ರಾಯಚೂರು: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಬಿಸಿಲು ಈಗಲೇ ಸಹಿಸುವುದಕ್ಕೆ ಅಸಾಧ್ಯವಾಗಿದೆ. ಇದು ಜಸ್ಟ್ ಸ್ಯಾಂಪಲ್ ಇನ್ನೂ ತಾಪಮಾನ (Temperature Warning ) ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಹವಾಮಾನ ತಜ್ಞರಿಂದ ದೊರೆತಿದೆ. ಮನೆಯಲ್ಲಿ, ಆಫೀಸ್‌ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ತತ್ತರಿಸಿದ್ದಾರೆ. ಉರಿಯುತ್ತಿರುವ ಸೂರ್ಯನ ಶಾಖಕ್ಕೆ (Heat wave) ಸ್ವಲ್ಪ ಹೊತ್ತು ಮೈಒಡ್ಡಿದ್ರೆ ಸಾಕು ಸುಟ್ಟು ಹೋಗುವಷ್ಟು ತೀವ್ರತೆ ಇದೆ. ಸದ್ಯ ಈ ಉರಿ ಬಿಸಿಲಿನಲ್ಲೇ ರಾಯಚೂರು ಮಂದಿ ಪ್ರಯೋಗವನ್ನು ಮಾಡಿದ್ದಾರೆ. ಬೆಂಕಿ ಇಲ್ಲದೆ ಬಿಸಿಲಲ್ಲೇ ಮೊಟ್ಟೆ ಬೇಯಿಸಿ ತಿಂದಿದ್ದಾರೆ.
ಜನರು ಈಗಾಗಲೇ ಬಿಸಿಲಿನ ಶಾಖದಿಂದ ತತ್ತರಿಸಿ ಹೋಗಿದ್ದು, ಮನೆಯಿಂದ ಹೊರಗೆ ಬರಲು ಆಗದಷ್ಟು ತಾಪಮಾನ ಹೆಚ್ಚಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ಯುವಕರು ಪ್ರಯೋಗ ಮಾಡಿದ್ದಾರೆ. ಬಿಸಿಲಿನಿಂದಲೇ ಮೊಟ್ಟೆಯ ಆಮ್ಲೆಟ್ ಮಾಡಿದ್ದಾರೆ.
ಬಿಸಿಲು ಅದ್ಯಾವ ಪರಿ ಇದೆ ಎಂಬ ಕುತೂಹಲಕ್ಕಾಗಿ ಬೆಂಕಿ ಇಲ್ಲದೆ ಬಿಸಿಲಿನಲ್ಲಿ ಒಂದೂವರೆ ಗಂಟೆವರೆಗೆ ಕಬ್ಬಿಣದ ತವಾ ಇಟ್ಟಿದ್ದಾರೆ. ಅದು ಕಾದ ನಂತರ ಮೊಟ್ಟೆ ಒಡೆದು ಆಮ್ಲೆಟ್ ತಯಾರಿಸಿ ತಿಂದಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿ ದಿನ 44 ರಿಂದ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದೆ.
ಇದನ್ನೂ ಓದಿ: Yakshagana Artist: ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
ವಿದ್ಯುತ್ ಕಂಬದ ಲೈನ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್
ಇತ್ತ ರಾಯಚೂರಿನಲ್ಲಿ ದಿನೇದಿನೆ ಬಿಸಿಲು ಹೆಚ್ಚಳವಾಗುತ್ತಿದ್ದು, ಏರ್ ಕೂಲರ್ ಮತ್ತು ಎಸಿ ಬಳಕೆ ಅಧಿಕವಾಗಿದೆ. ರಾಯಚೂರು ನಗರದ ಗಾಂಧಿ ಚೌಕ್ ಬಳಿಯ ಖಾಸಗಿ ಆಸ್ಪತ್ರೆ ಪಕ್ಕದಲ್ಲಿ ವಿದ್ಯುತ್ ಲೋಡ್ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಕೂದಲೆಳೆ ಅಂತರದಲ್ಲಿ ಅನಾಹುತ ತಪ್ಪಿದೆ.
ವಿದ್ಯುತ್ ಕಂಬದಲ್ಲಿದ್ದ ಲೈನ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಸಿನಿಮಾ ಸ್ಟೈಲ್‌ನಲ್ಲಿ ಸ್ಪಾರ್ಕ್ ಉಂಟಾಗಿತ್ತು. ಕೆಲ ಹೊತ್ತು ಸ್ಪಾರ್ಕ್ ನೋಡಿದ ಜನರು ಗಾಬರಿ ಆದರು. ಸದರ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ