ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಭೂಕುಸಿತ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು ಭಾರಿ ಆತಂಕವನ್ನು ಸೃಷ್ಟಿಸಿವೆ. ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಭೂಕುಸಿತ ಮತ್ತು ಜಲಸ್ಫೋಟದ ಅಬ್ಬರ ಮುಂದುವರಿದಿದೆ. ಹೀಗಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ.
ಕೊಡಗು ಜಿಲ್ಲೆಯ ಭಾಗಮಂಡಲ ಭಾಗದಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಭಾಗಮಂಡಲಕ್ಕೆ ಸಂಪರ್ಕವೇ ಇಲ್ಲವಾಗಿದೆ. ಇಲ್ಲಿ ಭೂಮಿಯೇ ಬಿರಿದ ರೀತಿಯಲ್ಲಿ ಗುಡ್ಡ ಭಾಗ ಕುಸಿದಿದೆ. ಸಂಪಾಜೆ ಭಾಗದಲ್ಲಿ ಪುಷ್ಪಗಿರಿ ಪ್ರದೇಶದಲ್ಲಿ ಉಂಟಾಗಿರುವ ಜಲಸ್ಪೋಟದಿಂದ ಇಲ್ಲಿನ ನದಿಗಳೆಲ್ಲ ಕೆಸರು ನೀರಿನೊಂದಿಗೆ ಉಕ್ಕಿ ಹರಿಯುತ್ತಿವೆ. ಹೀಗಾಗಿ ಹಲವಾರು ಮನೆಗಳು ಉರುಳಿ ಬಿದ್ದಿವೆ. ಜತೆಗೆ ಪೇಟೆಯ ಅಂಗಡಿಗಳಿಗೆಲ್ಲ ಕೆಸರು ನೀರು ನುಗ್ಗಿದೆ.
ವಿಜಯಪುರದಲ್ಲಿ ಆತಂಕ
ವಿಜಯಪುರ ತಾಲೂಕಿನ ಬೂದಿಹಾಳ ಗ್ರಾಮಕ್ಕೆ ಬಮ್ಮನ ಕೆರೆಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಬಂದು ಜಲಾವೃತಗೊಂಡಿದ್ದ ಮನೆಯಿಂದ ಎರಡು ಕುಟುಂಬಗಳನ್ನು ರಕ್ಷಿಸಲಾಗಿದೆ.
ಕೊಚ್ಚಿ ಹೋದ ಬೈಕ್ ಸವಾರ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಸಾಗುತ್ತಿದ್ದ ಬೈಕ್ ಒಂದು ನೀರಿನಲ್ಲಿ ಕೊಚ್ಚಿ ಹೋಗಿ ಸವಾರ ಮೃತಪಟ್ಟಿದ್ದಾನೆ.
ಧಾರವಾಡದಲ್ಲಿ ಅಪಾರ ಹಾನಿ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ಕೆರೆ ಭರ್ತಿಯಾಗಿತ್ತು. ತುಂಬಿದ ಕೆರೆಯ ಕಟ್ಟೆ ಒಡೆದ ಪರಿಣಾಮವಾಗಿ ಕೆರೆಗೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಕಬ್ಬು ನೀರಿನಲ್ಲಿ ಮುಳುಗಿದೆ. ಬೆಳೆ ನೀರು ಪಾಲಾಗಿರುವ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ೪೦ ಮನೆ ಕುಸಿತ ಭೀತಿ
ಚನ್ನರಾಯಪಟ್ಟಣ ತಾಲ್ಲೂಕಿನ ಭೂವನಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಾಲಕ ಸಾವು ಕಂಡ ಬಳಿಕ ಇಲ್ಲಿ ಆತಂಕ ಮನೆ ಮಾಡಿದೆ. ಗ್ರಾಮದಲ್ಲಿ ಸುಮಾರು ೪೦ ಮನೆಗಳು ಕುಸಿತದ ಭೀತಿಯಲ್ಲಿವೆ ಎಂದು ಜನರು ಹೇಳುತ್ತಿದ್ದಾರೆ.
ಇದನ್ನೂ ಓದಿ| Rain News | ಆಗುಂಬೆ ಘಾಟಿಯಲ್ಲಿ ಭಾರಿ ಮಳೆಗೆ ವಾಹನದ ಮೇಲೆ ಬಿದ್ದ ಮರ