ಮಾನ್ವಿ: ನೀಟ್ (NEET) ಪ್ರವೇಶ ಪರೀಕ್ಷೆಯಲ್ಲಿ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ, ಎಐಡಿಎಸ್ಓ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಬಸವ ವೃತ್ತದಲ್ಲಿ ಗುರುವಾರ ಪ್ರತಿಭಟನೆ (Raichur News) ನಡೆಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಪೀರ್ ಸಾಬ್ ಮಾತನಾಡಿ, ಜೂನ್ 4ರಂದು ಪ್ರಕಟಗೊಂಡ ನೀಟ್ ಪರೀಕ್ಷಾ ಫಲಿತಾಂಶದ ಪಾರದರ್ಶಕತೆಯ ಕುರಿತು ದೇಶವ್ಯಾಪಿ ವಿದ್ಯಾರ್ಥಿಗಳು ಹಾಗೂ ಪಾಲಕರು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಯುಜಿಸಿ ಪರೀಕ್ಷಾ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಿದ್ದಲ್ಲಿ ವಿದ್ಯಾರ್ಥಿಗಳು ಪಡೆಯಬಹುದಾದ ಅಂಕಗಳೊಂದಿಗೆ ಪ್ರಸ್ತುತ ಒಂದಿಷ್ಟು ವಿದ್ಯಾರ್ಥಿಗಳು ಪಡೆದಿರುವ ಅಂಕಗಳು ಹೊಂದಾಣಿಕೆಯಾಗುತ್ತಿಲ್ಲ.
ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಿರುವುದಾಗಿ ಎನ್‌ಟಿಎ ಸಮಜಾಯಿಷಿ ನೀಡಿದೆ. ಆದರೆ ಹೆಚ್ಚುವರಿ ಅಂಕಗಳನ್ನು ನೀಡಿರುವ ಮಾನದಂಡವು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ. ಈ ವರ್ಷ ಪ್ರಕಟಿಸಲಾಗಿದ್ದ ಮಾರ್ಗಸೂಚಿ ಅನ್ವಯ ಹೆಚ್ಚುವರಿ ಅಂಕಗಳನ್ನು ನೀಡಲು ಅವಕಾಶವಿಲ್ಲ. ಆಶ್ಚರ್ಯಕರವೆಂಬಂತೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಮಾನ ಅಂಕಗಳನ್ನು ಗಳಿಸಿದ್ದಾರೆ. ಇದರೊಂದಿಗೆ, ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಅಥವಾ ಈ ಕುರಿತು ಸಮರ್ಪಕ ತನಿಖೆ ನಡೆಸಲಾಗಿಲ್ಲ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: Vijayanagara News: ಹೊಸಪೇಟೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಒಟ್ಟಾರೆಯಾಗಿ ನೀಟ್ ಪರೀಕ್ಷ ಫಲಿತಾಂಶದಲ್ಲಿನ ಪಾರದರ್ಶಕತೆ ಕೊರತೆ ಮತ್ತು ಭ್ರಷ್ಟಾಚಾರದ ಕುರಿತು ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ರಾಜ್ಯಮಟ್ಟದಲ್ಲಿ ಜಂಟಿ ಪ್ರವೇಶ ಪರೀಕ್ಷೆಗಳು ಜಾರಿಯಲ್ಲಿದ್ದಾಗ ಭ್ರಷ್ಟಾಚಾರದ ಕಾರಣ ಒಡ್ಡಿಯೇ ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯನ್ನು ಪ್ರಾರಂಭಿಸಲಾಗಿತ್ತು.
ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಶಿಕ್ಷೆ ವಿಧಿಸುವುದರ ಬದಲಿಗೆ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದು ಪರಿಹಾರವಲ್ಲ ಎಂದು ನಾವು ಆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದೆವು. ನಮ್ಮ ಎಚ್ಚರಿಕೆಯು ಇಂದು ನಿಜವಾಗಿದೆ. ಸರ್ಕಾರದ ನಿಷ್ಕಾಳಜಿ ಮತ್ತು ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವ್ಯಾಪಾರಿಕರಣದಿಂದಾಗಿ ಇಡೀ ವೈದ್ಯಕೀಯ ಪ್ರವೇಶ ಪರೀಕ್ಷೆಯು ಕುಸಿತಕ್ಕೊಳಗಾಗುತ್ತಿದೆ. ಮತ್ತು ಅಮಾಯಕ ವಿದ್ಯಾರ್ಥಿಗಳು ಇದರ ಬಲಿಪಶುಗಳಾಗಿದ್ದಾರೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿ ಒಟ್ಟು ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಇದರಲ್ಲಿ ಭಾಗಿಯಾದ ಎಲ್ಲ ವ್ಯಕ್ತಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: SSLC Examination 2 : 700ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಶುರು
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾಧ್ಯಕ್ಷ ಅಯ್ಯಾಳಪ್ಪ, ಜಿಲ್ಲಾ ಕಾರ್ಯದರ್ಶಿ ಬಸವರಾಜ, ಮಾನ್ವಿ ಸಂಘಟನಾ ಸಮಿತಿಯ ಸದಸ್ಯ ಎಸ್.ಎಫ್.ಎ. ಜೈದ್, ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.