Site icon Vistara News

Karnataka Rain: ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ; ಚಾಮರಾಜನಗರ, ಬೆಂಗಳೂರಲ್ಲಿ ತಂಪೆರೆದ ವರುಣ

ಬೆಂಗಳೂರು: ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಲಿದ್ದಾನೆ. ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ, ರಾಮನಗರ, ಕೋಲಾರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ (Karnataka Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಐದು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆಯಿಂದ ಕೂಡಿರಲಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಂದು ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 34 ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಚಾಮರಾಜನಗರದಲ್ಲಿ ಮಳೆ ಅಬ್ಬರ

ಚಾಮರಾಜನಗರ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಬುಧವಾರ ಸಂಜೆ ಹೊತ್ತಿಗೆ ಮಳೆ ಅಬ್ಬರ ಜೋರಾಗಿತ್ತು. ಕಳೆದ 20 ನಿಮಿಷಕ್ಕೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬಿಸಿಲ ಬೇಗೆಯಿಂದ ಬಳಲುತ್ತಿದ್ದವರಿಗೆ ವಾತಾವರಣ ಕೂಲ್‌ ಆಗಿತ್ತು. ಇತ್ತ ಮಳೆಯಿಂದ ರೈತರ ಮೊಗದಲ್ಲಿ ಹರ್ಷ ಉಂಟಾಗಿತ್ತು.

ರಾಜಧಾನಿ ಬೆಂಗಳೂರಿನ ಅಲ್ಲಲ್ಲಿ ಬುಧವಾರ ಸಂಜೆ ವೇಳೆಗೆ ಮಳೆಯಾಗಿದೆ. ಆದರೆ, ಮೋಡ ಕವಿದ ವಾತಾವರಣ ಹಾಗೇ ಮುಂದುವರಿದಿದೆ. ನೆಲಮಂಗಲ, ನಾಗಸಂದ್ರ, ಮಹದೇವಪುರ, ಹೆಸರಘಟ್ಟ, ಚಿಕ್ಕಬಾಣವರ, ಟಿ‌.ದಾಸರಹಳ್ಳಿ, ಪೀಣ್ಯ, ಉಲ್ಲಾಳ ಸೇರಿದಂತೆ ವಿದ್ಯಾರಣ್ಯಪುರದಲ್ಲಿ ಸತತ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಜತೆಗೆ ಆರ್​​.ಆರ್​. ನಗರ, ಯಲಹಂಕ, ರಾಜಾಜಿನಗರ, ಶ್ರೀರಾಂ​​ಪುರ, ವಿಜಯನಗರ, ಗೋವಿಂದರಾಜ ನಗರ ಸುತ್ತಮುತ್ತ ಜಿಟಿ ಜಿಟಿ ಮಳೆಯಾಗಿದೆ. ರಾತ್ರಿಯೂ ಮಳೆ ಸುರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: SSLC Exam 2023: ಮಾ.31ರಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು

Exit mobile version