Site icon Vistara News

Rain News | ಕೊಡಗಿನಲ್ಲಿ ಮಳೆಯ ಅಬ್ಬರ : ಹಲವೆಡೆ ಭೂಕುಸಿತ, ಸರ್ಕಾರದ ವಿರುದ್ಧ ಆಕ್ರೋಶ

Rain News

ಕೊಡಗು : ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯ (Rain News) ಅಬ್ಬರ ಹೆಚ್ಚಾಗಿದೆ. ಕೊಡಗಿನಲ್ಲಿ ಮಳೆ ಮುಂದುವರಿದಿದ್ದು, ಭಾನುವಾರ (ಆ.7) 8.30ರವರೆಗೆ ರೆಡ್‌ ಅಲರ್ಟ್‌ ಘೋಷಿಸಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ ಆಗಿದೆ. ನಾಪೋಕ್ಲು ಭಾಗಮಂಡಲ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಮಡಿಕೇರಿ ಭಾಗಮಂಡಲ‌ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಮೇಲೆ ಸುಮಾರು 2 ಅಡಿಗಳಷ್ಟು ನೀರು ನಿಂತಿದೆ. ಮತ್ತಷ್ಟು ಮಳೆ ಹೆಚ್ಚಾದಲ್ಲಿ ಭಾಗಮಂಡಲ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.

12 ಕಡೆಗಳಲ್ಲಿ ಗುಡ್ಡ ಕುಸಿತ
ಜಿಲ್ಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿತಗಳಾಗುತ್ತಿದ್ದು ಜನತೆ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸುರಿದ ಭಾರಿ ಮಳೆಗೆ ಭಾಗಮಂಡಲದಿಂದ ಕರಿಕೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಸುಮಾರು 12 ಕಡೆಗಳಲ್ಲಿ ಗುಡ್ಡ ಕುಸಿತವಾಗಿದ್ದು ರಸ್ತೆಗೆ ಬಿದ್ದಿರುವ ಮಣ್ಣನ್ನು ಜಿಲ್ಲಾಡಳಿತ ತೆರವುಗೊಳಿಸಿದೆ‌.

ಇದನ್ನೂ ಓದಿ | Rain news| ರಾಮನಗರದಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು

ಸರ್ಕಾರದ ತಾರತಮ್ಯ ಆರೋಪ
ಮಳೆಹಾನಿ ಸಂಬಂಧ ಪ್ರವಾಹ ಪೀಡಿತ ಪ್ರದೇಶಗಳಿಗೆ 200 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಕೊಡಗು ಜಿಲ್ಲೆಗೆ ಅಪಾರ ಹಾನಿ ಸಂಭವಿಸಿದರೂ ಪರಿಹಾರ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಳೆದ 5 ವರ್ಷದಿಂದ ಬಿಜೆಪಿ ಭದ್ರ ಕೋಟೆಗೆ ಸರ್ಕಾರದ ತಾರತಮ್ಯ ಆರೋಪ ಕೇಳಿ ಬಂದಿದೆ. ಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳ ವಿರುದ್ದ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ‌ ವಿರುದ್ಧ ಜನತೆ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ | Rain News| ನೀರಿನ ರಭಸಕ್ಕೆ ಮುರಿದು ಬಿದ್ದ ಸೇತುವೆ, ಕಳೆದ ವರ್ಷವಷ್ಟೇ ಕಟ್ಟಿದ್ದರು!

Exit mobile version