ಲಿಂಗಸುಗೂರು: ರಾಂಪುರ ಏತ ನೀರಾವರಿ ಯೋಜನೆ ಕಾಲುವೆಯ (Canal) ಹೆಚ್ಚುವರಿ ನೀರು ಹಾಗೂ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ (Rain) ತಾಲೂಕಿನ ಜಾಗಿರನಂದಿಹಾಳ ಗ್ರಾಮದ ಹಳ್ಳ ಭರ್ತಿಯಾಗಿ ಸಂಚಾರಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.
ರಾಂಪುರ ಏತ ನೀರಾವರಿ ಯೋಜನೆ ಕಾಲುವೆಯ ಹೆಚ್ಚುವರಿ ನೀರನ್ನು ಜಾಗಿರನಂದಿಹಾಳ-ಆನಾಹೊಸೂರು ನಡುವಿನ ಹಳ್ಳಕ್ಕೆ ಹರಿಬಿಡಲಾಗುತ್ತಿದೆ. ಹಳ್ಳಕ್ಕೆ ಅನೇಕ ವರ್ಷಗಳ ಹಿಂದೆ ಚಿಕ್ಕದಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ, ಸ್ವಲ್ಪ ಪ್ರಮಾಣದಲ್ಲಿ ನೀರು ಹರಿದರೂ ಸೇತುವೆ ಮುಳುಗಡೆಯಾಗುತ್ತಿದೆ. ಹರಿಯುವ ನೀರಲ್ಲಿಯೇ ಗ್ರಾಮಸ್ಥರು ನಡೆದುಕೊಂಡು ಅಥವಾ ಬೈಕ್‌ಗಳ ಮೂಲಕ ಆನಾಹೊಸೂರು ಗ್ರಾಮಕ್ಕೆ ತೆರಳುವುದು ಅನಿವಾರ್ಯವಾಗಿದೆ.
ರಾಂಪುರ ಏತ ನೀರಾವರಿ ಕಾಲುವೆಯ ಹೆಚ್ಚುವರಿ ಹಾಗೂ ಅಲ್ಪಸ್ವಲ್ಪ ಮಳೆ ನೀರು ಹರಿದುಬಂದಿದ್ದರಿಂದ ಎರಡ್ಮೂರು ದಿನಗಳಿಂದ ಹಳ್ಳದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಹಳ್ಳದಾಟಿ ಹೋಗುವುದೇ ಗ್ರಾಮಸ್ಥರಿಗೆ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: Yadgiri News: ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಪುನಶ್ಚೇತನಕ್ಕೆ ದತ್ತು ಕಾರ್ಯಕ್ರಮ: ಎಚ್. ಕೆ .ಪಾಟೀಲ್
2.50 ಕೋಟಿ ರೂ ಬಿಡುಗಡೆ
ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ ಈ ಹಿಂದಿನ ಶಾಸಕ ಡಿ.ಎಸ್.ಹೂಲಗೇರಿ ಅವರು 2.50 ಕೋಟಿ ರೂಪಾಯಿ ಅನುದಾನವನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದರು. ಆದರೆ ಸೇತುವೆ ಕಾಮಗಾರಿಗೆ ಟೆಂಡರ್ ಕರೆಯುವಲ್ಲಿ ಕೆಬಿಜೆಎನ್‌ಎಲ್ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದನ್ನು ವಿರೋಧಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರೋಡಲಬಂಡಾ (ಯುಕೆಪಿ) ನೀರಾವರಿ ಇಲಾಖೆ ಕಚೇರಿ ಎದುರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಇದೇ ನವೆಂಬರ್ 6ರಂದು ಟೆಂಡರ್ ಕರೆಯಲಾಗಿದೆ.
ವರ್ಷದಲ್ಲಿ 9 ತಿಂಗಳು ಹಳ್ಳದಲ್ಲಿ ನೀರು ಇದ್ದೇ ಇರುತ್ತೆ, ಇನ್ನೂ ಮಳೆಗಾಲದಲ್ಲಿ ನೀರಿನ ಮಟ್ಟ ಅಧಿಕವಾಗುತ್ತಿದೆ. ಇದರಿಂದ ಆನಾಹೊಸೂರು ಹಾಗೂ ಲಿಂಗಸುಗೂರಿನ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಹಾಗೂ ವ್ಯಾಪಾರ-ವಹಿವಾಟಿಗೆ ತೆರಳುವ ಗ್ರಾಮಸ್ಥರು ಹರಿಯುವ ನೀರಿನಲ್ಲಿಯೇ ಜೀವದ ಭಯಲೆಕ್ಕಿಸದೇ ತಿರುಗಾಡಬೇಕಾಗಿದೆ.ಇಲ್ಲವೇ ಜಾವೂರು ಗ್ರಾಮದ ಮೂಲಕ 22 ಕಿ.ಮೀ ಸುತ್ತವರಿದು ಲಿಂಗಸುಗೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ.
ಗ್ರಾಮದೊಳಗೆ ಬರಬೇಕಿದ್ದ ಬಸ್ ಕೂಡಾ ಗ್ರಾಮದ ಹೊರವಲಯದ ಹಳ್ಳದ ದಡಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ವಾಪಸ್ಸು ಹೋಗುವ ಪರಿಪಾಠ ನಡೆದಿದೆ. ಬೇಸಿಗೆ ಸಂದರ್ಭ ಹೊರತುಪಡಿಸಿ ಇನ್ನುಳಿದ ತಿಂಗಳು ಗ್ರಾಮಸ್ಥರು ಹಳ್ಳದ ಮೂಲಕ ತಾಪತ್ರಯ ಅನುಭವಿಸುವಂತಾಗಿದೆ.
ಇದನ್ನೂ ಓದಿ: Exam Tips: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೀಗೆ ತಯಾರಾಗಿ
ವರ್ಷದ 9 ತಿಂಗಳು ನಮ್ಮೂರಿನ ಹಳ್ಳದಲ್ಲಿ ನೀರು ಹರಿಯುತ್ತೆ ಈ ಹರಿಯುವ ನೀರಿನಲ್ಲಿ ಗ್ರಾಮಸ್ಥರು ಹರಸಾಹಸ ಪಟ್ಟು ತಿರುಗಾಡಬೇಕಾಗಿದೆ. ಸೇತುವೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು.
-ಶಿವಪುತ್ರಗೌಡ, ಜಾಗಿರನಂದಿಹಾಳ ಗ್ರಾಮಸ್ಥ.
ಜಾಗಿರನಂದಿಹಾಳ ಗ್ರಾಮದ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಹಿಂದಿನ ಶಾಸಕ ಡಿ.ಎಸ್.ಹೂಲಗೇರಿ ಅವರು 2.50 ಕೋಟಿ ರೂ ಅನುದಾನ ಕೆಬಿಜೆಎನ್‌ಎಲ್ ಮೂಲಕ ಬಿಡುಗಡೆಗೊಳಿಸಿದ್ದರು. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ 11 ತಿಂಗಳ ನಂತರ ಟೆಂಡರ್ ಕರೆಯಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಿ ಸಮಸ್ಯೆಗೆ ಮುಕ್ತಿ ನೀಡಬೇಕು.
-ಗದ್ದೆನಗೌಡ ಪಾಟೀಲ್, ಗ್ರಾಮದ ಮುಖಂಡ, ಜಾಗಿರನಂದಿಹಾಳ.