Site icon Vistara News

Raichur News: ದಕ್ಷಿಣ ಭಾರತದ ಡೆಲ್ಟಾ ರ‍್ಯಾಂಕಿಂಗ್‌ನಲ್ಲಿ ರಾಯಚೂರಿನ ಮಸ್ಕಿಗೆ ಪ್ರಥಮ ರ‍್ಯಾಂಕ್

Maski taluk ranks first in Delta ranking of South India

ರಾಯಚೂರು: ನೀತಿ ಆಯೋಗದ ಮಹತ್ವಾಕಾಂಕ್ಷೆ ಯೋಜನೆಯಡಿ ಜಿಲ್ಲಾ ಡೆಲ್ಟಾ ಶ್ರೇಯಾಂಕ ಪ್ರಕಟವಾಗಿದ್ದು, ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು (Maski Taluk) ಹೊಸದೊಂದು ಸಾಧನೆ ಮಾಡಿದೆ. ದಕ್ಷಿಣ ಭಾರತದ ಡೆಲ್ಟಾ ರ‍್ಯಾಂಕಿಂಗ್‌ನಲ್ಲಿ (Delta Ranking) ಮಸ್ಕಿ ಈ ಬಾರಿ ಪ್ರಥಮ ಸ್ಥಾನ ಪಡೆದಿದೆ.

ಆರೋಗ್ಯ, ಶಿಕ್ಷಣ, ಆರ್ಥಿಕ ಸಬಲೀಕರಣ, ಕೃಷಿ, ಮೂಲಸೌಕರ್ಯ ಸೇರಿದಂತೆ ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರಗತಿ ಸಾಧಿಸಿದ ಹಿನ್ನಲೆಯಲ್ಲಿ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಶ್ರೇಯಾಂಕದಲ್ಲಿ ರಾಯಚೂರು ಜಿಲ್ಲೆಯ ನೂತನ ತಾಲೂಕು ಮಸ್ಕಿ ಪ್ರಥಮ ರ‍್ಯಾಂಕ್ ಪಡೆದುಕೊಂಡಿದೆ. ದಕ್ಷಿಣ ಭಾರತ ದ 180 ತಾಲೂಕುಗಳ ಪೈಕಿ ಮಸ್ಕಿ ಪ್ರಥಮ ಸ್ಥಾನ ಪಡೆದಿದೆ. ಪ್ರಥಮ ಸ್ಥಾನದ ಹಿನ್ನಲೆ ತಾಲೂಕಿಗೆ ಕೇಂದ್ರ ಸರ್ಕಾರದಿಂದಲೇ 1 ಕೋಟಿ 50 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ.

ಪ್ರತೀ ವರ್ಷ ನೀತಿ ಆಯೋಗದ ಮಾನದಂಡಗಳಲ್ಲಿ ರ‍್ಯಾಂಕಿಂಗ್ ಪ್ರಕಟವಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಸ್ಥಿತಿ ಆರೋಗ್ಯ ಮತ್ತು ಪೋಷಣೆ, ಬಡತನ ಮತ್ತು ಕುಟುಂಬಗಳ ಆದಾಯ ಹೆಚ್ಚಳ, ಶಿಕ್ಷಣ, ಕೃಷಿ, ಮೂಲಸೌಕರ್ಯ ಮಾನದಂಡಗಳ ಅಭಿವೃದ್ಧಿಯಲ್ಲಿ ಈ ಬಾರಿ‌ ಇಡೀ ದಕ್ಷಿಣ ಭಾರತದಲ್ಲಿ ಮಸ್ಕಿ ಮುಂದೆ ಇದೆ.

ಇದನ್ನೂ ಓದಿ: Rafael Nadal: ನಿವೃತ್ತಿ ಬಗ್ಗೆ ಸ್ಪಷ್ಟನೆ ನೀಡಿದ ರಫೆಲ್‌ ನಡಾಲ್‌

2023 ರ ಡಿಸೆಂಬರ್ ತಿಂಗಳಿನಲ್ಲಿ ನೀತಿ ಆಯೋಗದಿಂದ ಅಖಿಲ ಭಾರತ ಮಹತ್ವಾಕಾಂಕ್ಷೆಯ ಜಿಲ್ಲಾ ಡೆಲ್ಟಾ ಶ್ರೇಯಾಂಕವನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ರಾಯಚೂರು ಜಿಲ್ಲೆಯ ನೂತನ ತಾಲೂಕು ಮಸ್ಕಿ ಐದು ವಲಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದೆ. ಜತೆಗೆ ಸಮಗ್ರ ಅಭಿವೃದ್ಧಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದುಕೊಂಡಿದೆ.

ದಕ್ಷಿಣ ಭಾರತದಲ್ಲೂ ಒಟ್ಟು 180 ಮಹತ್ವಾಕಾಂಕ್ಷೆ ತಾಲೂಕುಗಳಿದ್ದು, ಈ ತಾಲೂಕುಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕೃಷಿ ಮತ್ತು ನೀರಾವರಿ ಸಂಪನ್ಮೂಲ, ಅರ್ಥಿಕ ಅಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಲ್ಲಿ ಪ್ರಗತಿ ಸಾಧಿಸಲು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ರಾಯಚೂರು ಜಿಲ್ಲೆಯೂ ಸಹ ಮಹತ್ವಾಕಾಂಕ್ಷೆ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಬರುವ ನೂತನ ತಾಲೂಕು ಮಸ್ಕಿ ಇಡೀ ದಕ್ಷಿಣ ಭಾರತದಲ್ಲಿಯೇ 2023ರ ಡಿಸೆಂಬರ್ ತಿಂಗಳ ಶ್ರೇಯಾಂಕದಲ್ಲಿ ಮೊದಲನೇ ರ‍್ಯಾಂಕ್ ಸಾಧಿಸಿದೆ ಮತ್ತು ಬಹುಮಾನವಾಗಿ ತಾಲೂಕಿಗೆ 1 ಕೋಟಿ 50 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ.

ಇದನ್ನೂ ಓದಿ: Viral Video: ಎಕ್ಸ್​ಪ್ರೆಸ್​ ರೈಲಿಗಿಂತಲೂ ವೇಗವಾಗಿ ಸಾಗಿದ ಆಟೋ! ವಿಡಿಯೊ ವೈರಲ್​

ಬಿಡುಗಡೆಯಾದ ಅನುದಾನವನ್ನು ಮಹತ್ವಾಕಾಂಕ್ಷೆ ತಾಲೂಕಿನ ಅಭಿವೃದ್ಧಿಗಾಗಿ ಸಂಬಂಧಪಟ್ಟ ಆಯಾ ಇಲಾಖೆಯ ಆದ್ಯತೆ ಮೇರೆಗೆ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ರವಾನೆ ಮಾಡಲಾಗುತ್ತದೆ. ಕೇಂದ್ರದಿಂದ ಯೋಜನೆಗೆ ಅನುಮೋದನೆ ದೊರೆತ ನಂತರ ಅನುದಾನ ಬಿಡುಗಡೆಯಾಗುತ್ತದೆ.

ಇನ್ನು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿಗೆ ಇಡೀ ದಕ್ಷಿಣ ಭಾರತದಲ್ಲಿ ಮಹತ್ವಾಕಾಂಕ್ಷೆ ತಾಲೂಕಿನ ಶ್ರೇಯಾಂಕದಲ್ಲಿ ಪ್ರಥಮ ರ‍್ಯಾಂಕ್ ಸಿಕ್ಕಿರುವುದರ ಹಿಂದೆ ಆಯಾ ಇಲಾಖೆಯ ಅಧಿಕಾರಿಗಳ ಶ್ರಮವಿದೆ.

ಸಮಗ್ರ ಅಭಿವೃದ್ಧಿಯಲ್ಲಿ 2021ರ ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯೂ 111 ನೇ ರ‍್ಯಾಂಕ್‌ನಲ್ಲಿತ್ತು. 2023 ಜೂನ್ ತಿಂಗಳಲ್ಲಿ ಪ್ರಕಟವಾದ ರ್ಯಾಂಕಿಂಗ್ ನಲ್ಲಿ ಸಮಗ್ರ ಅಭಿವೃದ್ಧಿಯಲ್ಲಿ ರಾಯಚೂರು ಜಿಲ್ಲೆ ಮೊದಲನೇ ರ‍್ಯಾಂಕ್ ಪಡೆದಿತ್ತು. ಇದೀಗ 2023 ರ ಡಿಸೆಂಬರ್‌ನಲ್ಲಿ ಪ್ರಕಟಗೊಂಡ ದಕ್ಷಿಣ ಭಾರತದ ರ್ಯಾಂಕಿಂಗ್ ಪಟ್ಟಿಯಲ್ಲಿ ಮಸ್ಕಿ ಪ್ರಥಮ ಸ್ಥಾನ ಪಡೆದಿದೆ.

ಇದನ್ನೂ ಓದಿ: Glenn Maxwell : ಮ್ಯಾಕ್ಸ್​ವೆಲ್​ಗೆ ಗಾಯ; ಆರ್​ಸಿಬಿ ಮ್ಯಾನೇಜ್ಮೆಂಟ್​ಗೆ ಆತಂಕ

ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮ ವಹಿಸಿ ಇಲಾಖೆಯಲ್ಲಿರುವ ಕಾಮಗಾರಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರೆ ರಾಯಚೂರು ಜಿಲ್ಲೆಗೆ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕಳಚಲಿದೆ.

Exit mobile version