Site icon Vistara News

Contaminated Water: ಜೀವ ಹಿಂಡುತ್ತಿದೆ ಜೀವಜಲ; ರಾಯಚೂರಲ್ಲಿ ಮತ್ತೆ 35ಮಂದಿ ತೀವ್ರ ಅಸ್ವಸ್ಥ

Treatment to patients In Raichur

#image_title

ರಾಯಚೂರು: ಜಿಲ್ಲೆಯಲ್ಲಿ ಕಲುಷಿತ ನೀರಿನಿಂದ (Contaminated Water) ಉಂಟಾಗುತ್ತಿರುವ ಸಮಸ್ಯೆ ಮುಂದುವರಿದಿದೆ. ಲಿಂಗನಸಗೂರು ತಾಲೂಕಿನ ಯಡಗುಂಟಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ, 35ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಜಾಡಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಟಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಏಕಾಏಕಿ ಜನರು ಅಸ್ವಸ್ಥರಾಗತೊಡಗಿದರು (Raichur Water Contamination). ವಾಂತಿ-ಭೇದಿ ಶುರುವಾಯಿತು. ಪ್ರಾರಂಭದಲ್ಲಿ ಗ್ರಾಮದಲ್ಲಿಯೇ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರನ್ನು ಲಿಂಗಸಗೂರು, ಸಿಂಧನೂರು, ರಾಯಚೂರಿನ ರಿಮ್ಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೀಗೆ ಒಂದೇ ಗ್ರಾಮದ 30ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಬೆನ್ನಲ್ಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಇಲ್ಲಿನ ನೀರೂ ಕಲುಷಿತಗೊಂಡಿರುವ ಬಗ್ಗೆ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ, ನೀರನ್ನು ಪರೀಕ್ಷೆಗೆ ಲ್ಯಾಬೋರೇಟರಿಗೆ ಕಳಿಸಿದ್ದಾರೆ. ಯರಗಂಟಿ ಗ್ರಾಮಸ್ಥರು ಹಲವು ವರ್ಷಗಳಿಂದಲೂ ಪೈಪ್​ಲೈನ್​​ ನೀರನ್ನೇ ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಇತ್ತೀಚೆಗೆ ಒಬ್ಬ ಬಾಲಕ ಬಲಿಯಾದ ಮೇಲೆ ಆತಂಕವೂ ಹೆಚ್ಚಾಗಿದೆ.

ಇದನ್ನೂ ಓದಿ: Contaminated Water: ರಾಯಚೂರು ಕಲುಷಿತ ನೀರು ಸೇವನೆ ಪ್ರಕರಣ; ಜಿಪಂ ಸಿಇಒಗೆ ನೋಟಿಸ್‌

ರಾಯಚೂರಿನ ರೇಕಲಮರಡಿ ಗ್ರಾಮದಲ್ಲಿ ಐದು ವರ್ಷದ ಬಾಲಕ ಹನುಮೇಶ್​ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾನೆ. ವಾಂತಿ-ಭೇದಿ ಉಲ್ಬಣಗೊಂಡು, ಚಿಕಿತ್ಸೆ ಫಲಕಾರಿಯಾಗಿ ಜೀವ ಬಿಟ್ಟಿದ್ದ. ಈತನ ಅಕ್ಕ ನರಸಮ್ಮ (8) ಕೂಡ ತೀವ್ರ ಅಸ್ವಸ್ಥಳಾಗಿದ್ದಳು. ಈ ಗ್ರಾಮದಲ್ಲೂ 30ಕ್ಕೂ ಹೆಚ್ಚು ಜನರು ಕಲುಷಿತ ನೀರಿನ ಸೇವನೆಯಿಂದ ಅಸ್ವಸ್ಥರಾಗಿದ್ದರು. ಇದಾದ ಮೇಲೆ ಗೊರೆಬಾಳ ಗ್ರಾಮದಲ್ಲಿ ನೀರು ಕಲುಷಿತಗೊಂಡಿರುವ ವರದಿಯಾಗಿತ್ತು. ಇಲ್ಲಿ ಹಲವರ ಆರೋಗ್ಯ ಹಾಳಾಗಿತ್ತು. ಅದರಲ್ಲೂ ಮೂವರಿಗೆ ಕಿಡ್ನಿ ವೈಫಲ್ಯವಾಗಿರುವುದು ಬೆಳಕಿಗೆ ಬಂದಿದೆ. ಲಿಂಗಸುಗೂರು ತಾಲೂಕಿನ ಜೂಲಗುಡ್ಡದಲ್ಲೂ ಇದೇ ಸಮಸ್ಯೆಯಿಂದ 8 ಮಂದಿ ಅಸ್ವಸ್ಥರಾಗಿದ್ದು. ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಜಿಲ್ಲಾ ಪಂಚಾಯಿತಿ ಸಿಇಒಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.

Exit mobile version