Site icon Vistara News

Raichur News: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ 3 ಸಾವಿರ ರೂ.ಗೆ ಹೆಚ್ಚಳ: ಸಚಿವ ಬೋಸರಾಜು

Minister NS Boseraju latest statement in lingasugur

ಲಿಂಗಸುಗೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ 3 ಸಾವಿರ ರೂ. ಗೆ ಹೆಚ್ಚಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಭರವಸೆ (Raichur News) ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಗೊಂಡು ಮಹಿಳೆಯರು, ಬಡವರಿಗೆ, ನಿರುದ್ಯೋಗಿಗಳಿಗೆ ಆಸರೆಯಾಗಿವೆ. ಕಳೆದ ಎಂಟು ತಿಂಗಳಲ್ಲಿ ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ರೂ ಖರ್ಚು ಮಾಡಲಾಗಿದೆ ಈ ವರ್ಷ 56 ಸಾವಿರ ಕೋಟಿ ಖರ್ಚು ಮಾಡಲಾಗುವುದು. ಗೃಹಲಕ್ಷಿ ಯೋಜನೆಯನ್ನು 3 ಸಾವಿರ ರೂ.ಗೆ, ಗೃಹಜ್ಯೋತಿ 300 ಯುನಿಟ್‌ಗೆ ಹೆಚ್ಚಿಸಲಾಗುವುದು, ಮಹಿಳೆಯರು ಎಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಅವಕಾಶ ಒದಗಿಸುವ ಚಿಂತನೆ ಇದೆ. ಇದನ್ನು ಸಾಕಾರಗೊಳಿಸಲು ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Tumkur News: ಕೇಂದ್ರ ಸರ್ಕಾರದಿಂದ ತಾರತಮ್ಯ ಧೋರಣೆ: ಪರಮೇಶ್ವರ್ ಆರೋಪ

ಯುಪಿಎ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಸ್ಥಾನಮಾನ ನೀಡುವ ಮೂಲಕ ಈ ಭಾಗದಲ್ಲಿ ಶಿಕ್ಷಣ, ಉದ್ಯೋಗ, ಬಡ್ತಿಯಲ್ಲಿ ಮೀಸಲಾತಿ ದೊರೆತು ಅಭಿವೃದ್ಧಿಯತ್ತ ಸಾಗುತ್ತಿದೆ. ಕೆಕೆಆರ್‌ಡಿಬಿಗೆ ಮೂರು ಸಾವಿರ ಕೋಟಿ ರೂ ಅನುದಾನ ನೀಡಲಾಗಿತ್ತು. ಈಗ ಅದನ್ನು 5 ಸಾವಿರ ಕೋಟಿ ರೂ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 120 ಕೋಟಿ ರೂ ದೊರೆಯುವಂತಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ತಾರತಮ್ಯ ಮಾಡುತ್ತಿದೆ. ಐದು ವರ್ಷದಲ್ಲಿ ಒಂದು ಯೋಜನೆಯೂ ರಾಜ್ಯಕ್ಕೆ ನೀಡಿಲ್ಲ, ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೆ ಸಾಕಷ್ಟು ಅನುದಾನ ನೀಡುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: Tumkur News: ಹಂಚಿಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

ಸಣ್ಣ ನೀರಾವರಿ ಇಲಾಖೆಗೆ 2300 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದೇನೆ ಆದರೆ ಈವರಿಗೂ ಒಂದು ರೂಪಾಯಿ ಕೂಡಾ ಬಿಡುಗಡೆಯಾಗಿಲ್ಲ, ರಾಜ್ಯದಿಂದ ಸಂಸದರಾದ 26 ಸಂಸದರು ಇದರ ಬಗ್ಗೆ ಧ್ವನಿ ಎತ್ತದೇ ಮೌನವಹಿಸಿರುವುದು ದುರಂತವಾಗಿದೆ. ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಮೂರೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ, ಕೆಪಿಟಿಸಿಎಲ್ ಎಂಡಿಯಾಗಿದ್ದ ವೇಳೆ ಜಿಲ್ಲೆಯಲ್ಲಿರುವ ಆರ್‌ಟಿಪಿಎಸ್, ವೈಟಿಪಿಎಸ್ ಪ್ರಗತಿಗೆ ಶ್ರಮವಹಿಸಿದ್ದೇನೆ. ಜಿಲ್ಲೆಗೂ ನನ್ನ ಕುಟುಂಬಕ್ಕೂ ಅವಿನಾಭಾವ ನಂಟು ಇದೆ. ನಾನೂ ಹೊರಗಿವನಲ್ಲ ಎಂದು ತಿಳಿಸಿದರು.

ಜಿಲ್ಲೆಯ ಜನರ ನಾಡಿ ಮಿಡಿತ ಬಲ್ಲವನಾಗಿದ್ದೇನೆ. ಕೃಷ್ಣಾ-ತುಂಗಾ ನದಿಗಳ ಮಧ್ಯೆಯಲ್ಲಿದ್ದರೂ ರಾಯಚೂರು-ಯಾದಗಿರಿ ಜಿಲ್ಲೆಗಳಿಗೆ ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿ ಇದೆ. ಈ ಹಣೆಪಟ್ಟಿ ಹೋಗಲಾಡಿಸುವ ಕೆಲಸ ಮಾಡಬೇಕಾಗಿದೆ. 35 ವರ್ಷಗಳ ಕಾಲ ಸರ್ಕಾರಿ ಸೇವೆ ಮಾಡಿದ ಅನುಭವದೊಂದಿಗೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಪ್ರಯತ್ನ ಮಾಡುವೆ, ಅದಕ್ಕೆ ಮತದಾರರು ಶಕ್ತಿ ನೀಡಬೇಕು ಎಂದರು.

ಇದನ್ನೂ ಓದಿ: Karnataka Weather : ಶಿವಮೊಗ್ಗದಲ್ಲಿ ತುಂತುರು ಮಳೆ; ನಾಳೆ, ನಾಡಿದ್ದು ತಾಪಮಾನ ದುಪ್ಪಟ್ಟು

ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿ, ಕೆಪಿಸಿಸಿ ಸದಸ್ಯ ಅಮರಗುಂಡಪ್ಪ ಮೇಟಿ, ಪ್ರಮುಖರಾದ ಟಿ.ಆರ್.ನಾಯ್ಕ, ಕೆ.ಶರಣಪ್ಪ, ಕೆ.ಶಾಂತಪ್ಪ, ದಾವೂದ್‌ಸಾಬ್‌, ಡಿ.ಜಿ.ಗುರಿಕಾರ, ಶಿವಾನಂದ ಐದನಾಳ, ಜಯಂತರಾವ್ ಪತಂಗೆ, ಶಿವಮೂರ್ತಿ, ವೇಣುಗೋಪಾಲ್ ಹಾಗೂ ಗೋವಿಂದ ನಾಯಕ, ಶಿವಶಂಕರಗೌಡ, ವಿಜಯಲಕ್ಷ್ಮಿ ದೇಸಾಯಿ, ಅಮ್ಜದ್ ಶೇಠ್, ಲಕ್ಷ್ಮಿಬಾಯಿ, ಮಂಜುಳಾ ಬಡಿಗೇರ್, ಗದ್ದೆನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.

Exit mobile version