ಲಿಂಗಸುಗೂರು: ಚಂದ್ರಯಾನ-3 (Chandrayan-3) ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ (ISRO) ಶುಕ್ರಗ್ರಹಕ್ಕೆ (Venus Planet) ಉಡಾವಣೆ ಮಾಡುವ ಗುರಿ ಹೊಂದಿದೆ ಎಂದು ಇಸ್ರೋ ಸಹ ನಿರ್ದೇಶಕ ಹಾಗೂ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ್ ಹೇಳಿದರು.
ಪಟ್ಟಣದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಂದ್ರಯಾನ-3 ನಂತರ ಕೇಂದ್ರ ಸರ್ಕಾರ ಇಸ್ರೋ ಸಂಸ್ಥೆಗೆ ಶುಕ್ರಗ್ರಹ ಯಾನ ನಡೆಸಲು ಅನುಮತಿ ನೀಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅದು ಕೂಡಾ ಸಾಧ್ಯವಾಗಲಿದೆ ಎಂದರು.
ಬಾಹ್ಯಾಕಾಶ ಸಂಶೋಧನೆಯಿಂದ ಭೂಮಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಭೂ ಸ್ಥಿರ ಉಪಗ್ರಹಗಳು ಜಗತ್ತಿನ ಸಂಪರ್ಕ ಕೊಂಡಿಯಾಗಿವೆ. ಉಪಗ್ರಹ ತಂತ್ರಜ್ಞಾನ ಜನರ ಜೀವನ ಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ. ವೈಜ್ಞಾನಿಕ ಸಾಧನೆಗಳನ್ನು ವಿಜೃಂಭಿಸುವ ಜತೆಗೆ ತಲೆಮಾರಿನವರೆಗೆ ಮುಂದುವರಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Navaratri: ಉದ್ಯಾನನಗರಿಯಲ್ಲಿಎಲ್ಲೆಡೆ ದಾಂಡಿಯಾ ಮೇನಿಯಾ
ಚಂದ್ರಯಾನ-3 ಯಶಸ್ವಿಯಾದ ನಂತರ 195 ದೇಶಗಳು ಭಾರತ ಹಾಗೂ ಭಾರತದ ವಿಜ್ಞಾನಿಗಳನ್ನು ನೋಡುವ ದೃಷ್ಠಿಕೋನ ಬದಲಾಗಿದೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಬಲಿಷ್ಠವಾಗುತ್ತಿದೆ. ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಭಾರತ ವಿಶ್ವಗುರುವಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಉದ್ಘಾಟಿಸಿ, ಮಾತನಾಡಿದರು.
ಇದನ್ನೂ ಓದಿ: Google DigiKavach: ಹಣಕಾಸು ವಂಚನೆ ತಡೆಯಲು ‘ಡಿಜಿಕವಚ’ ಆರಂಭಿಸಿದ ಗೂಗಲ್!
ಕಾರ್ಯಕ್ರಮದಲ್ಲಿ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ರಾಜೇಶ ನಾಯಕ, ಅಶೋಕ, ಚೆನ್ನಬಸವ ಮೇಟಿ, ಡಾ.ಮಹಾದೇವಪ್ಪ ನಾಗರಾಳ, ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದ ಅಧ್ಯಕ್ಷ ಗುರುರಾಜ ಮುತಾಲಿಕ, ಪ್ರಭಾಕರ ಸೂಗೂರು,ಸೋಮು ನಾಯಕ, ಚಂದ್ರು ಬೆಂಡೋಣಿ ಹಾಗೂ ಇತರರು ಉಪಸ್ಥಿತರಿದ್ದರು.