Site icon Vistara News

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

500 Rs deposit in the name of new admission children by old students of Government Kannada School Lingasugur

ರಾಯಚೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಮುಂದಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವು, 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ ಇಡುವುದರ ಜತೆಗೆ ಶಾಲಾ ಬ್ಯಾಗ್ ವಿತರಿಸಿ ಗಮನ ಸೆಳೆದಿದೆ. ಈ ಮೂಲಕ ಸರ್ಕಾರಿ ಶಾಲೆಯತ್ತ ಮಕ್ಕಳನ್ನು ಸೆಳೆಯಲು ವಿನೂತನ ಪ್ರಯತ್ನಕ್ಕೆ (Raichur News) ಮುಂದಾಗಿದೆ.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ದೇವರಭೂಪುರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವು, ಈ ವಿನೂತನ ಕಾರ್ಯಕ್ಕೆ ಮುಂದಾಗಿದೆ. ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದಿಂದ ವಿನೂತನ ಯೋಜನೆಗಳನ್ನು ಹಾಕಿಕೊಳ್ಳಲಾಯಿತು.

ಇತ್ತೀಚೆಗೆ ಕುಸಿದಿದ್ದ ಮಕ್ಕಳ ದಾಖಲಾತಿ ಸಂಖ್ಯೆ

70ರ ದಶಕದಲ್ಲಿ ಸ್ಥಾಪನೆಯಾದ ದೇವರಭೂಪುರ ಸರ್ಕಾರಿ ಕನ್ನಡ ಶಾಲೆಯಲ್ಲಿ ಆರಂಭದಲ್ಲಿ ಇದ್ದಂತಹ ಉತ್ಸಾಹ ಬಳಿಕ ಕಳೆ ಗುಂದಿತ್ತು. 1ನೇ ತರಗತಿಯಿಂದ 8ನೇ ತರಗತಿವರೆಗೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ‌ ಶಾಲೆಯು ಶಿಕ್ಷಕರು ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕುಸಿದಿದೆ. ಮತ್ತೊಂದು ಕಡೆ ಶಾಲೆಗೆ ದಾಖಲಾದರೂ ಮಕ್ಕಳು ತರಗತಿಗಳ ಕಡೆಗೆ ಮುಖ ಮಾಡುತ್ತಿಲ್ಲ.

ಇದನ್ನೂ ಓದಿ: Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

ಹೀಗಾಗಿ ಅವನತಿಯತ್ತ ಸಾಗುತ್ತಿರುವ ಸರ್ಕಾರಿ ಶಾಲೆ ಉಳಿವಿಗೆ ಅದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು “ಹಳೇ ಬೇರು ಹೊಸ ಚಿಗುರು” ಎಂಬ ಹೆಸರಿನಲ್ಲಿ ಸಂಘವೊಂದನ್ನು ಸ್ಥಾಪಿಸಿಕೊಂಡು ಮರಳಿ ಮಕ್ಕಳನ್ನು ಶಾಲೆಯತ್ತ ಸೆಳೆಯಲು ಮತ್ತು ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಳ ಮಾಡಲು ನಾನಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಭಾಗವಾಗಿ ಇಂದು ಹೊಸದಾಗಿ ಒಂದನೇ ತರಗತಿಗೆ ದಾಖಲಾತಿ ಪಡೆದ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಿ, ಒಂದೊಂದು ಮಗುವಿನ ಹೆಸರಲ್ಲಿ 500 ರೂಪಾಯಿ ಠೇವಣಿ ಇಡುವ ಕೆಲಸ ಮಾಡಲಾಯಿತು.

ಅಲ್ಲದೇ ಇನ್ನು ಮುಂದೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ತರಬೇತಿ ಕಾರ್ಯಾಗಾರ ಸಂಘಟಿಸುವುದು. ಶಾಲೆಯ ಸ್ಮಾರ್ಟ್ ಕ್ಲಾಸ್‌ಗೆ ಸಿದ್ಧತೆ, ಡಿಜಿಟಲ್ ಗ್ರಂಥಾಲಯ ಸೌಕರ್ಯ, ಸುಸಜ್ಜಿತ ಆಟದ ಮೈದಾನ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ದಾನಿಗಳ ನೆರವಿನೊಂದಿಗೆ ಶಾಲೆ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಇದರೊಂದಿಗೆ ಒಂದನೇ ತರಗತಿಯಿಂದಲೇ ದಾಖಲಾತಿ ಹೆಚ್ಚಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ಇದೇ ವೇಳೆ ವಿಶ್ವ ಪರಿಸರ ದಿನಾಚರಣೆ ಹಿನ್ನಲೆ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಇದನ್ನೂ ಓದಿ: Kannada New Movie: ಅತೀ ಶೀಘ್ರದಲ್ಲೇ ತೆರೆಗೆ ಬರಲಿದೆ ‘ಆಪರೇಷನ್ ಲಂಡನ್ ಕೆಫೆ’!

6 ಮಕ್ಕಳ ಪ್ರವೇಶ

ಈ ಬಾರಿ ಶಾಲೆ ಆರಂಭೋತ್ಸವ ದಿನವೇ 6 ಮಕ್ಕಳು ಪ್ರವೇಶ ಪಡೆದಿದ್ದಾರೆ. ಠೇವಣಿ ಇರಿಸುವುದು ಸಣ್ಣ ಪ್ರಯತ್ನವಷ್ಟೇ. ನಮಗೆ ಲಭ್ಯವಿರುವ ಸೌಕರ್ಯ ಬಳಸಿಕೊಂಡು ಒಂದು ವರ್ಷದ ಅವಧಿಯಲ್ಲಿ ಕೈಗೊಂಡ ಶೈಕ್ಷಣಿಕ ಕಾರ್ಯಕ್ರಮ ಮೆಚ್ಚಿ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘ ತಿಳಿಸಿದೆ.

ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಮಾತನಾಡಿ, ಶಾಲೆಯ ಶಿಕ್ಷಕರೆಲ್ಲ ಸೇರಿಕೊಂಡು ದಾಖಲಾತಿ ಅಭಿಯಾನ ನಡೆಸುತ್ತಿದ್ದೇವೆ. ವಿವಿಧ ತರಗತಿಗಳ ಪ್ರವೇಶಕ್ಕೂ ಹಲವರು ಸಂಪರ್ಕಿಸಿದ್ದು, ಈ ವಾರ ಮಕ್ಕಳ ದಾಖಲಾತಿ 40 ದಾಟಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಅಮರೇಶ್ವರ ಗುರು ಗಜದಂಡ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಇದನ್ನೂ ಓದಿ: Water Supply Cut: ಬೆಂಗಳೂರಿನಲ್ಲಿ ಇನ್ನೆರಡು ದಿನ ಕಾವೇರಿ ನೀರು ಪೂರೈಕೆಯಿಲ್ಲ!

ಈ ವೇಳೆ ಬಿಇಒ ಹುಂಬಣ್ಣ ರಾಠೋಡ, ಇಸಿಒ ಬಸವರಾಜ ಕರಡಿ, ಸಿಆರ್‌ಪಿ ಮಂಜುನಾಥ ಹೂಗಾರ, ಎಸ್‌ಡಿಎಂಸಿ ಅಧ್ಯಕ್ಷ ಶಂಕರಗೌಡ, ಹಿರಿಯರಾದ ಅಮರೇಗೌಡ, ಪಿಡಿಒ ಬಸವರಾಜ ವಸ್ತ್ರದ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದವರು ಉಪಸ್ಥಿತರಿದ್ದರು.

Exit mobile version