Site icon Vistara News

ಕಲುಷಿತ ನೀರು ಪೂರೈಕೆ ದುರಂತ: ಸಚಿವರು ಭೇಟಿ ನೀಡಿದ ದಿನವೇ ಮತ್ತೊಂದು ಸಾವು

ಶಂಕರ್ ಪಾಟೀಲ್

ರಾಯಚೂರು: ಕಲುಷಿತ ನೀರು ‌ಕುಡಿದು 6 ಜನ ಮೃತಪಟ್ಟಿದ್ದರೆ, ನೂರಕ್ಕೂ ಅಧಿಕ ಜನರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟು ದೊಡ್ಡ ದುರಂತ ನಡೆದರೂ ಜಿಲ್ಲೆಯತ್ತ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ತಿರುಗಿ ಕೂಡ ನೋಡಿರಲಿಲ್ಲ. ಆದರೆ 15 ದಿನಗಳ ಬಳಿಕ ಜಿಲ್ಲೆಗೆ ಎಂಟ್ರಿ ಕೊಟ್ಟ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಅಧಿಕಾರಿಗಳ ಜೊತೆ ನೇರವಾಗಿ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿದ್ದಾರೆ.

ಈ ನಡುವೆ, ಸಚಿವರು ಭೇಟಿ ನೀಡಿದ ಬೆನ್ನಲ್ಲೇ ನಗರದಲ್ಲಿ ಕಲುಷಿತ ನೀರಿಗೆ ವಾರ್ಡ್ ನಂಬರ್ 12ರ ನಯೀಮುದ್ದೀನ್ (50) ಎಂಬುವರು ಬಲಿಯಾಗಿದ್ದಾರೆ. ಕಲುಷಿತ ನೀರು ಕುಡಿದು ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದೆ.

ರಾಂಪುರ ಶುದ್ಧೀಕರಣ ಘಟಕದ ಪಂಪ್‌ ಹೌಸ್, ವಾಟರ್‌ ಟ್ಯಾಂಕ್‌ ಸೇರಿದಂತೆ ನೀರಿನ ಘಟಕದ ಬಳಿಯಲ್ಲಿರುವ ಲ್ಯಾಬ್‌ ಅನ್ನು ಸಚಿವರು ಪರಿಶೀಲಿಸಿದ್ದಾರೆ. ರಾಂಪುರ ಶುದ್ಧೀಕರಣ ಘಟಕದಲ್ಲಿ ಲೋಪ ದೋಷಗಳು ಪ್ರಾಥಮಿಕವಾಗಿ ಕಂಡುಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ | ಕಲುಷಿತ ನೀರು ಪೂರೈಕೆ: ರಾಯಚೂರು ನಗರಸಭೆ AEE ವೆಂಕಟೇಶ ಸಸ್ಪೆಂಡ್

ಮೃತಪಟ್ಟವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಣೆ

ಬಳಿಕ ರಾಯಚೂರು ನಗರದ ಸಭೆ ಕಚೇರಿಯಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆಯಲ್ಲಿ, ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಮತ್ತು ನಗರಸಭೆಯ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರವನ್ನು ಸಾಂಕೇತಿಕವಾಗಿ ಮೂರು ಕುಟುಂಬಗಳಿಗೆ ವಿತರಿಸಲಾಯಿತು.

ಸದ್ಯ ರಾಂಪುರ ಶುದ್ಧೀಕರಣ ಘಟಕದ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ಶುದ್ಧೀಕರಣ ಘಟಕದ ನೀರು ಕುಡಿದು ಪರಿಶೀಲನೆ ನಡೆಸಿದರು. ಮುಂದಿನ ದಿನಗಳಲ್ಲಿ ನಗರಕ್ಕೆ ಇದೇ ಘಟಕದಿಂದ ನೀರು ‌ಪೂರೈಕೆ ಆಗಲಿದೆ.

ನಯೀಮುದ್ದೀನ್

ಇದನ್ನೂ ಓದಿ | ಕಲುಷಿತ ನೀರು ಸೇವಿಸಿ ಮೂವರ ಸಾವು: ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

Exit mobile version