ಬೆಂಗಳೂರು: ರಾಜ್ಯದಲ್ಲಿ ವಿವಿಧೆಡೆ ಶನಿವಾರವೂ ಧಾರಾಕಾರವಾಗಿ ಮಳೆ (Rain News) ಸುರಿದಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಕೊಡಗಿನಲ್ಲಿ ಮಹಾ ಮಳೆಯಿಂದ ಮನೆಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆ ರಸ್ತೆಗಳು ಕುಸಿದು, ಸೇತುವೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಉತ್ತರ ಕನ್ನಡ: ನಿರಂತರ ಮಳೆಗೆ ಹೊನ್ನಾವರದ ಸೂಳೆಮುರ್ಕಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-69 ಕುಸಿದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ರಸ್ತೆ ಕುಸಿದ ಹಿನ್ನೆಲೆಯಲ್ಲಿ ಹೊನ್ನಾವರದಿಂದ ಸಾಗರಕ್ಕೆ ತೆರಳುವ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗೇರುಸೊಪ್ಪ ಗ್ರಾಮದಿಂದ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗ ಬಳಸಿಕೊಳ್ಳಲು ವಾಹನ ಸವಾರರಿಗೆ ಸೂಚಿಸಲಾಗಿದೆ.
ಇನ್ನು ಶರಾವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳಗಳು ತುಂಬಿ ಹೊನ್ನಾವರ ತಾಲೂಕಿನ ಸಾಲ್ಕೊಡು ಗ್ರಾಮಕ್ಕೆ ನೀರು ನುಗ್ಗಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮಳೆಗೆ ಹೊನ್ನಾವರದ ಹೊಸಕುಳಿ ಗ್ರಾಮ ಜಲಾವೃತವಾಗಿದೆ. ಇಲ್ಲಿನ ಮಕ್ಕಳಿಗೆ ಈ ನೀರಿನ ಮಧ್ಯೆಯೇ ಜೀವ ಕೈಯಲ್ಲಿ ಹಿಡಿದು ಶಾಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಗೆ ಶರಾವತಿ ನದಿ ಉಕ್ಕಿ ಹರಿದ ಪರಿಣಾಮ ಹೊನ್ನಾವರದ ಬಾಸ್ಕೇರಿ ಗ್ರಾಮದಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ನದಿಪಾತ್ರದ ನಿವಾಸಿಗಳಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಕ್ರಮ ಕೈಗೊಂಡಿದೆ. ಸ್ಥಳೀಯ ಆಡಳಿತದಿಂದ ಕಾಳಜಿ ಕೇಂದ್ರಗಳಲ್ಲಿ ಮಳೆ ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಪ್ರತಿವರ್ಷ ಎದುರಾಗುತ್ತಿರುವ ನೆರೆಯಿಂದ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ.
ಮನೆ ಕುಸಿದು ವೃದ್ಧೆ ಸಾವು
ಕೊಡಗು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮಿಪದ ದುಂಡಳ್ಳಿ ಸುಳುಗಳಲ್ಲಿಯಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ವಸಂತಮ್ಮ (70) ಮೃತರು. ಭಾರಿ ಮಳೆಯಿಂದ ಸ್ನಾನದ ಮನೆಯ ಗೋಡೆ ಬಿದ್ದು ವಸಂತಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ವಸಂತಮ್ಮ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವೃದ್ಧೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ವಿವಿಧೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ, ಈಗ ಮಳೆಯಿಂದ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ.
ಮಡಿಕೇರಿಯ ಕಾಟಕೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತವಾಗಿದೆ. ಕಾಟಗೇರಿ ಬೋಪಯ್ಯ ಎಂಬುವವರ ಸುಮಾರು ಅರ್ಧ ಎಕರೆಯಷ್ಟು ಕಾಫಿ ತೋಟ 10 ಅಡಿ ಆಳಕ್ಕೆ ಕುಸಿದಿದೆ. ಮನೆಯ ಸಮೀಪವೇ ಭೂಮಿ ಕುಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೋಪಯ್ಯ ಅವರ ಕುಟುಂಬಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಕುಶಾಲನಗರ ಸಮೀಪದ ಶಿರಂಗಾಲದಲ್ಲಿ ಬೆಳಗಿನ ಜಾವ ಗೌರಮ್ಮ ಶಿವಣ್ಣ ಎಂಬುವವರ ಮನೆ ಗೋಡೆ ಹಾಗೂ ಚಾವಣಿ ಕುಸಿದಿದೆ.
ಜಲಾವೃತವಾದ ಸೇತುವೆಗಳು
ಬೆಳಗಾವಿ: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಗೋಕಾಕ ತಾಲೂಕಿನ ಮತ್ತೆರಡು ಸೇತುವೆಗಳು ಜಲಾವೃತವಾಗಿವೆ. ವರುಣನ ಆರ್ಭಟಕ್ಕೆ ಘಟಪ್ರಭಾ ನದಿ ಭೋರ್ಗರೆಯುತ್ತಿರುವ ಹಿನ್ನೆಲೆಯಲ್ಲಿ ಶಿಗದೊಳ್ಳಿ-ನಲ್ಲಾನಟ್ಟಿ ಸಂಪರ್ಕಿಸುವ ಸೇತುವೆ ಹಾಗೂ ಹುಣಶ್ಯಾಳ- ಉದಗಟ್ಟಿ ಸಂಪರ್ಕಿಸುವ ಸೇತುವೆ ಕೂಡ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾದ ಪರಿಣಾಮ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಮಳೆಯಿಂದ ಮಾಬುಸಾಬ್ ಕರನಾರ್ಚಿ ಎಂಬುವವರ ಮನೆ ಗೋಡೆ ಕುಸಿದಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿರುವುದರಿಂದ ಘಟಪ್ರಭ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೀಗಾಗಿ ಗೋಕಾಕ-ಶಿಂಗಳಾಪುರ ಕೆಲಹಂತದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಿದ್ದಾರೆ. ಅದೇ ರೀತಿ ಜಿಲ್ಲೆಯ ರಾಮದುರ್ಗ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿಗೃಹದ ಬಳಿ ಮಳೆಯಿಂದ ಬೃಹತ್ ಮರ ಧರೆಗುರುಳಿದಿದೆ. ಮಳೆಯಿಂದ ರಸ್ತೆಯ ಪಕ್ಕದ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ರಾಮದುರ್ಗ ಪುರಸಭೆ ಅಧಿಕಾರಿಗಳಿಂದ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಹೆದ್ದಾರಿಯೇ ಕೊಚ್ಚಿ ಹೋಯ್ತು!
ಆಗುಂಬೆ ಘಾಟ್ ರಸ್ತೆಯಲ್ಲಿ ಭೂಕುಸಿತವಾಗಿದ್ದ ಕಡೆ ಮತ್ತೆ ಬಿರುಕು
ಶಿವಮೊಗ್ಗ: ಶೃಂಗೇರಿ-ಆಗುಂಬೆ -ತೀರ್ಥಹಳ್ಳಿ ಮಾರ್ಗದಲ್ಲಿ ಇತ್ತೀಚೆಗೆ ಭೂಕುಸಿತವಾಗಿದ್ದ ಸ್ಥಳದಲ್ಲೇ ಮತ್ತೆ ರಸ್ತೆ ಬಿರುಕು ಬಿಟ್ಟಿದೆ. ಆಗುಂಬೆಯ 11ನೇ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಕಳೆದ ಮೂರು ದಿನಗಳ ಹಿಂದೆಯಷ್ಟೇ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಮತ್ತೆ ರಸ್ತೆಯಲ್ಲಿ ಬಿರುಕು ಕಂಡುಬಂದಿರುವುದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಮತ್ತೆ ಆಗುಂಬೆ ಘಾಟ್ ಬಂದ್ ಆಗುವ ಸಾಧ್ಯತೆ ಇದೆ. ಇನ್ನು ಭಾರಿ ಮಳೆಯಿಂದ ಹೊಸನಗರ ತಾಲೂಕಿನಲ್ಲಿ ಗುಡ್ಡ, ರಸ್ತೆ ಕುಸಿದಿದೆ. ಜಿಲ್ಲೆಯ ಹೊಸನಗರ ತಾಲೂಕು ಮುಂಬಾರು ಗ್ರಾ.ಪಂ. ವ್ಯಾಪ್ತಿಯ ಸಾವಂತೂರು ಗ್ರಾಮದಲ್ಲಿ ಗುಡ್ಡ ಕುಸಿದಿದೆ. ಇನ್ನು ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಹೊಗರ ಮಜರೆ ರಸ್ತೆ ಕುಸಿತವಾಗಿದೆ.
ನದಿಯಲ್ಲಿ ತೇಲಿಬಂದ ಮಹಿಳೆ ಮೃತದೇಹ
ಚಿಕ್ಕಮಗಳೂರು: ಕಾಫಿನಾಡಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬಿಕ್ಕರಣೆ ಗ್ರಾಮದ ಬಳಿ ಭದ್ರಾ ನದಿಯಲ್ಲಿ ಮಹಿಳೆಯೊಬ್ಬರ ಮೃತದೇಹ ತೇಲಿಬಂದಿದೆ. ಅಲ್ಲದೆ, ಬೆಳಗ್ಗೆ ಹಸುವಿನ ಕಳೇಬರವೊಂದು ಹೆಬ್ಬಾಳೆ ಸೇತುವೆ ಬಳಿ ತೇಲಿ ಬಂದಿರುವ ವರದಿಯಾಗಿದೆ.
ಹಾಸನದಲ್ಲಿ ಕುಸಿದ ಮನೆ
ಹಾಸನ: ಹೊಳೆನರಸೀಪುರ ತಾಲೂಕಿನ ಹಾವಿನಮಾರನಗಳ್ಳಿ ಗ್ರಾಮದಲ್ಲಿ ಮಳೆಯಿಂದ ಅರ್ಚಕ ಮುದ್ದಯ್ಯ ಎಂಬುವವರ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿದ ಶಬ್ದಕ್ಕೆ ಮನೆಯಿಂದ ಮುದ್ದಯ್ಯ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಸಮಯದಲ್ಲಾದರೂ ಇಡೀ ಮನೆ ಕುಸಿದು ಬೀಳುವ ಆತಂಕ ಎದುರಾಗಿದೆ. ತಮಗೆ ಸೂಕ್ತ ಪರಿಹಾರ ನೀಡುವಂತೆ ಮುದ್ದಯ್ಯ ಮನವಿ ಮಾಡಿದ್ದಾರೆ. ಅದೇ ರೀತಿ ಆಲೂರು ತಾಲೂಕಿನ ಮೂಡಲಕೊಪ್ಪಲು ಗ್ರಾಮದ ಈರೇಗೌಡ ಎಂಬುವವರ ಹಾಗೂ ಅರಕಲಗೂಡು ತಾಲೂಕಿನ ನೀಲುವಾಗಿಲು ಗ್ರಾಮದಲ್ಲಿ ನಾಗಮ್ಮ ಅವರ ಮನೆ ಕುಸಿದಿದೆ. ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ | Rain News | ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಮೂವರಿಗೆ ಗಾಯ