ್ರತಿಕ್ರಿಯೆ ನೀಡಿ, ‘ಸಿನಿಮಾ ತಾರೆಯರನ್ನು ಕರೆತರುವುದರಲ್ಲಿ ತಪ್ಪೇನಿದೆ. ನಿಮ್ಮ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ನಟಿ ಸ್ವರಾ ಭಾಸ್ಕರ್ ಅವರು ನೀಡಿದ ಕೆಂಪುಗುಲಾಬಿಯನ್ನು ಸ್ವೀಕರಿಸಲಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಸುರ್ಜೇವಾಲಾ ಅವರನ್ನು ಟ್ಯಾಗ್ ಮಾಡಿ, ಟ್ವೀಟ್​ ಮಾಡಿದ ಕೆ.ಅಣ್ಣಾಮಲೈ ರಾಹುಲ್​ ಗಾಂಧಿಯವರಿಗೆ ನಟಿ ಸ್ವರಾ ಭಾಸ್ಕರ್​ ಅವರು ಕೆಂಪು ಗುಲಾಬಿ ನೀಡುತ್ತಿರುವ ಮತ್ತು ಅದನ್ನು ರಾಹುಲ್ ಗಾಂಧಿ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ‘ನಿಮ್ಮ ಪ್ರೀತಿಯ ನಾಯಕ ರಾಹುಲ್ ಗಾಂಧಿಯವರು ನಟಿಯೊಬ್ಬಳಿಂದ ಗುಲಾಬಿ ಹೂವು ಪಡೆದಿಲ್ಲವೇ, ಅದೂ ಕೂಡ ಅವರು ದೇಶ ವಿರೋಧಿ ಸಂಗತಿಗಳನ್ನು ಬೆಂಬಲಿಸುವುದರಲ್ಲಿ ಕುಖ್ಯಾತರು. ಈಗ ಮನರಂಜನಾ ಇಂಡಸ್ಟ್ರಿಯಲ್ಲಿರುವ ರಾಷ್ಟ್ರೀಯವಾದಿಗಳು ಬಿಜಪಿಯೊಂದಿಗೆ ಧ್ವನಿಗೂಡಿಸುತ್ತಿರುವುದರಿಂದ ನೀವು ಗಲಿಬಿಲಿಗೊಂಡಿದ್ದೀರಿ’ ಎಂದು ಅಣ್ಣಾಮಲೈ ಟ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ.

2019ರಲ್ಲಿ ಕಿಚ್ಚ ಸುದೀಪ್​ ಅವರ ಮನೆಯನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಆ ಬಗ್ಗೆ ಮಾತಾಡಿದ್ದ ಸುರ್ಜೇವಾಲಾ, ‘ಚಿತ್ರತಾರೆಯರು ತಮಗೆ ಇಷ್ಟಬಂದ ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ವಸ್ವತಂತ್ರರು. ಆದರೆ ಕೆಲವೊಮ್ಮೆ ಐಟಿ, ಇಡಿ ವಿಚಾರವನ್ನೇ ಪ್ರಮುಖವಾಗಿ ಇಟ್ಟುಕೊಂಡು ರಾಜಕೀಯ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ’ ಎಂದೂ ಛೇಡಿಸಿದ್ದರು. ಇನ್ನು ಸುದ್ದಿಗೋಷ್ಠಿ ವೇಳೆ ಕಿಚ್ಚ ಸುದೀಪ್​ ಅವರಿಗೆ ಮಾಧ್ಯಮದವರೂ ಈ ಪ್ರಶ್ನೆ ಕೇಳಿದ್ದರು. ಅದಕ್ಕೆ ದೊಡ್ಡದಾಗಿ ನಕ್ಕಿದ್ದ ಕಿಚ್ಚ ಸುದೀಪ್ ‘ನನ್ನ ಮನೆಯಲ್ಲಿ ಐಟಿ ಪರಿಶೀಲನೆಯಾಗಿದ್ದಕ್ಕೆ, ನಾನು ಮಾಡಿದ್ದ ತಪ್ಪೇ ಕಾರಣ. ಅದಕ್ಕೂ, ನಾನು ಬಿಜೆಪಿಗೆ ಬೆಂಬಲಿಸುತ್ತಿರುವುದಕ್ಕೂ ಸಂಬಂಧವೇ ಇಲ್ಲ’ ಎಂದಿದ್ದರು.

Exit mobile version