ರಾಯಚೂರು: ಆರ್‌ಟಿಪಿಎಸ್‌ನಲ್ಲಿ ರೈಲು ಅಪಘಾತ ಸಂಭವಿಸಿ ಒಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ.
ನಾಗರಾಜ್ (32) ಮೃತ ಗುತ್ತಿಗೆ ಕಾರ್ಮಿಕ. ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಘಟನೆ ನಡೆದಿದೆ. ಕಲ್ಲಿದ್ದಲು ಸಾಗಿಸುವ ರೈಲಿನ ರೇಕ್ ಹರಿದು ಗುತ್ತಿಗೆ ಕಾರ್ಮಿಕರಾದ ಇವರು ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದಾಗ ಇವರು ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸದಲ್ಲಿ ತೊಡಗಿದ್ದರು. ಕೆಲಸದ ವೇಳೆ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದಿರುವ ಶಂಕೆಯಿದೆ. ರೈಲು ಕುತ್ತಿಗೆ ಮೇಲೆ ಹರಿದದ್ದರಿಂದ ರುಂಡ ಮುಂಡ ಬೇರ್ಪಟ್ಟಿದೆ.
ಸಾಲಭಾದೆ ತಾಳದೆ ಇಬ್ಬರು ರೈತರ ಆತ್ಮಹತ್ಯೆ
ಮೈಸೂರು: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ತಾಲ್ಲೂಕು ಶ್ಯಾನಭೋಗನಹಳ್ಳಿಯಲ್ಲಿ ಸುರೇಶ್ (58) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಎಕರೆ ಜಮೀನು ಹೊಂದಿದ್ದ ರೈತರಾಗಿದ್ದ ಇವರು ಬ್ಯಾಂಕ್, ಸೊಸೈಟಿ ಸೇರಿ 7 ಲಕ್ಷ ರೂ. ಸಾಲ ಮಾಡಿದ್ದಋು. ಬೆಳೆ ಕೈ ಕೊಟ್ಟ ಹಿನ್ನೆಲೆ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ ತಂಬಾಕು, ರಾಗಿ ಬೆಳೆ ಬೆಳೆದಿದ್ದರು. ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು 8 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಹೆಚ್ಚಾಗಿದ್ದ ಬಡ್ಡಿ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: UDR Case: ಕಟ್ಟಡ ಅಡಿಪಾಯದ ಗುಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು