ಬೆಳಗಾವಿ: ಗೋಕಾಕ ತಾಲೂಕಿನ ಮಾಣಿಕವಾಡಿಯಲ್ಲಿ ಸೋಮವಾರ ಹಿಂದೆಂದೂ ಕಂಡು ಕೇಳರಿಯದ ಮಹಾಮಳೆ ಬಿದ್ದಿದೆ. ಈ ಮಳೆ ಹೇಗಿತ್ತೆಂದರೆ ಒಮ್ಮಿಂದೊಮ್ಮೆಗೇ ಸುರಿದ ಕುಂಭ ದ್ರೋಣ ವರ್ಷಧಾರೆ ಒಂದು ಗಂಟೆಗಳ ಕಾಲ ಸತತವಾಗಿ ಒಂದೇ ಸಮನೆ ದಪದಪನೆ ಬಿದ್ದಿದೆ. ಭಯಂಕರ ಮಳೆಯಿಂದಾಗಿ ಇಡೀ ಊರಿನಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಪ್ರವಾಹವೇ ಸೃಷ್ಟಿಯಾಯಿತು. ಎತ್ತರದ ಭಾಗದಿಂದ ನೀರು ಹೊಳೆಯಂತೆ ಹರಿದು ಬರುತ್ತಿದ್ದ ರೀತಿ ಮಹಾ ಪ್ರವಾಹವನ್ನು ನೆನಪು ಮಾಡಿತ್ತು.
ಮಾರ್ಗದ ಬದಿಯ ಸಾಲು ಮನೆಗಳಿಗೆ ನೀರು ಒಂದೇ ಸಮನೆ ನುಗ್ಗಿತ್ತು. ಮನೆಯಲ್ಲಿ ಇದ್ದವರು ಹೇಗೆ ತಪ್ಪಿಸಿಕೊಂಡು ಹೊರಗೆ ಬಂದರೋ ದೇವರಿಗೇ ಗೊತ್ತು. ರಣ ರಕ್ಕಸ ಮಳೆಗೆ ಜನ ದಿಕ್ಕೆಟ್ಟು ಹೋದರು. ಮಾಣಿಕವಾಡಿಯ ಒಂದು ಭಾಗದ ಜನ ಮಳೆಯಿಂದ ಹೇಗೆ ತತ್ತರಿಸಿಹೋಗಿದ್ದಾರೆಂದರೆ ಮನೆಯ ಸಮಸ್ತ ವಸ್ತುಗಳನ್ನು ಮಾತ್ರವಲ್ಲ, ಮನೆಯಲ್ಲೇ ಕಳೆದುಕೊಂಡಿದ್ದಾರೆ.
ಅಲ್ಲಿ ಒಂದು ಗಂಟೆ ಕಾಲ ಸುರಿದ ಮಹಾಮಳೆಯಿಂದ ೪೦೦ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿದೆ. ಜನವಸತಿ ಪ್ರದೇಶದಲ್ಲಿರುವ ಈ ಮನೆಗಳ ಪೈಕಿ ೧೨ ಮನೆಗಳು ಧರೆಗೆ ಉರುಳಿವೆ. ಯಾವ ಮನೆಗಳಲ್ಲೂ ಒಂದೇ ಒಂದು ವಸ್ತು ಉಳಿಯದಂತೆ ಕಳೆದುಹೋಗಿದೆ. ಮನೆಯಲ್ಲಿದ್ದ ಬಂಗಾರ, ಹಣ, ದಿನಬಳಕೆ ವಸ್ತುಗಳು, ಎಲ್ಲವೂ ನೀರಲ್ಲಿ ಕೊಚ್ಚಿ ಹೋಗಿವೆ.
ಮನೆ ಮಾತ್ರವಲ್ಲ, ರಸ್ತೆಗಳೂ ಜಖಂ
ಒಂದೇ ಗಂಟೆಯ ಮಳೆಗೆ ರಸ್ತೆಗಳೂ ಸಹ ಸಂಪೂರ್ಣ ಜಖಂ ಆಗಿವೆ. ಬೈಕ್ ಹಾಗೂ ಕಾರು ದಾಟಿಸಲು ಜನರು ಪರದಾಡುತ್ತಿದ್ದಾರೆ. ಮಳೆ ನಿಂತರೂ ಸಹ ನೀರು ಇನ್ನೂ ಭೋರ್ಗರೆಯುತ್ತಿದೆ.
ಸ್ಥಳ ಪರಿಶೀಲನೆಗೆ ಬಂದ ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪನವರ ಮುಂದೆ ಕಣ್ಣೀರಿಟ್ಟ ಇಲ್ಲಿನ ನಿವಾಸಿಗಲೂ ನಮಗೆ ಬೇರೆ ಕಡೆ ಮನೆ ಕಟ್ಟಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲಿನ ಜನರಿಗೆ ಪ್ರಸಕ್ತ ಕಾಳಜಿ ಕೇಂದ್ರಗಳಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ.
ಸಂತ್ರಸ್ತರ ಜೊತೆಗೆ ಆಹಾರ ಸೇವಿಸಿ ಅಧಿಕಾರಿಗಳು ಧೈರ್ಯ ತುಂಬಿದ್ದಾರೆ. ಕೊಣ್ಣೂರು ಆರೋಗ್ಯ ಸಿಬ್ಬಂದಿಯಿಂದ ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಲಾಗಿದೆ. ನೀರು ನುಗ್ಗಿದ ಮನೆ ಮಾಲೀಕರಿಗೆ 10 ಸಾವಿರ ರೂ ಪರಿಹಾರ ನೀಡುವ ಭರವಸೆ ನೀಡಲಾಗಿದೆ.
ಗೋಕಾಕ ತಾಲೂಕಿನಲ್ಲಿ ೪೫೦ ಮನೆಗೆ ಹಾನಿ
ವರುಣನ ಆರ್ಭಟಕ್ಕೆ ಒಂದೇ ದಿನಕ್ಕೆ ಗೋಕಾಕ ತಾಲೂಕಿನ 450 ಮನೆಗಳಿಗೆ ಹಾನಿಯಾಗಿದೆ. ಮಾಣಿಕವಾಡಿಯಲ್ಲಿ 393, ಮರಡಿಮಠ ಕ್ರಾಸ್ 30, ಕೊಣ್ಣೂರಲ್ಲಿ 37 ಮನೆಗಳಿಗೆ ಹಾನಿ ಉಂಟಾಗಿದೆ.
ಇದನ್ನೂ ಓದಿ| Rain News | ಜಲದಿಗ್ಭಂಧನದಲ್ಲಿದ್ದ 12 ದಿನದ ಹಸುಗೂಸು- ಬಾಣಂತಿಯ ರಕ್ಷಣೆ