Site icon Vistara News

Raichur News: ರಾಯಚೂರು ಕ್ಷೇತ್ರಕ್ಕೆ 40 ಸಾವಿರ ಕೋಟಿ ಅನುದಾನ: ರಾಜಾ ಅಮರೇಶ್ವರ ನಾಯಕ

Raichur Lok Sabha constituency BJP candidate Raja Amareshwara nayaka latest statement

ಲಿಂಗಸುಗೂರು: ರಾಯಚೂರು-ಯಾದಗಿರಿ ಲೋಕಸಭಾ ಕ್ಷೇತ್ರಕ್ಕೆ (Raichur News) ಕಳೆದ 5 ವರ್ಷಗಳಲ್ಲಿ 40 ಸಾವಿರ ಕೋಟಿ ಅನುದಾನ ತಂದು, ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ ಎಂದು ಸಂಸದ, ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ದಿ. ಬಾಬು ಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಗೌರವ ನಮನ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.

ದೇಶದ ಏಕತೆಗಾಗಿ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಹಾಕಿಕೊಟ್ಟ ಮಾರ್ಗದಲ್ಲಿ ದೇಶವನ್ನು ಮುನ್ನೆಡೆಸುತ್ತಿದ್ದಾರೆ. ಪಕ್ಷದ ವರಿಷ್ಠರು ನನಗೆ ಎರಡನೇ ಬಾರಿ ಬಿಜೆಪಿ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ: Vande Bharat Express: ಚೆನ್ನೈ-ಬೆಂಗಳೂರು-ಮೈಸೂರು: ಹೀಗಿದೆ ನೋಡಿ ವಂದೇ ಭಾರತ್ ರೈಲಿನ ವೇಳಾಪಟ್ಟಿ

ಕಳೆದ ಐದು ವರ್ಷದ ಅವಧಿಯಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದರಿಂದ ಅಧಿವೇಶನದ ಹಾಜರಾತಿಯಲ್ಲಿ ದೇಶದಲ್ಲಿ 9ನೇ ಸ್ಥಾನ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇನೆ ಎಂದ ಅವರು, ರಾಯಚೂರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ, ಯಾದಗಿರಿಗೆ ಮೆಡಿಕಲ್ ಕಾಲೇಜು, ಇಎಸ್‌ಐ ಆಸ್ಪತ್ರೆ, ಹೈದರಾಬಾದ್-ಪಣಜಿ ಸೇರಿದಂತೆ ಅನೇಕ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕುಡಿವ ನೀರಿನ ಯೋಜನೆಗಳು ಸೇರಿದಂತೆ ಅನೇಕ ಯೋಜನೆಗಳ ಮುಖಾಂತರ ಕ್ಷೇತ್ರಕ್ಕೆ 40 ಸಾವಿರ ಕೋಟಿ ರೂ ಅನುದಾನ ತಂದಿದ್ದೇನೆ ಎಂದರು.

ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ದೇಶ 7ನೇ ಸ್ಥಾನದಲ್ಲಿದೆ. ಮುಂದಿನ ಐದು ವರ್ಷದಲ್ಲಿ ಮೂರನೇ ಸ್ಥಾನಕ್ಕೆ ತರುವುದಾಗಿ ನರೇಂದ್ರ ಮೋದಿಯವರು ಸಂಕಲ್ಪ ಮಾಡಿದ್ದಾರೆ. 2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಕಳೆಯುತ್ತೆ, ಅಷ್ಟೋತ್ತಿಗೆ ದೇಶ ನಂಬರ್ 1 ಸ್ಥಾನಕ್ಕೇರಬೇಕು ಎಂಬುದು ಮೋದಿಯವರ ಕನಸಾಗಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಮಂತ್ರಿಯನ್ನಾಗಿ ಮಾಡಲು ದೇಶದ ಮತದಾರರು ನಿಶ್ಚಯ ಮಾಡಿದ್ದಾರೆ ಎಂದರು.

ಇದನ್ನೂ ಓದಿ: Cholera Outbreak: ಕಾಲರಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಇಲ್ಲ: ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್

ಹೊರಗಿನವರಿಗೆ ಕಾಂಗ್ರೆಸ್ ಮಣೆ

ಯಾದಗಿರಿ-ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಮರ್ಥ ನಾಯಕರಿಗೆ ಟಿಕೆಟ್ ನೀಡದೇ ಬೆಂಗಳೂರಿನ ಜಿ.ಕುಮಾರ ನಾಯಕ್ ಅವರಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಸ್ಥಳೀಯರಿಗೆ ಕೈಕೊಟ್ಟಿದೆ ಎಂದು ಆರೋಪಿಸಿದರು.

ಮೂರು ವರ್ಷದಲ್ಲೇ ಲಿಂಗಸುಗೂರಿನಲ್ಲಿ ರೈಲು ಓಡಾಟ

ಈ ಭಾಗದ ಜನರ ಬಹುವರ್ಷಗಳ ಕನಸಾಗಿರುವ ಗದಗ-ವಾಡಿ ರೈಲ್ವೇ ಯೋಜನೆ ಕುಷ್ಟಗಿವರೆಗೆ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನು ಶಹಾಪುರ, ಸುರಪುರ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ ಎಂದ ಅವರು, ಲಿಂಗಸುಗೂರಿನ ಜನತೆ ಇನ್ನು ಮೂರೇ ವರ್ಷದಲ್ಲಿ ರೈಲಿನಲ್ಲಿ ಓಡಾಡಬಹುದಾಗಿದೆ. ಇನ್ನುಳಿದ ಮಹತ್ವದ ಯೋಜನೆಗಳು ಮಂಜೂರಾತಿ ಹಂತದಲ್ಲಿವೆ ಅವುಗಳ ಮಂಜೂರಾತಿಗಾಗಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.

ಗುಂಪುಗಾರಿಕೆ ಇಲ್ಲ

ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಟಿಕೆಟ್ ಕೇಳೋದು ಪ್ರತಿಯೊಬ್ಬರ ಹಕ್ಕಾಗಿದೆ ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಟಿಕೆಟ್ ವಂಚಿತರೊಂದಿಗೆ ಮಾತನಾಡಿದ್ದೇನೆ. ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದಿದ್ದೇನೆ. ಬಿಜೆಪಿ- ಜೆಡಿಎಸ್ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಎರಡು ಪಕ್ಷಗಳು ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಲಿವೆ ಎಂದರು.

ಏ.18 ರಂದು ನಾಮಪತ್ರ ಸಲ್ಲಿಕೆ

ಏ.18 ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಎರಡು ಜಿಲ್ಲೆಗಳ ಎನ್‌ಡಿಎ ಮುಖಂಡರು ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಚಂದ್ರಶೇಖರ್ ಅವರನ್ನು ಆಹ್ವಾನಿಸಿದ್ದೇನೆ ಎಂದ ಅವರು, ಸಿಂಧನೂರಿನಲ್ಲಿ ಪ್ರಧಾನಿಮಂತ್ರಿ ನರೇಂದ್ರ ಮೋದಿ ಹಾಗೂ ರಾಯಚೂರಿನಲ್ಲಿ ನಟ ಪವನ್ ಕಲ್ಯಾಣ್‌ ಪ್ರಚಾರ ಸಭೆ ನಡೆಸಲಿದ್ದಾರೆ. ಇನ್ನುಳಿದಂತೆ ರಾಷ್ಟ್ರ ಹಾಗೂ ರಾಜ್ಯ ನಾಯಕರು ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ: Youngest Billionaire: 19 ವರ್ಷದ ವಿದ್ಯಾರ್ಥಿನಿ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದು ಹೇಗೆ? ಇಲ್ಲಿದೆ ಮನಿ ಸೀಕ್ರೆಟ್​​

ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು, ಹುಲ್ಲೇಶ ಸಾಹುಕಾರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ವೀರನಗೌಡ ಲೆಕ್ಕಿಹಾಳ, ಈಶ್ವರ ವಜ್ಜಲ್, ಜಗನ್ನಾಥ ಕುಲಕರ್ಣಿ, ಜೀವಲೆಪ್ಪ ನಾಯ್ಕ, ನಾರಾಯಣಪ್ಪ ನಾಯ್ಕ, ದ್ಯಾಮಣ್ಣ ನಾಯಕ, ಮಾನಪ್ಪ ನಾಯಕ, ಅಮರೇಶ ಮಡ್ಡಿ, ಬಸವರಾಜ ಗುತ್ತೆದಾರ, ನಿಂಗಣ್ಣ ದೇವಿಕೇರಿ, ಸುನೀತಾ ಕೆಂಭಾವಿ, ಡಾ.ಜ್ಯೋತಿ ಸುಂಕದ್, ಜಯಶ್ರೀ ಭೋವಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version