ರಾಯಚೂರು: ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆ ಅಡಿಯಲ್ಲಿ ರಾಯಚೂರು ನಗರದ ಹೊರವಲಯದಲ್ಲಿ ಚತುಷ್ಪಥ ಹಾಗೂ ಷಟ್ಪಥ ರಾಷ್ಟ್ರೀಯ ಹೆದ್ದಾರಿಗಳು (National Highway) ನಿರ್ಮಾಣವಾಗುತ್ತಿದ್ದು, ಕಾಮಗಾರಿ ವಿರುದ್ಧ ಚಂದ್ರಬಂಡಾ ವ್ಯಾಪ್ತಿಯಲ್ಲಿ ರೈತರು (Farmers) ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಹೈವೇಯಲ್ಲೇ ಶಾಮಿಯಾನ ಹಾಕಿ ನೂರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸಿ, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Health News: ನಗರದಲ್ಲೂ ಗ್ರಾಮೀಣ ವೈದ್ಯರ ಸೇವೆ ಬಳಸಿಕೊಳ್ಳಲು ಕಾಯ್ದೆಗೆ ತಿದ್ದುಪಡಿ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ರಾಯಚೂರು ಗ್ರಾಮೀಣ ತಾಲೂಕಿನ ಚಂದ್ರಬಂಡಾ ಹೋಬಳಿ ವ್ಯಾಪ್ತಿಯಲ್ಲಿ ಭಾರತ್ ಮಾಲಾ ಹೈವೇ ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿ ನಡೆಸುವ ಭರದಲ್ಲಿ ರೈತರ ಜಮೀನುಗಳಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದ ಮುಂಗಾರು ಬಿತ್ತನೆ ಮಾಡಬೇಕಿದ್ದ ರೈತರು ಜಮೀನುಗಳಿಗೆ ಹೋಗಲು ರಸ್ತೆಯಿಲ್ಲದೆ ಕಂಗಾಲಾಗಿದ್ದಾರೆ. ಭಾರತ್ ಮಾಲಾ ಕಾಮಗಾರಿಯಲ್ಲಿ ಅಂಡರ್ ಪಾಸ್ ಗಳು ಅವೈಜ್ಞಾನಿಕದಿಂದ ಕೂಡಿದೆ. ಹೈವೇ ಎರಡೂ ಬದಿಯಲ್ಲಿ ಪಾಸಿಂಗ್ ರಸ್ತೆ ನಿರ್ಮಾಣ ಮಾಡಬೇಕು. ರೈತರು ಜಮೀನುಗಳಿಗೆ ಸರಾಗವಾಗಿ ತೆರಳಲು ಅನುವು ಮಾಡಿ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ರೈತರು ಓಡಾಟ ನಡೆಸುವ ಹಳೆಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಇದರಿಂದ ರೈತರಿಗೆ ತಮ್ಮ ಹೊಲಗಳಿಗೆ ಹೋಗಲು ರಸ್ತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹೈವೇ ಪಕ್ಕದಲ್ಲಿ ಸರ್ವಿಸ್ ರಸ್ತೆ ಸಹ ಇಲ್ಲ. 10-12 ಫೀಟ್ ಎತ್ತರದಲ್ಲಿ ಹೈವೇ ನಿರ್ಮಾಣವಾಗಿದೆ. ಅನೇಕ ಬಾರಿ ಜಿಲ್ಲಾಧಿಕಾರಿ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿರುವ ಬೋರ್‌ಗಳು, ಹಣ್ಣಿನ ಗಿಡಗಳ ಸರ್ವೇ ಕೂಡ ಅಧಿಕಾರಿಗಳು ಸರಿಯಾಗಿ ನಡೆಸಿಲ್ಲ. ಗುತ್ತಿಗೆದಾರರು ತಮಗೆ ಇಷ್ಟ ಬಂದ ರೀತಿಯಲ್ಲಿ ಮಣ್ಣು, ಡಾಂಬಾರು ಹಾಕಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಿ ರೈತರ ಪಾರಂಪರಿಕ ರಸ್ತೆಯನ್ನು ಉಳಿಸಲಿ. ಭಾರತ್ ಮಾಲಾ ಹೈವೇ ನಿರ್ಮಾಣದಿಂದ ಸಾಕಷ್ಟು ತೊಂದರೆಯಾಗಿದೆ. ಸರ್ಕಾರ ಎಸ್ಟಿಮೇಟ್ ಬದಲಿಸಿ ಎಂದು ಒತ್ತಾಯಿಸಿದರು.
ಬಳಿಕ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ನೇತೃತ್ವದಲ್ಲಿ ರೈತರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: Kadaba News: ಚಿನ್ನದ ಅಂಗಡಿ ಉದ್ಘಾಟನೆ ದಿನವೇ ಶವವಾಗಿ ಪತ್ತೆಯಾದ ಯುವಕ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಲ್ಲಣ್ಣ ದಿನ್ನಿ, ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ದೇವರಾಜ್ ನಾಯಕ್, ಬ್ರಹ್ಮಯ್ಯ ಆಚಾರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.