ಲಿಂಗಸುಗೂರು: ಮನೆಯ ಮುಂದೆ ಶಾವಿಗೆ ಮಾಡುವುದು, ಎತ್ತಿನ ಬಂಡಿ, ಕೃಷಿ (Agriculture) ಚಟುವಟಿಕೆಯಲ್ಲಿ ನಿರತ ರೈತರು (Farmers), ಮನೆಯಲ್ಲಿ ರೊಟ್ಟಿ, ಮಜ್ಜಿಗೆ ಮಾಡುವುದು ಅರೇ ಇದು ಯಾವುದೇ ಹಳ್ಳಿಯಲ್ಲಿ ನಡೆಯುತ್ತಿರುವ ನಿತ್ಯದ ಚಟುವಟಿಕೆಗಳಲ್ಲ, ಇದು ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಂಡು ಬಂದ ಹಳ್ಳಿ (Village) ಸೊಗಡು.
ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡು ಮಾಯವಾಗುತ್ತಿದೆ. ಬಾವಿಯಿಂದ ನೀರು ಎತ್ತುವುದು, ಕಾಳು ಬೀಸುವುದು, ವಸ್ತು ಸಂಗ್ರಹಾಲಯ, ಗುರುಕುಲ, ಲಗೋರಿ ಆಟ, ಗುಡಿಸಲು, ಚುರುಮುರಿ ತಯಾರಿಕೆ, ಪಂಚಾಯಿತಿ ಕಟ್ಟೆ, ಹೂ ಕಟ್ಟುವುದು, ಕೊರವಂಜಿ, ಡಬ್ಬಿ ಅಂಗಡಿ, ವಾರದ ಸಂತೆ, ಕೌದಿ ಹೊಲಿಯುವುದು, ಗುಂಡುಕಲ್ಲು ಎತ್ತುವುದು, ಹೊಲದ ಕೆಲಸ, ಮೊರ ಬಳಿಯುವುದು, ಚಿಲ್ಲಿಕಾವು ಆಟ, ಗೋಲಿ ಆಟ, ಕುಂಟಬಿಲ್ಲೆ ಆಟ ಸೇರಿದಂತೆ ಹಲವು ಚಟುವಟಿಕೆಗಳು ಆಧುನಿಕತೆಯ ಭರದಲ್ಲಿ ಮೂಲೆಗುಂಪಾಗುತ್ತಿವೆ.
ಇದನ್ನೂ ಓದಿ: Vijayanagara News: ವಿಜೃಂಭಣೆಯ ಹಂಪಿ ಉತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ
ಹಳ್ಳಿಯ ಸಂಪೂರ್ಣ ಚಿತ್ರಣವನ್ನು ತೆರೆದಿಡುತ್ತಿದ್ದ ಅಪೂರ್ವ ದೃಶ್ಯಗಳು ಇಂದು ಇಲ್ಲವಾಗುತ್ತಿವೆ. ಈ ಹಿನ್ನಲೆಯಲ್ಲಿ 100 ದಿನಗಳ ಓದು ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಹಳ್ಳಿ ಪರಿಸರದ ಪರಿಕಲ್ಪನೆಯನ್ನು ಅರ್ಥಮಾಡಿಸಲು ವಿಶಿಷ್ಟ ಕಾರ್ಯಕ್ರಮ ಗಮನ ಸೆಳೆದಿದೆ.
ಇಳಕಲ್ ಸೀರೆ, ಧೋತರ
ಹಳ್ಳಿ ಸೊಗಡಿನಂತೆ ಸಂಪ್ರದಾಯ ಉಡುಗೆಯಲ್ಲಿ ಖುಷಿಯ ಸಂಭ್ರಮ, ಚಿನ್ನರ ಮೊಗದಲ್ಲೂ ಹೊಸತನದ ಅನುಭವ. ಶಾಲೆ ಆವರಣದ ತುಂಬೆಲ್ಲಾ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು ಇಳಕಲ್ ಸೀರೆ ತೊಟ್ಟು, ವಿದ್ಯಾರ್ಥಿಗಳು ಧೋತರ ಉದ್ದನೆಯ ನಿಲುವಂಗಿ ತೊಟ್ಟು ಶಾಲೆಗೆ ಆಗಮಿಸಿದ್ದು ಸಂಭ್ರಮಕ್ಕೆ ಸಾಕ್ಷಿಯಾಯಿತು. ಶಾಲೆಯಲ್ಲಿ ಹಳ್ಳಿಯ ಲೋಕವೇ ತೆರೆದುಕೊಂಡಿದ್ದು, ನೋಡುಗರ ಕಣ್ಮನ ಸೆಳೆಯಿತು.
ಶಾಲೆಯಲ್ಲಿ ರೊಟ್ಟಿ ಮಾಡಿದ ವಿದ್ಯಾರ್ಥಿನಿಯರು
ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ಹಳ್ಳಿಗರಂತೆ ಶಾವಿಗೆ, ಸಂಡಿಗೆ, ಮಜ್ಜಿಗೆ ಮಾಡುವ ಜತೆ ಕೈಯಿಂದ ಧಾನ್ಯಗಳ ಹಸ ಮಾಡಿ, ಅದನ್ನು ಕುಟ್ಟಿ ಹಿಟ್ಟು ಮಾಡಿದರು. ನಂತರ ಸೌದೆಗಳಲ್ಲಿ ಒಲೆ ಹೊತ್ತಿಸಿ, ರೊಟ್ಟಿ ಬಡಿದರು. ಬಳಿಕ ಉತ್ತರ ಕರ್ನಾಟಕದ ತರಹೇವಾರಿ ಅಡುಗೆ ಮಾಡಿ ಖುಷಿಪಟ್ಟರೆ, ಇತ್ತ ವಿದ್ಯಾರ್ಥಿಗಳು ರೈತನಾಗಿ ಹೊಲದಲ್ಲಿ ಎತ್ತುಗಳಿಂದ ಉಳುಮೆ ಮಾಡಿ, ಕಳೆ ತೆಗೆದರು.
ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಎಂಬುದು ಕೇವಲ ಶಾಲೆಯಾಗದೇ ಅರಿವಿನ ಬುತ್ತಿಯನ್ನು ನೀಡಬೇಕು. ಇದೇ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಸಂಭ್ರಮಪಟ್ಟರು.
ಇದನ್ನೂ ಓದಿ: Karnataka Weather : ನಾಳೆ ಇಲ್ಲೆಲ್ಲ ಮಳೆ; ಚಳಿಯೂ ಸಾಥ್
ಶಾಲಾ ಆವರಣದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂಥ, ಅದರಲ್ಲೂ, ಹಳ್ಳಿಯ ಆ ಸೊಗಡು ಮನೆ ಮಾಡುವಂತೆ ಹಳ್ಳಿಯ ವಾತಾವರಣದಂತೆ ಗುಡಿಸಲು, ಎತ್ತಿನಗಾಡಿ, ಭತ್ತದ ಕಣಜ, ಕೋಳಿ, ಹಸು ಹೀಗೆ ಹಲವಾರು ವಸ್ತುಗಳಿಂದ ಆಕರ್ಷಣೀಯ ಪರಿಸರ ನಿರ್ಮಾಣ ಮಾಡಿ ಮಕ್ಕಳು ಸಂಭ್ರಮಿಸುವಂತೆ ಮಾಡಲಾಗಿತ್ತು.
ಭಾರತ ಕೃಷಿ ಪ್ರಧಾನ ದೇಶ. ವರ್ಷವಿಡೀ ದುಡಿಯುವ ರೈತ ಬೆಳೆ ಪಡೆದು ಸುಗ್ಗಿ ಆಚರಿಸುವ ಸಂಭ್ರಮವನ್ನು ವಿದ್ಯಾರ್ಥಿಗಳು ಕೂಡ ಅನುಭವಿಸಿದರು. ಶಾಲಾ ಆವರಣದಲ್ಲಿ ರಂಗೋಲಿಗಳನ್ನು ಹಾಕಿ ತೆಂಗಿನ ಗರಿ, ಕಬ್ಬಿನ ಗೊನೆಗಳಿಂದ ಸಿಂಗಾರ ಮಾಡಲಾಗಿತ್ತು.
ಎತ್ತಿನ ಬಂಡಿಯಲ್ಲಿ ಆಗಮಿಸಿದ ಬಿಇಒ
ಶಾಲೆಯಲ್ಲಿನ ಹಳ್ಳಿಯ ವಾತವರಣವನ್ನು ನೋಡಲು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ಅವರನ್ನು ಬಿಇಒ ಕಚೇರಿಯಿಂದ ಶಾಲೆಗೆ ಎತ್ತಿನ ಬಂಡಿಯಲ್ಲಿ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು. ಶಾಲೆಗೆ ಬಂದ ಬಿಇಒ ಹಳ್ಳಿ ಸೊಗಡು ನೋಡಿ ರೋಮಾಂಚನಗೊಂಡರು.
ಇದನ್ನೂ ಓದಿ: Bangalore Chitrasanthe : ಚಿತ್ರಕಲಾ ಪರಿಷತ್‌ನಿಂದ ಜ.7ರಂದು ಬೆಂಗಳೂರು ಚಿತ್ರಸಂತೆ
ನಾನು ಹಳ್ಳಿಯಿಂದಲೇ ಬಂದವನು, ಶಾಲೆಯಲ್ಲಿ ಇಂದು ಹಳ್ಳಿ ಸೊಗಡು ನೋಡಿ ನನ್ನ ಬಾಲ್ಯದ ದಿನಗಳ ನೆನಪಾಗಿದೆ. ಇಂದು ಶಾಸಕರ ಮಾದರಿ ಶಾಲೆಯ ಶಿಕ್ಷಕರು ಒಳ್ಳೆಯ ಕಾರ್ಯಕ್ರಮ ಮಾಡುವ ಮೂಲಕ ಪಟ್ಟಣದಲ್ಲಿರುವ ಮಕ್ಕಳಿಗೆ ಹಳ್ಳಿ ಸೊಗಡು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.
-ಹುಂಬಣ್ಣ ರಾಠೋಡ್, ಬಿಇಒ, ಲಿಂಗಸುಗೂರು