ಲಿಂಗಸುಗೂರು: ಪುರಾಣ ಪ್ರಸಿದ್ಧ ತಾಲೂಕಿನ ಶ್ರೀ ಅಮರೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯ ಭರದಿಂದ (Raichur News) ಸಾಗಿದೆ.
ಶ್ರೀ ಅಮರೇಶ್ವರ ಜಾತ್ರೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯುವ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದ್ದು, ಈಗಾಗಲೇ ಮಾರ್ಚ್ 15 ರಿಂದ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಮಾ.23 ರಂದು ದೇವರ ಪ್ರಥಮ ಉತ್ಸವ ಹಾಗೂ ಗುರುಗಳು ಪಲ್ಲಕ್ಕಿ ಸಮೇತ ಗುರುಗುಂಟಾ ಸಂಸ್ಥಾನಕ್ಕೆ ತೆರಳಿ ದರ್ಬಾರ್ ರಾಜಬೀದಿಯಲ್ಲಿ ದೇವರ ಕಳಸ ಮೆರವಣಿಗೆ, ಪುರವಂತಿಕೆ ಸೇವೆಗಳು ನಡೆಯುವುದು.
ಇದನ್ನೂ ಓದಿ: Karnataka Weather : ಮಂಗಳೂರಿನಲ್ಲಿ ವರ್ಷದ ಮೊದಲ ವರ್ಷಧಾರೆ; ವಾರಾಂತ್ಯದಲ್ಲಿ ಹೇಗಿರಲಿದೆ ಮಳೆಯಾಟ?
ಮಾ.24ರಂದು ಗುರುಗುಂಟಾ ಸಂಸ್ಥಾನದಿಂದ ಅಮರೇಶ್ವರ ಕ್ಷೇತ್ರಕ್ಕೆ ಗುರುಗುಳ ಕಳಸ ಪಲ್ಲಕ್ಕಿಯೊಂದಿಗೆ ಆಗಮನ, ಸಂಜೆ ದೇವರ ದ್ವಿತೀಯ ಉತ್ಸವ, ಗುರುಗಳ ಕಳಸ, ಉತ್ಸವಮೂರ್ತಿ, ಗುಂತಗೋಳ ಸಂಸ್ಥಾನಕ್ಕೆ ತೆರಳಿ ನಂತರ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ, ವಿಶೇಷ ಪೂಜೆ ನಂತರ ರಾತ್ರಿ ಗುಂತಗೊಳ ಸಂಸ್ಥಾನದ ದರ್ಬಾರ್ ಮುಂಭಾಗದ ಅಮರೇಶ್ವರ ಕಟ್ಟಿಯಲ್ಲಿ ಸಂಸ್ಥಾನಿಕರಿಂದ ಪೂಜೆ ಜರುಗುವುದು. ಮಾ. 25ರಂದು ಹೋಳಿ ಹುಣ್ಣಿಮೆ ದಿನದಂದು ಗುಂತಗೊಳದಿಂದ ದೇವಾಲಯಕ್ಕೆ ಗುರುಗಳು, ಕಳಸ ಉತ್ಸವ ಮೂರ್ತಿ ಆಗಮನ ನಂತರ ತೃತೀಯ ಉತ್ಸವ ಹಾಗೂ ರಥಕ್ಕೆ ಕಳಸಾರೋಹಣ ಜರುಗಿದ ನಂತರ ಸಂಜೆ 6ಕ್ಕೆ ಅಮರೇಶ್ವರ ದೇವರ ಮಹಾರಥೋತ್ಸವ ನಡೆಯಲಿದೆ.
ಸ್ವಚ್ಛತೆಗೆ ಆದ್ಯತೆ
ಜಾತ್ರಾ ಮಹೋತ್ಸವ ಅಂಗವಾಗಿ ಸುಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಲ್ಕು ಮೊಬೈಲ್ ಶೌಚಾಲಯ ಸೇರಿ 55 ಶೌಚಾಲಯಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ಬಯಲು ಶೌಚಕ್ಕೆ ಮುಕ್ತಗೊಳಿಸಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ದೇವರಭೂಪುರ ಗ್ರಾ.ಪಂ ಹಾಗೂ ಹಟ್ಟಿ ಚಿನ್ನದ ಗಣಿ ವತಿಯಿಂದ ಸ್ವಚ್ಚತೆ ಕಾರ್ಯ ನಡೆದಿದೆ. ಅದರಂತೆ ಬೀದಿದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: Public Exam : ಮತ್ತೆ ಸುಪ್ರೀಂ ಮೆಟ್ಟಿಲು ಹತ್ತಲಿರುವ ರುಪ್ಸಾ; 5,8,9ನೇ ಕ್ಲಾಸ್ ಪರೀಕ್ಷೆಗೆ ಮತ್ತೆ ಕಂಟಕ?
ಕುಡಿಯುವ ನೀರಿನ ಸೌಲಭ್ಯ
ಈ ಬಾರಿ ಮಳೆರಾಯನ ಅವಕೃಪೆಯಿಂದ ಬರಗಾಲ ಪೀಡಿತವಾಗಿದ್ದರೂ ಕೂಡಾ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮೂರು ಭಾವಿಗಳನ್ನು ತುಂಬಿಸಲಾಗಿದೆ. ಎಂಟು ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಎರಡು ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಘಟಕದಿಂದ 20 ಲೀಟರ್ ನೀರಿಗೆ ಕೇವಲ 5 ರೂ ನಿಗದಿ ಮಾಡಲಾಗಿದೆ.
56 ಸಿಸಿ ಕ್ಯಾಮೆರಾ ಕಣ್ಗಾವಲು
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನಡೆಯದಂತೆ 56 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 150ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳ ಸಿಬ್ಬಂದಿಗಳು, ಎರಡು ಡಿಆರ್ ತುಕಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Collagen Foods: ಕೊಲಾಜಿನ್ ಇರುವ ಆಹಾರಗಳು ನಮಗೇಕೆ ಬೇಕು?
ತಹಸೀಲ್ದಾರರಿಂದ ಸಭೆ
ಜಾತ್ರೆಗೆ ಸಂಬಂಧಿಸಿದಂತೆ ಅಮರೇಶ್ವರ ದೇವಸ್ಥಾನದಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಕಳೆದ ವರ್ಷಕ್ಕಿಂತ ಈ ವರ್ಷ ಅಚ್ಚುಕಟ್ಟಾಗಿ ಜಾತ್ರಾ ಮಹೋತ್ಸವ ನಡೆಸಲು ಅಧಿಕಾರಿಗಳು ಸಹಕಾರ ನೀಡುವಂತೆ ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ ಅಧಿಕಾರಿಗಳಿಗೆ ಸೂಚಿಸಿದರು.