ಹಾಸನ/ ಶಿವಮೊಗ್ಗ/ಸುಳ್ಯ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಜನಜೀವನ ತತ್ತರಿಸಿ (Rain alert) ಹೋಗಿದೆ. ಹಾಸನದಲ್ಲಿ ಒಂದು ಕಡೆ ಮಳೆಯೂ (Rain News) ನಿಲ್ಲುತ್ತಿಲ್ಲ, ಅದರಿಂದ ಆಗುವ ಅವಾಂತರವು ಕಡಿಮೆ ಆಗುತ್ತಿಲ್ಲ. ಹಾಸನದ ಸಕಲೇಶಪುರ ತಾಲೂಕಿನ ಮರಗಿಡಿ ಗ್ರಾಮದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಮಣ್ಣಿನ ರಾಶಿಯು ಎರಡು ಮನೆಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ.
ಕೂಲಿ ಕಾರ್ಮಿಕ ಕುಟುಂಬಗಳು ಅಪಾಯಕಾರಿ ಸ್ಥಳದಲ್ಲಿ ಜೋಪಡಿಯಂತಹ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಸ್ವಂತ ಮನೆ ಅಥವಾ ನಿವೇಶನ ಇಲ್ಲದೆ ಅಪಾಯಕಾರಿ ಸರ್ಕಾರಿ ಭೂಮಿಯಲ್ಲಿ ನೆಲೆಸಿದ್ದಾರೆ. ನಿನ್ನೆ ಗುಡ್ಡ ಕುಸಿದು ಗೌರಮ್ಮ ಹಾಗೂ ಕಮಲಾ ಎಂಬ ಮಹಿಳೆಯರ ಮನೆಗಳಿಗೆ ಹಾನಿ ಆಗಿತ್ತು. ಮಳೆ ಹೆಚ್ಚಾದರೆ ಗುಡ್ಡದ ಮೇಲಿನ ಬೃಹದಾಕಾರದ ಬಂಡೆಗಳು ಕೆಳಗೆ ಉರುಳಿ ಬರುವ ಆತಂಕ ಇದ್ದು, ಜೀವ ಭಯದ ನಡುವೆ ಕಾರ್ಮಿಕರ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಪರ್ಯಾಯ ಜಾಗ ಕೊಡಿ ಇಲ್ಲವೇ, ಇಲ್ಲಿಯೇ ಸುರಕ್ಷತೆ ಒದಗಿಸಿ ಎಂದು ಅಳಲು ತೊಡಿಕೊಂಡಿದ್ದಾರೆ.
ಸಕಲೇಶಪುರ ಆಲೂರು ತಾಲೂಕಿನಲ್ಲಿ ಭಾರಿ ಮಳೆ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ ಬಾಣಗೇರಿ ಗ್ರಾಮದಲ್ಲಿ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮದ ದೇವರಾಜು ಹಾಗೂ ರಮೇಶ್ ಎಂಬುವವರಿಗೆ ಸೇರಿದ ಜಮೀನು ಕೆರೆಯಂತಾಗಿವೆ.
ರಸ್ತೆ ಕುಸಿಯುವ ಭೀತಿ
ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದ ಬಳಿ ನಿರ್ಮಾಣ ಹಂತದ ಚತುಷ್ಪತ ರಸ್ತೆ ಕಾಮಗಾರಿ ಮಧ್ಯದಲ್ಲೇ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಹೊಸದಾಗಿ ಮಣ್ಣು ಹಾಕಿ ಮಾಡಿರುವ ರಸ್ತೆ ಕುಸಿಯುವ ಭೀತಿ ಇರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
ರಸ್ತೆ ನಿರ್ಮಾಣಕ್ಕೆಂದು ಅವೈಜ್ಞಾನಿಕವಾಗಿ ಗುಡ್ಡ ಕೊರೆದು ಅವಾಂತರ ಸೃಷ್ಟಿಸಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ನಿರಂತರವಾಗಿ ರಾಶಿ ರಾಶಿಯಾಗಿ ಮಣ್ಣು ಕುಸಿಯುತ್ತಿದೆ. ಜತೆಗೆ ದೊಡ್ಡ ಮರಗಳು ಉರುಳುತ್ತಿವೆ. ಮಣ್ಣು ಕುಸಿಯುತ್ತಿದ್ದಂತೆ ಹೆದ್ದಾರಿ ನಿರ್ಮಾಣ ಗುತ್ತಿಗೆದಾರ ಕಂಪನಿ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.
ಕುಕ್ಕೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ
ದಕ್ಷಿಣ ಕನ್ನಡ ಜಿಲ್ಲೆ ಸೇರಿ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯ ಅಬ್ಬರ ಜೋರಾಗಿದೆ. ಕುಕ್ಕೆ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆ ಆಗಿದ್ದು, ಭಕ್ತರಿಗೆ ಪ್ರವೇಶವನ್ನು ನಿರ್ಬಂಧ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ಭದ್ರತೆ ಕೈಗೊಂಡಿದ್ದು, ಹೋಂ ಗಾರ್ಡ್ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಕುಮಾರಧಾರ ಸೇತುವೆ ಬಳಿಯೇ ಜನರನ್ನು ತಡೆಯುತ್ತಿದ್ದು, ಕುಮಾರಧಾರ ನದಿಯ ಜತೆ ದರ್ಪಣ ತೀರ್ಥವೂ ಮುಳುಗಡೆ ಆಗಿದೆ.
ಇತ್ತ ಗಾಳಿ ಮಳೆಗೆ ಮರಗಳು ಧರಶಾಹಿಯಾಗುತ್ತಿವೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಪುಚ್ವಪ್ಪಾಡಿ ಬಳಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ಕುಕ್ಕೆಸುಬ್ರಹ್ಮಣ್ಯ ಮತ್ತು ಗುತ್ತಿಗಾರು ಸಂಪರ್ಕಿಸುವ ರಸ್ತೆ ಇದಾಗಿದೆ. ಮರ ಬಿದ್ದು ರಸ್ತೆ ಬಂದ್ ಆಗಿರುವುದರಿಂದ ಕೆಲ ವಾಹನ ಸವಾರರು ವಾಪಾಸ್ ಆಗುತ್ತಿದ್ದ ಚಿತ್ರಣ ಕಂಡು ಬಂತು. ಕೇರಳ ಮಂಜೇಶ್ವರದಿಂದ ಸುಬ್ರಹ್ಮಣ್ಯ ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು ಇನ್ನಷ್ಟು ಮರಗಳು ಧರೆಗುರುಳುವ ಆತಂಕ ಇದೆ.
ಸಾಗರದಲ್ಲಿ ಬಸ್ ಸಂಚಾರ ಸ್ಥಗಿತ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸೈದೂರು – ಸಾಗರ ಮಾರ್ಗ ಸಂಪೂರ್ಣ ಜಲಾವೃತಗೊಂಡಿದೆ. ಈ ಮಾರ್ಗದಲ್ಲಿ ಬಸ್ ಸಂಚಾರವು ಸ್ಥಗಿತಗೊಂಡಿದೆ. ಇದರಿಂದಾಗಿ 250ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಎರಡು ದಿನಗಳಿಂದ ಬಸ್ ಸಂಚಾರವೂ ಸ್ಥಗಿತಗೊಂಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ