Site icon Vistara News

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Dalita Sangharsha samiti demands that Minister HK Patil should be dismissed from the Cabinet

ಲಿಂಗಸುಗೂರು: ಕಲ್ಯಾಣ ಕರ್ನಾಟಕ ಭಾಗದ ಕಲಂ 371 (ಜೆ) ಮೀಸಲಾತಿ ಮುಂದುವರೆಸದಂತೆ ಸಿಎಂಗೆ ಪತ್ರ ಬರೆದು ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ ಮಾಡುತ್ತಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರು, ಎಸಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ (Raichur News) ಸಲ್ಲಿಸಿದರು.

ಇದನ್ನೂ ಓದಿ: Fortis Hospital: ರೋಬೋಟಿಕ್‌ ನೆರವಿನಿಂದ ಇಬ್ಬರಿಗೆ ‘ಸಂಕೀರ್ಣ ಕಿಡ್ನಿ ಕಸಿ’ ಆಪರೇಷನ್ ಸಕ್ಸೆಸ್!

ಕಲ್ಯಾಣ ಕರ್ನಾಟಕ ಪ್ರದೇಶದ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಅಸಮತೋಲನ ನಿವಾರಣೆಗೆ ಸಂವಿಧಾನದ ಕಲಂ 371 (ಜೆ) ಅನುಷ್ಠಾನಕ್ಕೆ ತರಲಾಗಿದೆ. ಆದರೆ ಕಲ್ಯಾಣ ಕರ್ನಾಟಕೇತರ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೇಂದ್ರಿಕೃತ ದಾಖಲಾತಿ ಘಟಕ ಸಂಸ್ಥೆಗಳ ನೇಮಕಾತಿಯಲ್ಲಿ ಸಂವಿಧಾನದ ಕಲಂ 371 (ಜೆ) ದಡಿ ಮೀಸಲಾತಿ ಮುಂದುವರೆಸದಂತೆ ಸಚಿವ ಎಚ್.ಕೆ ಪಾಟೀಲ್‌, ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2024ರ ಜನವರಿ 22ರಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಕೆಇಎ, ಸಿಎಸಿ ಸಂಸ್ಥೆ ಮೂಲಕ ನೇಮಕ ಮಾಡುವ ಇಲಾಖೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕೇತರ ಭಾಗದ 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಬರೆದುಕೊಂಡಿರುವುದು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಡುತ್ತಿರುವ ಮಲತಾಯಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿವರಿಸಲಾಗಿದೆ.

ಸಂವಿಧಾನ ಕಲಂ 371 (ಜೆ) ರ ಅಡಿ ಸಿಗುವ ಸೌಲಭ್ಯಗಳನ್ನು ಯಥಾವತ್ತಾಗಿ ಮುಂದುವರೆಸಬೇಕು. ಅನ್ಯ ಜಿಲ್ಲೆ ಅಭ್ಯರ್ಥಿಗಳಿಗೆ ಅನ್ಯಾಯ ಆಗುವ ವಿಚಾರ ಮುಂದಿಟ್ಟು ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಸಚಿವ ಎಚ್.ಕೆ ಪಾಟೀಲರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಹೋರಾಟ ರೂಪಿಸಲಾಗುವುದು. ಮಧ್ಯ ಪ್ರವೇಶಿಸಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ, ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: SBI Rates: ಎಸ್‌ಬಿಐನಲ್ಲಿ ಎಫ್‌ಡಿ ಇಟ್ಟವರಿಗೆ ಬಂಪರ್‌ ನ್ಯೂಸ್;‌ ಭಾರಿ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್!

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಯಲ್ಲಪ್ಪ ಹಾಲಭಾವಿ, ಅಕ್ರಂ ಪಾಶಾ, ಹುಸೇನಪ್ಪ ನಾಯಕ, ಸುನೀಲ್‌ಕುಮಾರ, ಹನುಮೇಶ ಕುಪ್ಪಿಗುಡ್ಡ, ಹಾಗೂ ಇನ್ನಿತರಿದ್ದರು.

Exit mobile version