ಮಾನ್ವಿ: ನೀಟ್ ಮತ್ತು ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ತನಿಖೆಗೆ ಒಳಪಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಮಾನ್ವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ (Raichur News) ನಡೆಸಲಾಯಿತು. ಪಟ್ಟಣದ ಬಸವವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ, ತಹಸೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಎನ್.ಟಿ.ಎ ನಡೆಸುವ ನೀಟ್ ಮತ್ತು ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮವು ಪರೀಕ್ಷೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಕುಗ್ಗಿಸಿದೆ. ಕೇಂದ್ರ ಸರ್ಕಾರ ನಡೆಸುವ ಕೇಂದ್ರಿಕೃತ ಪರೀಕ್ಷೆಯಲ್ಲಿ ನಡೆದ ಲೋಪದೋಷವು ಸರ್ಕಾರ ಮತ್ತು ಕೋಚಿಂಗ್ ಸೆಂಟರ್ ಗಳ ನಡುವಿನ ಅವ್ಯವಹಾರವನ್ನು ಬಯಲಿಗೆ ಎಳೆದಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷೆಗಳನ್ನು ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹಿಯಾಗಿ ನಡೆಸುವಲ್ಲಿ ಸಂಪೂರ್ಣ ವಿಫಲವಾದ ಕೇಂದ್ರಿಯ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಡೀ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Kalaburagi News: ಪಂಢರಪುರ, ತುಳಜಾಪುರ ಮಾದರಿಯಲ್ಲಿ ಗಾಣಗಾಪುರ ಕ್ಷೇತ್ರ ಅಭಿವೃದ್ಧಿ
ವೈದ್ಯಕೀಯ ಸೀಟು ಪಡೆಯಲು ನೀಟ್ ಪರೀಕ್ಷೆಯು ಕಡ್ಡಾಯವಾಗಿದ್ದು, ಇದನ್ನು ಪಡೆಯಲು ಕೋಚಿಂಗ್ ಪಡೆಯಬೇಕೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಹಿಂದೆ ಬಹುದೊಡ್ಡ ಕೋಚಿಂಗ್ ಮಾಫಿಯಾ ನಡೆಯುತ್ತಿದೆ. ಪ್ರತಿ ವರ್ಷ ನೀಟ್ ತಯಾರಿಗಾಗಿ ವಿದ್ಯಾರ್ಥಿಗಳು ಲಕ್ಷಗಟ್ಟಲೆ ಹಣ ನೀಡಿ ತರಬೇತಿ ಪಡೆಯುತ್ತಿದ್ದಾರೆ. ಒಂದರ್ಥದಲ್ಲಿ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ನೇರವಾಗಿ ವೈದ್ಯಕೀಯ ಶಿಕ್ಷಣದಿಂದ ವಂಚಿಸುತ್ತಿದೆ. ಉಳ್ಳವರಿಗೆ ಮಾತ್ರ ವೈದ್ಯಕೀಯ ಸೀಟು ಲಭ್ಯವೆಂಬಂತೆ ವ್ಯವಸ್ಥೆ ನಿರ್ಮಿಸಲಾಗಿದೆ, ಅತೀ ಹೆಚ್ಚು ವೈದ್ಯಕೀಯ ಸೀಟುಗಳನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ ಬಹಳ ಕಡಿಮೆ ಸೀಟುಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಗುತ್ತಿವೆ, ಇದು ರಾಜ್ಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರವು ವೈದ್ಯಕೀಯ ಮತ್ತು ಇತರೆ ಉನ್ನತ ಶಿಕ್ಷಣ ಪ್ರವೇಶಾತಿಗೆ ನಡೆಸುವ ಕೇಂದ್ರಿಕೃತ ಪರೀಕ್ಷೆಯನ್ನು ರದ್ದುಪಡಿಸಬೇಕು ಹಾಗೂ ಆಯಾ ರಾಜ್ಯಗಳು ಪರೀಕ್ಷೆಯನ್ನು ನಡೆಸಲು ಕೇಂದ್ರ ಸರ್ಕಾರವು ಸ್ವಾಯತ್ತತೆಯನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಎಲ್ಲಾ ದುಷ್ಕರ್ಮಿಗಳಿಗೆ ಕೂಡಲೆ ಅಮಾನತ್ತು ಮಾಡಿ ತಕ್ಕ ಶಿಕ್ಷೆಗೆ ಒಳಪಡಿಸಬೇಕು. ನೀಟ್, ಯುಜಿಸಿ, ಪಿಜಿ ನೀಟ್ ಪರೀಕ್ಷೆ ರದ್ದತಿಯ ಕುರಿತು ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಇದನ್ನೂ ಓದಿ: Job Alert: ಗ್ರಾಮೀಣ ಬ್ಯಾಂಕ್‌ಗಳಲ್ಲಿ 586 ಹುದ್ದೆ; ಗಮನಿಸಿ-ಅರ್ಜಿ ಸಲ್ಲಿಸಲು ನಾಳೆಯೇ ಅಂತಿಮ ದಿನ
ಪ್ರತಿಭಟನೆಯಲ್ಲಿ ಎಸ್ಐಒ ರಾಜ್ಯಾಧ್ಯಕ್ಷ ಜಿಶಾನ್ ಅಖಿಲ್ ಸಿದ್ದಿಖಿ, ಎಚ್.ಕೆ.ಎಸ್.ಎಫ್. ರಾಜ್ಯಾಧ್ಯಕ್ಷ ಮಲ್ಲೇಶ್ ಮಾಚನೂರು, ವಂದೇ ಮಾತರಂ ಯುವ ಸಂಘ ಅಧ್ಯಕ್ಷ ಮಹೆಬೂಬ್ ಮದ್ಲಾಪುರ, ಮೊಹಮ್ಮದ್ ಬೇಗ್, ಸುರೇಶ ಬೈಲ್ ಮರ್ಚೇಡ್, ಬಂಡೆಗುರು ಕರೆಗುಡ್ಡ ಸೇರಿದಂತೆ ವಿದ್ಯಾರ್ಥಿ ಸಂಘದ ಒಕ್ಕೂಟದ ಮುಖಂಡರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.