ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ (Rain news) ಮಳೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಸೇತುವೆಗಳು ಮುಳುಗಡೆ ಆಗಿದ್ದರೆ, ಹಲವೆಡೆ ಕುಸಿದು ಹೋಗಿವೆ. ಜೋಯಿಡಾದ ಕಾತೇಲಿ ಗ್ರಾಮದಲ್ಲಿ ಸೇತುವೆ ಕುಸಿದಿದ್ದು, ವೇಗವಾಗಿ ಹರಿಯುತ್ತಿದ್ದ ನದಿಯಲ್ಲಿ ರೋಗಿಯೊಬ್ಬರನ್ನು ಸ್ಥಳಾಂತರ ಮಾಡಲು ಹರಸಾಹಸ ಪಟ್ಟಿದ್ದಾರೆ. ಮೊದಮೊದಲು ವಾಹನದಲ್ಲಿ ಸ್ಥಳಾಂತರಿಸಲು ಮುಂದಾದರೂ ಆದರೆ ಸೇತುವೆ ಕುಸಿದ ಕಾರಣಕ್ಕೆ ರೋಗಿಯನ್ನು ಗ್ರಾಮಸ್ಥರೇ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಿಂದ 45 ಲಕ್ಷ ರೂ. ವೆಚ್ಚದಲ್ಲಿ ಕಾವೇರಿ ನದಿಗೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರಿ ಮಳೆಗೆ ಸೇತುವೆ ಕುಸಿದಿದೆ. ಇದರಿಂದಾಗಿ ಕಾತೇಲಿ, ಕೆಲೋಲಿ ಗ್ರಾಮಗಳ ನಡುವಿನ ಸಂಪರ್ಕವಾಗಿದ್ದ ಕೊಂಡಿ ಕಳಚಿದಂತಾಗಿದೆ. ಭಾರೀ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿದು ಸೇತುವೆಗೆ ಹಾನಿಯಾಗಿದೆ. ಅಪಾಯಕಾರಿಯಾಗಿ ಮುರಿದು ಬಿದ್ದಿರುವ ಸೇತುವೆಯನ್ನೇ ಈಗಲೂ ಇಲ್ಲಿನ ಜನ ಬಳಸುತ್ತಿದ್ದಾರೆ. ಮಳೆ ಹೆಚ್ಚಾದಲ್ಲಿ ಪೂರ್ತಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ.
ಬಿರುಗಾಳಿಗೆ ನೆಲಕ್ಕುರುಳಿದ ಅಡಿಕೆ ಮರಗಳು
ಚಿಕ್ಕಮಗಳೂರಲ್ಲಿ ಬಿರುಗಾಳಿ ಮಳೆಗೆ ಅಡಿಕೆ ತೋಟ ನಾಶವಾಗಿದೆ. ಶೃಂಗೇರಿ ತಾಲೂಕಿನ ಕೋಗಾರ್ ಮಸಿಗೆ ಗ್ರಾಮದಲ್ಲಿ ಗಾಳಿ ಮಳೆಗೆ ಸಿಲುಕಿ 70ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿವೆ. ಮಸಿಗೆ ಗ್ರಾಮದ ನಾರಾಯಣ ಎಂಬುವರಿಗೆ ಸೇರಿದ ಅಡಿಕೆ ತೋಟ ಜತೆಗೆ ಕಾಡು ಜಾತಿಯ ಮರಗಳು ನಾಶವಾಗಿವೆ.
ಇತ್ತ ಚಿಕ್ಕಮಗಳೂರಿನ ಕಳಸ ಕುದುರೆಮುಖ ಹೆದ್ದಾರಿಯಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಮಳೆ ಹೆಚ್ಚಾಗುತ್ತಿದ್ದಂತೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಾಹನ ಸವಾರರಿಗೆ ಆತಂಕ ಎದುರಾಗಿದ್ದು ಭೀತಿಯಲ್ಲೇ ಓಡಾಡುವಂತಾಗಿದೆ. ಕಳಸ-ಕುದುರೆಮುಖ-ಮಂಗಳೂರಿಗೆ ಸಂಪರ್ಕಿಸುವ ರಸ್ತೆ ಇದಾಗಿದೆ.
ಕುಸಿದು ಬಿದ್ದ ಸರ್ಕಾರಿ ಶಾಲೆಯ ಕಾಂಪೌಂಡ್
ಭಾರಿ ಮಳೆಗೆ ಶಿವಮೊಗ್ಗದ ಸಾಗರದ ಅರಳಿಕಟ್ಟೆ ಶಾಲೆಯ ಕಾಂಪೌಂಡ್ ಕುಸಿದಿದೆ. ನೆಹರು ನಗರದಲ್ಲಿರುವ ಸರ್ಕಾರಿ ಉರ್ದು ಹಿ. ಪ್ರಾ. ಶಾಲೆ ಕಾಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇತ್ತ ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರಕ್ಕೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಉರುಳಿ ಮನೆಯ ಮೇಲೆ ಬಿದ್ದ ಕಾರಣಕ್ಕೆ ಸಂಪೂರ್ಣ ಜಖಂಗೊಂಡಿದೆ. ಕೊಪ್ಪ ತಾಲೂಕಿನ ಕೋಳೂರು ಮಡುವಿನ ಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಪ್ರಾಣಪಾಯದಿಂದ ಪಾರಾಗಿವೆ. ಸ್ಥಳಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾಗಣಪತಿ ದೇವಸ್ಥಾನ ಮುಳುಗಡೆ
ಕಾಸರಗೋಡಿನ ಇತಿಹಾಸ ಪ್ರಸಿದ್ಧ ದೇವಾಲಯವಾದ ಮದೂರು ಮಹಾಗಣಪತಿ ದೇವಸ್ಥಾನವು ಮಳೆಗೆ ಮುಳುಗಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಅತಿ ಹೆಚ್ಚು ಜನರು ಭೇಟಿ ನೀಡುತ್ತಿದ್ದರು. ದೇವಸ್ಥಾನದ ಪಕ್ಕದಲ್ಲಿ ಹೊಳೆ ಇದ್ದು, ನಿರಂತರ ಮಳೆಗೆ ದೇವಸ್ಥಾನ ಭಾಗಶಃ ಮುಳುಗಡೆ ಆಗಿದೆ.
ಇದನ್ನೂ ಓದಿ: Rain News : ಶುರುವಾಯ್ತು ಮಳೆ ಅವಘಡ; 6 ಅಂತಸ್ತಿನಿಂದ ಕುಸಿದ ಚಾವಣಿ, ಮುಳುಗಿದ ಸೇತುವೆಗಳು
ಗಾಳಿ-ಮಳೆಗೆ ಕಿತ್ತು ಹೋದ ಚಾವಣಿ
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಮೆಡಿಸಿನ್ ಫ್ಯಾಕ್ಟರಿ ಚಾವಣಿಗೆ ಹಾನಿಯಾಗಿದೆ. ಬೇಳೂರ್ ಬೈರ್ ಬಯೋಟೆಕ್ ಹೆಸರಿನ ಔಷಧ ತಯಾರಿಕಾ ಕಂಪೆನಿ ಇದಾಗಿದ್ದು, ಗಾಳಿಗೆ ಚಾವಣಿಯ ಸಿಮೆಂಟ್ ಕಿತ್ತು ಹೋಗಿದೆ. ಮಳೆ ನೀರಿನಿಂದ ಯಂತ್ರೋಪಕರಣಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ