ಧಾರವಾಡ/ಕಲಬುರಗಿ: ಧಾರವಾಡದಲ್ಲಿ ವರುಣ ಅಬ್ಬರಿಸುತ್ತಿದ್ದು, ಕಂಬರಗಣವಿ ಸೇತುವೆ ಮುಳುಗಡೆ ಆಗಿದೆ. ಇದರಿಂದಾಗಿ ಅನಾರೋಗ್ಯಕ್ಕಿಡಾದ ವೃದ್ಧೆಯನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಳೆ ಬಂದಾಗೆಲ್ಲ ಮೇಲ್ಸೇತುವೆ ಜಲಾವೃತಗೊಂಡಿದ್ದು, ಸದ್ಯ ಗ್ರಾಮಕ್ಕೆ ಹೋಗದೆ ಜನರು ಒಂದೇ ದಡದ ಮೇಲೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿಯು ನಿರಂತರ ಮಳೆಯಿಂದಾಗಿ ಹಲವು ಗದ್ದೆಗಳು ಜಲಾವೃತಗೊಂಡಿದೆ. ಭತ್ತ ಸೇರಿ ಕಬ್ಬಿನ ಗದ್ದೆಗಳು ಸಹ ಮಳೆಯ ನೀರಿಗೆ ಜಲಾವೃತವಾಗಿದೆ.
ಮೂರು ಮನೆಗಳು ನೆಲಸಮ
ನಿರಂತರ ಮಳೆಗೆ ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಮನೆಗಳು ಕುಸಿಯುತ್ತಿವೆ. ಗ್ರಾಮದ 3 ಮನೆಗಳು ಸಂಪೂರ್ಣ ಕುಸಿದಿದೆ. ಮಕ್ತುಂಬಿ ಕೋಟೂರ, ಫಾತಿಮಾ ನದಾಫ್, ಇಮಾಂಬಿ ಹೆಬ್ಬಳ್ಳಿ ಎಂಬವರ ಮನೆ ಕುಸಿದು ಬಿದ್ದಿದೆ. ಯಾವುದೇ ಪ್ರಾಣ ಹಾನಿ ಇಲ್ಲ.
ಕಲಬುರಗಿಯಲ್ಲಿ ಸೇತುವೆಗಳು ಮುಳುಗಡೆ
ಕಲಬುರಗಿಯಲ್ಲಿ ಭಾರಿ ಮಳೆಗೆ ಸೇಡಂ ತಾಲೂಕಿನ ಎರಡು ಸೇತುವೆಗಳು ಜಲಾವೃತಗೊಂಡಿದೆ. ಸಂಗಾವಿ ಎಂ, ಕಾಚೂರು-ಬಿಬ್ಬಳ್ಳಿ ನಡುವಿನ ಕಾಗಿಣ ನದಿಯ ಬ್ರಿಜ್ ಕಂ ಬ್ಯಾರೆಜ್ ಮೇಲೆ ನೀರು ಹರಿಯುತ್ತಿದೆ. ಸಂಗಾವಿ ತೊನಸನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಯಾರು ಸಂಚರಿಸದಂತೆ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ.
ಇತ್ತ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಗರಪಳ್ಳಿ, ನಾಗಇದಲಾಯಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿರುವ ದಿನಸಿ ಸಾಮಾನು, ಅಗತ್ಯ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಬೋಗಾವತಿ ನದಿಯು ಉಕ್ಕಿ ಹರಿಯುತ್ತಿದ್ದು, ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ ಗ್ರಾಮದ ಸೇತುವೆ ಜಲಾವೃತಗೊಂಡಿದೆ. ಇದರಿಂದಾಗಿ ಗಾರಂಪಳ್ಳಿ ಗ್ರಾಮದ ಸಂಚಾರ ಸಂಪರ್ಕ ಬಂದ್ ಆಗಿದೆ. ಸೇತುವೆ ಮುಳುಗಡೆಯಿಂದಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜತೆಗೆ ನದಿಯ ದಂಡೆಯ ಬಳಿ ಇರುವ ಹೊಲ ಗದ್ದೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಗೋಡೆ ಕುಸಿದು ವಿದ್ಯುತ್ ಮಗ್ಗಗಳಿಗೆ ಹಾನಿ
ಬೆಳಗಾವಿಯಲ್ಲಿ ನಿರಂತರ ಮಳೆಗೆ ಮನೆ ಗೋಡೆ ಕುಸಿದು ವಿದ್ಯುತ್ ಮಗ್ಗಗಳಿಗೆ ಹಾನಿಯಾಗಿದೆ. ಬೆಳಗಾವಿಯ ಕಲ್ಯಾಣ ನಗರದ ಅರುಣ್ ಢಗೆ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದೆ. ವಿದ್ಯುತ್ ಮಗ್ಗಗಳನ್ನೇ ಅವಲಂಬಿಸಿದ್ದ ನೇಕಾರ ಕುಟುಂಬ ಬೀದಿಗೆ ಬಿದ್ದಿದೆ. ಕೋವಿಡ್ ಸಮಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಇದೀಗ ಮಗ್ಗಗಳ ಮೇಲೆಯೇ ಗೋಡೆ ಕುಸಿದು, ಹಾನಿಯಾಗಿದೆ. ಮೊದಲೇ ನಾವು ಬಡವರು, ಮನೆ ನಿರ್ಮಿಸಿಕೊಳ್ಳುವುದು ಕಷ್ಟಸಾಧ್ಯ. ತಕ್ಷಣವೇ ಸರ್ಕಾರ ನಮ್ಮ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Rain News : ಮುಂದುವರಿದ ಮಳೆ ಅವಾಂತರ; ಭೀತಿಯಲ್ಲಿ ಮಲೆನಾಡು ಮಂದಿ
ಯಾದಗಿರಿಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಯಾದಗಿರಿ ಜಿಲ್ಲೆಯಲ್ಲಿ ವರುಣನ ರೌದ್ರವತಾರಕ್ಕೆ ಜುಲೈ 20 ರಿಂದ ಇಲ್ಲಿವರಗೆ 160 ಮನೆಗಳಿಗೆ ಹಾನಿಯಾಗಿದೆ. ಮನೆ ಹಾಗೂ ಮನೆ ಗೋಡೆಗಳ ಕುಸಿತದಿಂದ ಜನರ ಕಂಗಾಲಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ,ಯಾದಗಿರಿ ತಾಲೂಕಿನ ಅಲ್ಲಿಪುರದಲ್ಲಿ ಮನೆಗಳು ಕುಸಿದು ಬಿದ್ದಿವೆ.
ಇತ್ತ ರಾಯಚೂರಿನ ಮಡ್ಡಿಪೇಟೆಯಲ್ಲಿ ಮನೆ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಗೆ ಶಾಂತಮ್ಮ ಎಂಬುವವರ ಮನೆ ಗೋಡೆ ಕುಸಿದಿದೆ. ಶಾಂತಮ್ಮ ಮಲಗಿದ್ದ ಮಂಚದ ಬಳಿಯೇ ಗೋಡೆ ಬಿದ್ದಿದೆ.
ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆ ಕುಸಿದಿದೆ. ಕ್ಲಾಸ್ ರೂಂ ಒಳಗಡೆ ಚಾವಣಿಯಿಂದ ಉದುರಿ ಕಾಂಕ್ರೀಟ್ ಬಿದ್ದಿದೆ. ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ. ಈ ಸರ್ಕಾರಿ ಶಾಲೆಯಲ್ಲಿ 200ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಚಾವಣಿ ಬದಲಾವಣೆಗೆ ಸ್ಥಳೀಯರಿಂದ ಹಲವು ಬಾರಿ ಮನವಿ ಮಾಡಿದ್ದರೂ ಶಿಕ್ಷಣಿ ಇಲಾಖೆ ಕ್ಯಾರೇ ಎಂದಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ