Site icon Vistara News

Rain News : ಕಾಫಿನಾಡಲ್ಲಿ ಮಳೆ ಅಬ್ಬರ; ಹಾನಿ ಭಯಂಕರ, ಜನ ತತ್ತರ

Rain Effected

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ (chikkamangaluru News) ಸತತ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯಿಂದ ಹೊರಗೆ ಬರಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಗಾಳಿ-ಮಳೆಗೆ (Rain News) ಮರಗಳು ಉರುಳಿವೆ, ಜತೆಗೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆ ಆಗಿದೆ. ಕೆಲ ತೋಟಗಳಲೂ ನಾಶವಾಗಿವೆ.

ಹೆಬ್ಬಾಳೆ ಸೇತುವೆ ಮುಳುಗಡೆ

ಕಾಫಿನಾಡು ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಸತತ ಮಳೆಗೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ ಆಗಿದೆ. ಇದರಿಂದಾಗಿ ಕಳಸ-ಹೊರನಾಡು ಸಂಪರ್ಕ ಬಂದ್ ಆಗಿದೆ. ಸಂಪರ್ಕ ಕಳೆದುಕೊಂಡ ಹತ್ತಾರು ಹಳ್ಳಿಯ ಜನರು, ಅನ್ಯ ಮಾರ್ಗವಿದ್ದರೂ 8-10 ಕಿ.ಮೀ ಸುತ್ತಿಕೊಂಡು ಬರಬೇಕಾಗಿದೆ.

ಸೇತುವೆ ಮುಳುಗಡೆ

ರಸ್ತೆಗೆ ಉರುಳಿದ ಬೃಹತ್‌ ಮರ

ಗಾಳಿ- ಮಳೆ ಅಬ್ಬರಕ್ಕೆ ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ಘಟನೆ ನಡೆದಿದ್ದು, ಕಡೂರು-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಮರ ತೆರವು ಆಗದೆ ಇರುವುದರಿಂದ ರಸ್ತೆಯಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಡಿತದಿಂದಾಗಿ ಸವಾರರು ಆಲ್ದೂರು ಮೂಲಕ ಮೂಡಿಗೆರೆ, ಮಂಗಳೂರಿಗೆ ಹೋಗುತ್ತಿದ್ದಾರೆ. ಸುಮಾರು 20 ಕಿ.ಮೀ ಹೆಚ್ಚುವರಿಯಾಗಿ ಸುತ್ತಿಕೊಂಡು ಹೋಗುವಂತಾಗಿದೆ.

ಅಡಿಕೆ ಮರಗಳು ನಾಶ

ಕೊಪ್ಪ ತಾಲೂಕಿನ ಕುಂಚೂರು ಕಂಚಿನರಸಳಿ ಗ್ರಾಮದಲ್ಲಿ ಮರ ಬಿದ್ದು ಐವತ್ತಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿವೆ. ಗ್ರಾಮದ ನಾಗೇಶ್ ಎಂಬುವರ ತೋಟದ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಎರಡು ದಿನದ ಹಿಂದೆಯಷ್ಟೇ ಇದೇ ತೋಟದ ಮೇಲೆ ಬೃಹತ್ ಮರ ಬಿದ್ದಿತ್ತು. ಇದೀಗ ಮತ್ತೊಂದು ಮರ ಬಿದ್ದು ಅಡಿಕೆ ಮರಗಳು ನಾಶವಾಗಿದೆ.

ಇದನ್ನೂ ಓದಿ: Rain News : ಮಳೆ ನೀರಿನಿಂದ ಭರ್ತಿಯಾಗಿದ್ದ ತಗ್ಗು ಗುಂಡಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಕುದುರೆಮುಖದಲ್ಲಿ ಭಾರಿ ಮಳೆ

ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆ ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ. ಜತೆಗೆ ತುಂಗಾ, ಹೇಮಾವತಿ ನದಿಗಳ ಒಳಹರಿವಿನಲ್ಲೂ ಹೆಚ್ಚಳವಾಗಿದೆ. ಭಾರೀ ಗಾಳಿ-ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಕಳಸ-ಕುದುರೆಮುಖ-ಮಂಗಳೂರು ರಸ್ತೆಯಲ್ಲಿರುವ ಜಾಂಬಳೆ ಸಮೀಪ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ನೀರಿನ ನಡುವೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂದಿದೆ.

ಸೇತುವೆ ಮುಳುಗಡೆ

ಭಾರಿ ಮಳೆಗೆ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದ ಪ್ಯಾರಲಾಲ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆ ಆಗಿದೆ. ಇತ್ತ ಶೃಂಗೇರಿ ದೇವಾಲಯದ ಗಾಂಧಿ ಮೈದಾನದ ಅಂಗಡಿ ಮಳಿಗೆಗಳನ್ನು ಮುನ್ನೆಚ್ಚರಿಕೆಯಾಗಿ ಬಂದ್‌ ಮಾಡಲಾಗಿದೆ.ಇತ್ತ ನದಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ವಾಹನ ಸವಾರರು ಪರದಾಡುವಂತಾಗಿದೆ. ಕ್ಷಣ ಕ್ಷಣಕ್ಕೂ ತುಂಗಾ ನದಿಯ ನೀರಿನ ಮಟ್ಟ ಏರಿಕೆ ಆಗುತ್ತಿರುವುದು ಜನರು ಆತಂಕದಲ್ಲೇ ದಿನದೂಡುವಂತಾಗಿದೆ.

ಮುಳುಗಡೆಯಾದ ಹಲವು ಗ್ರಾಮಗಳು

ಮಳೆ ಹಾನಿ ಪ್ರದೇಶಗಳಿಗೆ ಕೆ.ಜೆ ಜಾರ್ಜ್‌ ಭೇಟಿ

ಚಿಕ್ಕಮಗಳೂರು ಜಿಲ್ಲೆ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಲಿದ್ದಾರೆ. ಭೂಕುಸಿತ ಹಾಗೂ ಮಳೆ ಹಾನಿ ಕುರಿತು ಸಚಿವರು ವೀಕ್ಷಣೆ ಮಾಡಲಿದ್ದಾರೆ. ಬಿರುಕು ಬಿಟ್ಟ ಅಪಾಯದ ಸ್ಥಿತಿಯ ಸೇತುವೆಗಳ ಪರಿಶೀಲನೆ ಮಾಡಲಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version