ರಾಯಚೂರು: ರಾಜ್ಯ ಸರ್ಕಾರವು (State government) ರಾಯಚೂರು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ (district in-charge) ಸಚಿವರನ್ನಾಗಿ ಡಾ. ಶರಣಪ್ರಕಾಶ್ ಪಾಟೀಲ್ ಅವರನ್ನು ನೇಮಿಸಿರುವುದನ್ನು ವಿರೋಧಿಸಿ, ನಗರದಲ್ಲಿ ಶುಕ್ರವಾರ ಸಂಜೆ ಜಿಲ್ಲೆಯ ಏಮ್ಸ್ ಹೋರಾಟ ಸಮಿತಿ, ಕರವೇ ಸೇರಿ 5 ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕರವೇ ರಾಜ್ಯ ಘಟಕ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ, ಕನ್ನಡಿಗರ ರಕ್ಷಣಾ ಸಂಘ, ಕರ್ನಾಟಕ ರಣಧೀರರ ಪಡೆ ಮತ್ತು ಅಖಂಡ ಕರ್ನಾಟಕ ರಕ್ಷಣಾ ಸಮಿತಿ ಸಂಘಟನೆಗಳ ನೇತೃತ್ವದಲ್ಲಿ
ನಡೆದ ಪ್ರತಿಭಟನೆಯಲ್ಲಿ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಸಚಿವರ ಭಾವಚಿತ್ರವುಳ್ಳ ಬ್ಯಾನರ್ ದಹಿಸಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ: Actress Kajol: ಸೋಷಿಯಲ್ ಮೀಡಿಯಾಗೆ ಬೈ ಬೈ ಹೇಳಿದ ಕಾಜೋಲ್; ಕಠಿಣ ಪ್ರಯೋಗ ಎಂದ ನಟಿ!
ಏಮ್ಸ್ ಅನ್ನು ರಾಯಚೂರಿನಲ್ಲಿ ಸ್ಥಾಪಿಸಲು ಕಳೆದ 393 ದಿನಗಳಿಂದ ನಿರಂತರವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಹಿಂದೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಏಮ್ಸ್ ಕಲಬುರಗಿಗೆ ಬೇಕು ಎಂದು ಪತ್ರಿಕಾ ಹೇಳಿಕೆ ನೀಡಿದ್ದರು, ಇವರು ನಮ್ಮ ರಾಯಚೂರು ಜಿಲ್ಲೆಗೆ ಉಸ್ತುವಾರಿ ಏಕೆ ಬೇಕೆಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಸ್ಥಳೀಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರನ್ನು ರಾಯಚೂರು ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗೋ ಬ್ಯಾಕ್, ರಾಯಚೂರು ಬಂದ್ ಎಚ್ಚರಿಕೆ
ಒಂದು ವೇಳೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರನ್ನು ಉಸ್ತುವಾರಿ ಸಚಿವರಾಗಿ ಮುಂದುವರಿಸಿದರೆ ಸಚಿವರಿಗೆ ಗೋ ಬ್ಯಾಕ್ ಚಳವಳಿ, ಉಗ್ರ ಹೋರಾಟ, ರಾಯಚೂರು ಜಿಲ್ಲೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Rain News : ಸಮುದ್ರದಲ್ಲಿ ರಕ್ಕಸ ಅಲೆಗಳು; ಸಿಡಿಲಿಗೆ ಇಬ್ಬರು ಬಲಿ, ಬೆಂಗಳೂರಲ್ಲೂ ಮಳೆ ಅಬ್ಬರ
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅಶೋಕ ಕುಮಾರ್ ಜೈನ್, ಪ್ರದೀಪ್ ಕುಮಾರ್, ಬಸವರಾಜ್, ಪ್ರಕಾಶ್ ಕುಮಾರ್, ಅಸೀಫ್, ನಜೀರ್ ಅಹ್ಮದ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.