ರಾಯಚೂರು: ರಾಯಚೂರಿನಲ್ಲಿ ಖ್ಯಾತ ವೈದ್ಯರ ಮೇಲೆ ಅಪರಿಚಿತರು ಗುಂಡು ಹಾರಿಸಿ (Firing) ಕೊಲೆ ಮಾಡಲು ಯತ್ನಿಸಿ (murder attempt) ಪರಾರಿಯಾದ ಪ್ರಕರಣದಲ್ಲಿ ಮುಂಬಯಿ ಮಾಫಿಯಾ (Mumbai mafia) ಕೈವಾಡ ಇರಬಹುದು ಎಂಬ ಆತಂಕಕಾರಿ ಸತ್ಯ ಬಯಲಾಗಿದೆ.
ಫೈರಿಂಗ್ ಪ್ರಕರಣದ ಖಾಕಿ ತನಿಖೆ ವೇಳೆ ಹಲವು ಸಂಗತಿಗಳು ಬಯಲಾಗಿದ್ದು, ಇದರ ಹಿಂದೆ ಮುಂಬಯಿ ನೆಟ್‌ವರ್ಕ್, ಕ್ರಿಪ್ಟೋಕೆರೆನ್ಸಿ (Cryptocurrency) ಲಿಂಕ್ ಬಗ್ಗೆ ಶಂಕೆ ಮೂಡಿದೆ. ಮುಂಬಯಿಯಿಂದ ಬಂದ ಬೆದರಿಕೆ ಕರೆಯಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿ ಬ್ಲಾಕ್‌ಮೇಲ್ ನಡೆದಿರುವುದು ಪತ್ತೆಯಾಗಿದೆ.
ರಾಯಚೂರು ನಗರದ ಸಾತ್ ಮೈಲ್ ಬಳಿ ಆ.31ರಂದು ಫೈರಿಂಗ್ ನಡೆದಿತ್ತು. ಬೆಟ್ಟದೂರು ಆಸ್ಪತ್ರೆಯ ಮಾಲೀಕ ಹಾಗೂ ಖ್ಯಾತ ವೈದ್ಯರಾದ ಡಾ.ಜಯಪ್ರಕಾಶ್ ಪಾಟೀಲ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದೇ ಜೂನ್ 7ರಂದು ಜಯಪ್ರಕಾಶ್ ಅವರಿಗೆ ಬೆದರಿಕೆ ಕರೆ ಬಂದಿತ್ತು. “ಭಾಯ್ ಬೋಲ್ ರಹೆ ಹೈ… ತೀಸ್ ಹಜಾರ್ ಡಾಲರ್ ದೋ ದಿನ ಅಂದರ್ ಡಾಲ್ ನಾ.. “ನಹಿ ಡಾಲೆತೋ ತುಮ್ಹಾರಾ ಫ್ಯಾಮಿಲಿ, ಡಾಕ್ಟರ್ ಕಾ ಫ್ಯಾಮಿಲಿ ಕೋ ನಹಿ ಚೋಡೆಂಗೆ” ಅಂತ ಬೆದರಿಕೆ ಹಾಕಿದ್ದರು. ಆಸ್ಪತ್ರೆ ನಂಬರ್‌ಗೆ ಕರೆ ಬಂದಿದ್ದರಿಂದ ಅದೇ ನಂಬರ್‌ಗೆ ವಾಪಸ್ ಆಸ್ಪತ್ರೆ ಮ್ಯಾನೇಜರ್ ಮಹಾಂತೇಶ್ ಕರೆ ಮಾಡಿದಾಗ, “ಮೈ ಆಪ್ ಕೊ ಮೆಸೆಜ್ ಕರ್ತಾ ಹುಂ.., ಓ ಅಕೌಂಟ್ ಕೊ ತೀಸ್ ಹಜಾರ್ ಕ್ರಿಪ್ಟೊಕರೆನ್ಸಿ ಡಾಲ್ ನಾ..” ಅಂತ ದುಷ್ಕರ್ಮಿ ಎಸ್‌ಎಂಎಸ್ ಮಾಡಿದ್ದ.
ಈ ಬಗ್ಗೆ ದೂರು ನೀಡಲಾಗಿತ್ತು. ನೇತಾಜಿ ನಗರ ಠಾಣೆಗೆ ಆಸ್ಪತ್ರೆ ಮ್ಯಾನೇಜರ್ ದೂರು ನೀಡಿದ್ದರು. ಮುಂಬೈ ಶೈಲಿಯ ಹಿಂದಿಯಲ್ಲಿ ವೈದ್ಯರಿಗೆ ಬೆದರಿಕೆ ಹಾಕಲಾಗಿದೆ. ಸದ್ಯ ಈ ಕ್ರಿಪ್ಟೋಕರೆನ್ಸಿ, ಮುಂಬೈ ಲಿಂಕ್ ಆಧರಿಸಿ ತನಿಖೆ ನಡೆಸಲಾಗುತ್ತಿದೆ.
ಗುಂಡು ಹಾರಾಟದ ಬಳಿಕ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್‌ಗಳ ಎಂಪ್ಟಿ ಕೇಸ್‌ಗಳನ್ನು ಆಧರಿಸಿ ರಾಯಚೂರು ಪೊಲೀಸರು ತನಿಖೆ ನಡೆಸಿದ್ದು, ಉತ್ತರ ಪ್ರದೇಶದಲ್ಲಿ ಬಳಕೆಯಾಗುವ ಪಿಸ್ತೂಲ್ ಬಳಸಿರುವ ಶಂಕೆ ಮೂಡಿದೆ. ಪ್ರತ್ಯೇಕ ಮೂರು ತಂಡಗಳಾಗಿ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದು, ಉತ್ತರ ಪ್ರದೇಶ, ಮುಂಬಯಿ, ಹೈದರಾಬಾದ್ ಜಾಡು ಹಿಡಿದಿದ್ದಾರೆ. ಈ ಹಿಂದೆ ದಾಖಲಾದ ಪ್ರಕರಣದ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣವಾಗಿದೆ.
ಇದನ್ನೂ ಓದಿ: Delhi Court Firing: ಕೋರ್ಟ್ ಆವರಣದಲ್ಲಿ ಹೈಡ್ರಾಮಾ; ವಕೀಲರ ಮಧ್ಯೆಯೇ ಸಂಘರ್ಷ, ಫೈರಿಂಗ್ ವಿಡಿಯೊ ವೈರಲ್