ಕಾರವಾರ: ರೈಲು ನಿಲುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈಲು ತಡೆದು ಪ್ರತಿಭಟನೆ (Rail Roko protest) ನಡೆಸಿದ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ನಡೆದಿದೆ.
ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಜನಶಕ್ತಿ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಸೇರಿದಂತೆ ಐವತ್ತಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಮಂಗಳೂರಿನಿಂದ ಮಡಗಾಂವ್‌ಗೆ ತೆರಳುವ ಮೆಮು ರೈಲನ್ನು ಎಕ್ಸ್‌ಪ್ರೆಸ್ ರೈಲನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದನ್ನು ವಿರೋಧಿಸಿ ರೈಲು ಹಳಿಯ ಮೇಲೆ ಮಲಗಿ, ಪ್ಯಾಸೆಂಜರ್ ರೈಲು ತಡೆದು ಪ್ರತಿಭಟಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | ನಾ ನಾಯಕಿ | ಸೋನಿಯಾ ಗಾಂಧಿಯವರ ಕನಸು ನನಸಾಗಿಸುತ್ತೇವೆ: ಸಮಾವೇಶದಲ್ಲಿ ಕಾಂಗ್ರೆಸ್ ಪ್ರತಿಜ್ಞೆ
ಮೆಮು ರೈಲನ್ನು ಮೇಲ್ದರ್ಜೆಗೇರಿಸಿರುವುದರಿಂದ ಅಂಕೋಲಾ ತಾಲೂಕಿನ ಹಾರವಾಡ, ಕುಮಟಾದ ಮಿರ್ಜಾನ್ ಹಾಗೂ ಭಟ್ಕಳ ತಾಲೂಕಿನ ಚಿತ್ರಾಪುರ ರೈಲು ನಿಲ್ದಾಣಗಳಲ್ಲಿ ರೈಲಿನ ನಿಲುಗಡೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಣಾಮ ಸ್ಥಳೀಯರು ವಿವಿಧೆಡೆ ಕೆಲ ಕಾರ್ಯಗಳಿಗೆ ತೆರಳಲು ಅಡ್ಡಿಯಾಗಿದ್ದು, ಈ ಹಿಂದಿನಂತೆ ಮೆಮು ರೈಲನ್ನು ಪ್ಯಾಸೆಂಜರ್ ರೈಲಾಗಿ ಓಡಿಸುವಂತೆ ಪ್ರತಿಭಟಿಸಿ, ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಿ.ಬಿ.ನಿಕ್ಕಂ ಅವರಿಗೆ ಮನವಿ ಸಲ್ಲಿಸಲಾಯಿತು.
10 ದಿನದೊಳಗೆ ಪ್ರತಿಭಟನಾಕಾರರ ಮನವಿ ಈಡೇರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಈ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಸಾಂಕೇತಿಕವಾಗಿ ರೈಲ್ ರೋಕೋ ಪ್ರತಿಭಟನೆ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ರೈಲು ನಿಲ್ದಾಣದ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನೂ ಓದಿ | Supreme Court Collegium | ಜಡ್ಜ್ ನೇಮಕದಲ್ಲಿ ಸರ್ಕಾರದ ಪ್ರತಿನಿಧಿ ಇರಬೇಕು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪತ್ರ