Site icon Vistara News

Rain Effect | ನಿತ್ಯ ಪ್ಯಾಂಟ್‌ ಕಳಚಿ ಹಳ್ಳ ದಾಟುವ ಮಕ್ಕಳು; ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಪರದಾಟ

ಹಳ್ಳ ದಾಟುವ ಮಕ್ಕಳು

ರಾಯಚೂರು: ಈ ಮಕ್ಕಳು ಶಾಲೆಗೆ ಹೋಗಬೇಕಾದರೆ ಹಳ್ಳದಾಟಲೇಬೇಕು. ಹೀಗಾಗಿ ಮಳೆಗಾಲ (Rain Effect) ಬಂದರೆ ಸಾಕು ಅವರು ನಿತ್ಯ ಪ್ಯಾಂಟ್‌ ಕಳಚಿ, ಬ್ಯಾಗ್‌ ಅನ್ನು ತಲೆಯ ಮೇಲೆ ಹೊತ್ತುಕೊಂಡು ಹಳ್ಳ ದಾಟಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು, ಈ ಕಾರಣಕ್ಕಾಗಿಯೇ ಎಷ್ಟೋ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಹೌದು, ಈ ದೃಶ್ಯಗಳು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ಪ್ರತಿದಿನ ಕಂಡುಬರುತ್ತವೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಜೀವ ಪಣಕ್ಕಿಟ್ಟು ಕೈಯಲ್ಲಿ ಬ್ಯಾಗ್​, ಚಪ್ಪಲಿ ಹಾಗೂ ಧರಿಸಿದ್ದ ಪ್ಯಾಂಟ್‌​​ ಅನ್ನೇ ಕಳಚಿ ತಲೆಮೇಲೆ ಹೊತ್ತು ಹಳ್ಳದಾಟಿ ಶಾಲೆಗೆ ಹೋಗುವ ದೃಶ್ಯ ಬೇಸರ ತರಿಸುತ್ತಿದೆ. ಹೀಗೆ ಅರೆಬೆತ್ತಲೆಯಾಗಿ ಹಳ್ಳ ದಾಟಿ ಶಾಲೆಗಳಿಗೆ ತೆರಳುವ ದುಸ್ಥಿತಿ ಇಲ್ಲಿನ ವಿದ್ಯಾರ್ಥಿಗಳದ್ದಾಗಿದ್ದು, ಈ ಕಾರಣಕ್ಕಾಗಿಯೇ ಶಾಲೆ ತೊರೆದವರ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ಅದರಲ್ಲಿ ಬಾಲಕಿಯರ ಸಂಖ್ಯೆಯೂ ಸೇರಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ನಮ್ಮ ಮನೆಯ ಹೆಣ್ಣು‌ ಮಕ್ಕಳು ಶಾಲೆಗೆ ಹೋಗಬೇಕು ಎಂಬ ಆಸೆಯಿದೆ. ಇಂತಹ ದುಸ್ಥಿತಿ ಇರುವುದರಿಂದ ಹೇಗೆ ಕಳುಹಿಸಬೇಕು. ರಾಜಕಾರಣಿಗಳನ್ನು ಮಾಡುವವರನ್ನು ಕೇಳಿ ಕೇಳಿ ಸಾಕಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಹೇಸರು ಹೇಳಲು ಇಚ್ಛಿಸದ ಪಾಲಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಮಕ್ಕಳು ಈ ಹಳ್ಳವನ್ನು ದಾಟಿಯೇ ಶಾಲೆ-ಕಾಲೇಜುಗಳಿಗೆ ತೆರಳಬೇಕು. ಇನ್ನಾದರೂ ಜಿಲ್ಲಾಡಳಿತ ಈ ಗ್ರಾಮಕ್ಕೆ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | School Girl Suicide | ಶಿಕ್ಷಕರ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಶಾಲೆ ಮೇಲೆ ಜನರ ದಾಳಿ, ಬಸ್‌ಗೆ ಬೆಂಕಿ

Exit mobile version