Site icon Vistara News

Rain News : ಮಳೆ ಅಬ್ಬರ; ನಾಳೆ ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

Heavy rain fall in mangaluru

ಕೊಡಗು: ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ (Rain News) ಜೋರಾಗಿದ್ದು, ಇನ್ನೆರಡು ದಿನಕ್ಕೆ ಆರೆಂಜ್‌ ಅಲರ್ಟ್‌ (Weather report) ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಸೇರಿದಂತೆ ಶಾಲಾ‌ ಕಾಲೇಜುಗಳಿಗೆ ಜು.24ರಂದು ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿದ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯಲ್ಲೂ ಅಬ್ಬರದ ಮಳೆ

ಬೆಳಗಾವಿಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ಮೂರು ತಾಲೂಕುಗಳಿಗೆ ಸೋಮವಾರ (ಜು.24) ರಜೆ ಘೋಷಣೆ ಮಾಡಲಾಗಿದೆ. ಖಾನಾಪುರ, ಬೆಳಗಾವಿ, ಕಿತ್ತೂರ ತಾಲೂಕಿನ ಎಲ್ಲ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡದಲ್ಲೂ ಶಾಲಾ-ಕಾಲೇಜುಗಳಿಗೆ ರಜೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಘಟ್ಟದ ಮೇಲಿರುವ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲೂಕಿನ ಶಾಲಾ- ಕಾಲೇಜಿಗೆ ರಜೆ ನೀಡಲಾಗಿದೆ. ಹೊನ್ನಾವರ ವ್ಯಾಪ್ತಿಯ ಗುಂಡಬಾಳ ನದಿ, ಭಾಸ್ಕೇರಿ ಹೊಳೆ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಅಂಗನವಾಡಿ ಹಾಗೂ ಶಾಲೆ ಸೇರಿ ಪಿಯು ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಆದೇಶವನ್ನು ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ರಜೆ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜುಲೈ 24 ರಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲು ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ 5 ತಾಲೂಕುಗಳಲ್ಲಿ ರಜೆ

ಹಾಸನ‌: ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ 5 ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಅಂಗನವಾಡಿಗಳಿಗೆ ಜುಲೈ 24ರಂದು ರಜೆ ಘೋಷಿಸಿ ಡಿಸಿ ಸಿ.ಸತ್ಯಭಾಮ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕೊಪ್ಪ ತಾಲೂಕಿನಲ್ಲಿ ರಜೆ ಘೋಷಣೆ

ಚಿಕ್ಕಮಗಳೂರು: ಕಾಫಿ ನಾಡಿನ ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಕೊಪ್ಪ ತಾಲೂಕಿನ‌ ಶಾಲಾ‌, ಕಾಲೇಜುಗಳಿಗೆ ಜುಲೈ 24ರಂದು ರಜೆ ಘೋಷಣೆ ಮಾಡಲಾಗಿದೆ. ಉಳಿದ ಮಲೆನಾಡು ತಾಲೂಕುಗಳಿಗೂ ರಜೆ ಘೋಷಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮೂಡಿಗೆರೆ, ಶೃಂಗೇರಿ, ಎನ್. ಆರ್. ಪುರ, ಚಿಕ್ಕಮಗಳೂರು ತಾಲೂಕುಗಳಿಗೆ ರಜೆ ಘೋಷಿಸುವ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ.

ಮಳೆಗೆ ಮನೆ ಕುಸಿದು ಮೃತಪಟ್ಟ ಜಾನುವಾರುಗಳು

ನಿರಂತರ ಮಳೆಗೆ ಕುಸಿದ ಚಾವಣಿ; ಜಾನುವಾರುಗಳು ಸಾವು

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ನಿರಂತರ ಮಳೆಗೆ ಚಾವಣಿ ಕುಸಿದು ಜಾನುವಾರುಗಳು ದಾರುಣವಾಗಿ ಮೃತಪಟ್ಟಿವೆ. ಬಣಕಾರ ಪಾರ್ವತಮ್ಮ ಎಂಬವರ ಮನೆಯ ಹಿಂಭಾಗ ಕುಸಿದು, ಒಂದು ಎಮ್ಮೆ, ಮೂರು ಆಡು ಮಣ್ಣಲ್ಲಿ ಸಿಲುಕಿ ಮೃತಪಟ್ಟಿವೆ. ಇತ್ತ ಮಣ್ಣಿನಲ್ಲಿ ಸಿಲುಕಿದ್ದ ಹಿರೆಯಮ್ಮ ಎಂಬ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕಾಲು ಮುರಿದು ಗಾಯಗೊಂಡಿರುವ ಮಹಿಳೆಯನ್ನು ಹಾವೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Weather Report : ಈ ವಾರ ಪೂರ್ತಿ ಮಳೆಯೋ ಮಳೆ!

ಯುಟಿಪಿ ಕಾಲುವೆ ಒಡೆದು ಅನಾಹುತ

ಹಾವೇರಿ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ರಾಣೇಬೆನ್ನೂರು ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ಬಳಿ ಯುಟಿಪಿ ಕಾಲುವೆ ಒಡೆದಿದೆ. ಕಾಲುವೆ ಒಡೆದು ನೀರು ಹರಿಯುತ್ತಿದ್ದು ಹೊಲಕ್ಕೆ ನೀರು ನುಗ್ಗುವ ಭೀತಿ ಇದೆ. ಬಿಲ್ಲಹಳ್ಳಿ, ಹಾರೋಗೊಪ್ಪ, ದಂಡಿಗೆಹಳ್ಳಿ, ಗ್ರಾಮದ ರೈತರಲ್ಲಿ ಆತಂಕ ಹೆಚ್ಚಾಗಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣದಿಂದ ಕುಕ್ಕೆಯಲ್ಲಿ ಹರಿಯುವ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳು ತೀರ್ಥಸ್ನಾನ ಮಾಡುವ ಸ್ನಾನ ಘಟ್ಟ ಸಂಪೂರ್ಣ ಜಲಾವೃತಗೊಂಡಿದ್ದು, ತೀರ್ಥಸ್ನಾನ ನಿಷೇಧಿಸಲಾಗಿದೆ. ಎಸ್​ಡಿಆರ್​ಎಫ್​ ತಂಡ ಸೇರಿದಂತೆ ಗೃಹರಕ್ಷಕ ದಳ ಹಾಗೂ ಪೊಲೀಸರು ಸ್ನಾನಘಟ್ಟದ ಬಳಿ ನಿಯೋಜಿಸಿಲಾಗಿದೆ. ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಪ್ರವಾಹದ ನೀರು ನುಗ್ಗಿ ಸಂಚಾರ ವ್ಯತ್ಯಯಗೊಂಡಿದೆ.

ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ನೀರಲ್ಲಿ ಸಿಲುಕಿದ ಪಿಕಪ್‌ ವಾಹನ

ಸೇತುವೆಯಲ್ಲಿ ಸಿಲುಕಿದ ಪಿಕಪ್ ವಾಹನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಭಾರೀ ಮಳೆಗೆ ಸೇತುವೆ ಮುಳುಗಡೆ ಆಗಿದೆ. ಕೆದಿಲ ಕಾಂತುಕೋಡಿ ಸೇತುವೆಯಲ್ಲಿ ಪಿಕಪ್ ವಾಹನವೊಂದು ಸಿಲುಕಿಕೊಂಡಿತ್ತು. ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕಪ್ ಚಾಲಕ ತಮ್ಮ ವಾಹನವನ್ನು‌ ಚಲಾಯಿಸಿಕೊಂಡು ಬಂದಿದ್ದರು. ನೀರು ಹೆಚ್ಚಾಗಿ ಸೇತುವೆಯ ಮಧ್ಯದಲ್ಲಿ ವಾಹನ ಸಿಲುಕಿಕೊಂಡಿತ್ತು. ತಕ್ಷಣ ಸ್ಥಳೀಯರು ವಾಹನದಲ್ಲಿ ಸಿಲುಕಿದವವರನ್ನು ರಕ್ಷಣೆ ಮಾಡಿದ್ದಾರೆ.

ಭಾರೀ ಮಳೆಗೆ ತತ್ತರಿಸಿದ ಪುಷ್ಪಗಿರಿ ಅರಣ್ಯದ ತಪ್ಪಲು

ಭಾರೀ ಮಳೆಗೆ ಕೊಡುಗು ವ್ಯಾಪ್ತಿಯ ಪುಷ್ಪಗಿರಿ ಅರಣ್ಯ ಪ್ರದೇಶ ತತ್ತರಿಸಿದೆ. ಮಳೆಯಿಂದಾಗಿ ಗೌರಿ ಹೊಳೆ ಅಪಾಯದ ಮಟ್ಟ ತಲುಪಿದೆ. ಕಲ್ಮಕಾರು, ಕೊಲ್ಲಮೊಗ್ರು ಹರಿಹರ ಪ್ರದೇಶದಲ್ಲಿ ಪ್ರವಾಹ ರೀತಿಯಲ್ಲಿ ಕೆಂಪು ಮಿಶ್ರಿತ ನೀರು ಹರಿಯುತ್ತಿದೆ. ಕಳೆದ ವರ್ಷ ಕಡಮಕಲ್ಲು ಎಸ್ಟೇಟ್ ಬಳಿ ಭೂ ಕುಸಿತದಿಂದ ನದಿಯಲ್ಲಿ ಮಣ್ಣು, ಮರ ಕೊಚ್ಚಿ ಬಂದಿತ್ತು. ಈ ವರ್ಷವೂ ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.

ಪ್ರವಾಹ ಭೀತಿ ನಿವಾಸಿಗಳ ಸ್ಥಳಾಂತರ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭಾಸ್ಕೇರಿ ಹಾಗೂ ಗುಂಡಬಾಳ ಹಳ್ಳಗಳು ತುಂಬಿ ಹರಿಯುತ್ತಿರುವ ಕಾರಣ ತೀರ‌ ಪ್ರದೇಶದ ನಿವಾಸಿಗಳಿಗೆ ನೆರೆ ಆತಂಕ ಎದುರಾಗಿದೆ. ಈಗಾಗಲೇ ಗುಂಡಬಾಳ, ಚಿಕ್ಕನಕೋಡು, ಹುಡಗೋಡು, ಹಡಿನ್‌ಬಾಳ ಭಾಗದ ಮನೆ ಹಾಗೂ ತೋಟಗಳಿಗೆ ನದಿ ನೀರು ನುಗ್ಗಿದೆ. ಗುಂಡಬಾಳ ಗ್ರಾಮದ ಎರಡು ಮನೆಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ರಾತ್ರಿ ವೇಳೆ ಪ್ರವಾಹ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೋಟುಗಳನ್ನು ಸಿದ್ಧಪಡಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ತಾಲ್ಲೂಕಾಡಳಿತ ಹಾಗೂ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಅಗತ್ಯವಿರುವೆಡೆ ಕಾಳಜಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version