ರಾಯಚೂರು: ರೈತರಿಗೆ (farmers) ರಸಗೊಬ್ಬರ (Fertilizer), ಬಿತ್ತನೆ ಬೀಜ (Sowing seeds) ಕೊರತೆ ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಥಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತು ತಾಲೂಕಿನಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮುಖ್ಯವಾಗಿ ಯೂರಿಯಾ, ಡಿಎಪಿ, ಇತರೆ ರಸಗೊಬ್ಬರ ಕೊರತೆ ಆಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: Murdeshwar Beach: ಇದೆಂಥ ದುಸ್ಸಾಹಸ! ಮುರ್ಡೇಶ್ವರ ಕಡಲಲ್ಲಿ ಮುಳುಗಿದ ಪ್ರವಾಸಿಗ; ಇಬ್ಬರ ರಕ್ಷಣೆ
ಅಧಿಕಾರಿಗಳು ಸಮಿತಿಯೊಂದನ್ನು ರಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಮಳೆ ಬಂದರೆ ರೈತರು ಬಿತ್ತನೆ ಕೆಲಸಗಳನ್ನು ಪ್ರಾರಂಭ ಮಾಡುತ್ತಾರೆ. ಆದ್ದರಿಂದ ಸಕಲ ರೀತಿಯಿಂದ ಅಧಿಕಾರಿಗಳು ಸಿದ್ಧರಾಗಿರಬೇಕು, ನಕಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಮೇಲೆ ಅಧಿಕಾರಿಗಳು ನಿಗಾವಹಿಸಬೇಕು, ಮಾರುಕಟ್ಟೆಯಲ್ಲಿ ನಕಲಿ ಹತ್ತಿ ಬೀಜ ಮಾರಾಟ ಮಾಡಿದ್ದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ರೈತರು ದೇಶದ ಬೆನ್ನೆಲುಬು ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆ ಬೆನ್ನಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸರೆಯಾಗಬೇಕು. ಆಸರೆಯಾದರೆ ರೈತರ ಜೀವನ ಸಂತೋಷದಿಂದ ಸಾಗುತ್ತದೆ ಎಂದ ಅವರು, ಕಳಪೆ ಬೀಜದ ಬಿತ್ತನೆಯಿಂದ ನಾಲ್ಕು ಐದು ತಿಂಗಳ ನಂತರ ಹೂ ಬಿಡದೇ ಬರೀ ಗಿಡ ಬೆಳೆದು ನಿಲ್ಲುತ್ತವೆ, ಇದರಿಂದ ರೈತನಿಗೆ ಸಾಕಷ್ಟು ತೊಂದರೆಯಾಗುತ್ತದೆ. ಅದರ ಖರ್ಚು, ವೆಚ್ಚ ಮೈಮೇಲೆ ಬೀಳುತ್ತದೆ. ಆ ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ, ನಾವೆಲ್ಲ ಕೂಡ ರೈತಾಪಿ ವರ್ಗದಿಂದ ಬಂದವರು, ರೈತರ ಕಷ್ಟ ಹೇಗೆ ಇರುತ್ತದೆ ಅಂತ ನಾವು ನೀವು ಅನುಭವಿಸಿದ್ದೇವೆ ಮತ್ತು ನೋಡಿದ್ದೇವೆ. ಆದ್ದರಿಂದ ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಸಂಶೋಧಿಸಿ ರೈತರಿಗೆ ಹತ್ತಿ ಬೀಜ ನೀಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ITR filing : ಬಾಡಿಗೆಯ ಮೇಲೆ ತೆರಿಗೆ ಅನುಕೂಲಗಳನ್ನು ಪಡೆಯುವುದು ಹೇಗೆ?
ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಇದರ ಜತೆ ಶುದ್ಧ ಕುಡಿಯುವ ನೀರನ್ನು ಗ್ರಾಮ ಪಂಚಾಯಿತಿಯವರು ಒದಗಿಸಬೇಕು, ಅಶುದ್ಧವಾದ ನೀರು ಸರಬರಾಜು ಮಾಡಿದರೆ ಅದಕ್ಕೆ ಹೊಣೆ ಗ್ರಾಮ ಪಂಚಾಯಿತಿಯಾಗುತ್ತದೆ, ಆದ್ದರಿಂದ ಟ್ಯಾಂಕ್‌ಗಳನ್ನು ಶುದ್ಧೀಕರಿಸಿ, ಶುದ್ಧವಾದ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಮಳೆಗಾಲ ಇರುವುದರಿಂದ ಹಳ್ಳಿಗಳಲ್ಲಿ ಗಾಳಿ, ಮಳೆಗೆ, ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತವೆ. ತಕ್ಷಣವೇ ಅವುಗಳನ್ನು ದುರಸ್ತಿ ಮಾಡಿಕೊಡಬೇಕು ಅಥವಾ ಪರ್ಯಾಯ ಟಿಸಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Weather Report: ಮುಂಗಾರು ಚುರುಕು; ಜೂ.17ರವರೆಗೆ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ
ಈ ಸಂದರ್ಭದಲ್ಲಿ ತಹಸೀಲ್ದಾರ್ ಚನ್ನಮಲ್ಪಪ್ಪ ಘಂಟಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮರಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರಿ ಮೇನಕ ಪಾಟೀಲ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.