ಹಾಸನ/ ಕಲಬುರಗಿ: ಹಾಸನದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹೊಳೆನರಸೀಪುರ ತಾಲೂಕಿನ ಉಲಿವಾಲ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆ (Rain News) ಕುಸಿದಿದೆ. ತಡರಾತ್ರಿ ಗೋಡೆ ಕುಸಿತದಿಂದಾಗಿ (Rain Effect) ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶಾಲೆಯು ಸಂಪೂರ್ಣ ಶಿಥಿಲಗೊಂಡಿದ್ದು, ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಕೋರಿದ್ದಾರೆ. ಆದರೆ ಹಣ ಸಂದಾಯ ಮಾಡದ ಹಿನ್ನೆಲೆ ಗುತ್ತಿಗೆದಾರ ಹೊಸ ಕಟ್ಟಡಕ್ಕೆ ಬೀಗ ಜಡಿದಿದ್ದಾನೆ. ಇದರಿಂದಾಗಿ ಮಕ್ಕಳಿಗೆ ಹಳೆಯ ಕಟ್ಟಡದಲ್ಲೇ ಪಾಠ ಪ್ರವಚನ ನಡೆಯುತ್ತಿದೆ. ಇತ್ತ ಶಾಲೆಯ ಗೋಡೆ ಕುಸಿದಿಂದಾಗಿ ಜಡಿ ಮಳೆಯ ನಡುವೆ ಶಾಲೆಯ ಜಗ್ಗಲಿ ಮೇಲೆ ಮಕ್ಕಳು ಪಾಠ ಕಲಿಯುವಂತಾಗಿದೆ. ಅನಾಹುತ ಸಂಭವಿಸುವ ಮುನ್ನ ನೂತನ ಕಟ್ಟಡಕ್ಕೆ ಶಾಲೆ ಸ್ಥಳಾಂತರ ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಲ್ಲಿ ಮನೆಯೇ ನೆಲಸಮ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯ ಅವಾಂತರ ಮಾತ್ರ ನಿಂತಿಲ್ಲ. ಮಳೆಯ ಆರ್ಭಟಕ್ಕೆ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಮಂಜುಳಾ ಎಂಬುವರಿಗೆ ಸೇರಿದ ಮನೆ ನೆಲಸಮವಾಗಿದೆ. ಮಲಗಿದ್ದಾಗ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ. ದವಸ ಧಾನ್ಯ, ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸಂಪೂರ್ಣ ನಾಶವಾಗಿವೆ. ಮನೆ ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇತ್ತ ಚಲಿಸುತ್ತಿದ್ದ ಬಸ್ ಮುಂಭಾಗಕ್ಕೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಪಾರಾಗಿದ್ದಾರೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ತೆರಳುತ್ತಿತ್ತು. ಮರ ಬೀಳುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ಬಸ್ ನಿಲ್ಲಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲೆಯ ಚಾವಣಿ ಕುಸಿತ
ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ನಾಗರನಾಳ ಕೆರೆ ತುಂಬಿ ಹರಿಯುತ್ತಿದೆ. ನಾಗರಾಳ ಮತ್ತು ಚಂದ್ರಂಪಳಿ ಜಲಾಶಯದಿಂದಲೂ ನೀರು ಬಿಡುಗಡೆ ಆಗಿದ್ದು, ಗಾರಂಪಳ್ಳಿ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.
ಕಲಬುರಗಿಯ ಜೇವರ್ಗಿ ತಾಲೂಕಿನ ವಸ್ತರಿ ಗ್ರಾಮದ ಪ್ರೌಢ ಶಾಲೆಯಲ್ಲಿ ಮಳೆ ರಭಸಕ್ಕೆ ಕೊಠಡಿಯ ಚಾವಣಿಯ ಸಿಮೆಂಟ್ ಪ್ಲಾಸ್ಟರ್ ಕುಸಿದಿದೆ. ಸ್ವಲ್ಪದರಲ್ಲೇ ಮಕ್ಕಳು ಬಚಾವ್ ಆಗಿದ್ದಾರೆ. ಸಂಪೂರ್ಣ ಶಿಥಿಲಗೊಂಡಿರುವ ಶಾಲೆ ಕೊಠಡಿಯಲ್ಲೇ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಾಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಿರಂತರ ಮಳೆಗೆ ಕೊಠಡಿಯಲ್ಲಿ ನೀರು ಸೋರುತ್ತಿದ್ದರಿಂದ ಮಕ್ಕಳನ್ನು ಆವರಣದಲ್ಲಿ ಕೂರಿಸಲಾಗಿತ್ತು. ಇದರಿಂದಾಗಿ ಯಾವುದೇ ಅಪಾಯವಾಗಿಲ್ಲ.
ಕ್ಲಾಸ್ ರೂಮಿನೊಳಗೆ ನುಗ್ಗಿದ ನೀರು
ಕಲಬುರಗಿಯ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಚಾವಣಿಯಿಂದ ನೀರು ಸೋರಿಕೆ ಆಗುತ್ತಿದ್ದು, ಕೊಠಡಿಯಲ್ಲಿ ನೀರು ನಿಂತಿದೆ. 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುವ ಈ ಸರ್ಕಾರಿ ಶಾಲೆಯಲ್ಲಿ ಬಹುತೇಕ ಕೋಣೆಗಳು ಹೀಗೆ ಇವೆ. ಮಳೆಯ ನೀರಲ್ಲೆ ಕೂತು ವಿದ್ಯಾರ್ಥಿಗಳು ಪಾಠ ಕೇಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿಯಲ್ಲಿ ನಿರಂತರ ವರ್ಷಧಾರೆಗೆ 7 ಮನೆಗಳು ಕುಸಿದಿದೆ. ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮ, ಸಾಗರತಾಂಡಾ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮನೆಗಳು ಕುಸಿದಿದೆ. ಮನೆ ಕುಸಿತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಿಂಚೋಳಿ ತಾಲೂಕಿನಲ್ಲಿಯೇ ಈವರೆಗೂ 20ಕ್ಕೂ ಅಧಿಕ ಮನೆಗಳು ಕುಸಿದಿದೆ.
ಇದನ್ನೂ ಓದಿ: ಮಕ್ಕಳೊಂದಿಗೊಂದು ಮಳೆದಿನ ಎಂಬ ಫನ್- ಅನ್‌ಲಿಮಿಟೆಡ್!
ಗೋಡೆ ಕುಸಿಯುತ್ತಿದ್ದಂತೆ ಓಡಿ ಬಂದ ಕುಟುಂಬಸ್ಥರು
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ಸತತ ಮಳೆಗೆ ಕಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಬಿದ್ದಿದೆ. ಭಾರಿ ಮಳೆ ಹಿನ್ನೆಲೆ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಇದರಿಂದ ಅನಾಹುತವೊಂದು ತಪ್ಪಿದೆ. ಗೋಡೆ ಕುಸಿದು ಕೊಠಡಿಯ ಒಳಭಾಗಕ್ಕೆ ಬಿದ್ದಿದೆ. ಧಾರವಾಡದ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮನೆ ಕುಸಿಯುತ್ತಿದ್ದಂತೆ ಕುಟುಂಬಸ್ಥರೆಲ್ಲರೂ ಮನೆಯಿಂದಾಚೆ ಓಡಿ ಬಂದಿದ್ದಾರೆ. ಬಸಪ್ಪ ಕಳಸಣ್ಣವರ ಎಂಬುವವರ ಮನೆ ಕುಸಿದು, ದವಸಧಾನ್ಯ, ಸಾಮಗ್ರಿಗಳೆಲ್ಲವೂ ಮಣ್ಣು ಪಾಲಾಗಿದೆ.
ಇತ್ತ ಶಿವಮೊಗ್ಗದಲ್ಲಿ ಭಾರೀ ಮಳೆಗೆ ನಗರದ ಶೇಷಾದ್ರಿಪುರಂ ಬಡಾವಣೆಯ ಅಮಿನಾಬಿ ಎಂಬುವವರ ಮನೆಯ ಗೋಡೆ ಕುಸಿದಿದೆ. ನಸುಕಿನ ಜಾವ 3 ಗಂಟೆಗೆ ಈ ಅವಘಡ ನಡೆದಿದೆ. ನಿದ್ದೆ ಮಂಪರಿನಲ್ಲಿದ್ದಾಗ ಗೋಡೆ ಕುಸಿದಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರ್ಕಾರಿ ಆಸ್ಪತ್ರೆ ದುಸ್ಥಿತಿ
ಬೆಳಗಾವಿ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರಂತರ ಮಳೆಗೆ ಚಾವಣಿಯಿಂದ ನೀರು ಸೋರುತ್ತಿದೆ. ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ನೀರು ಸೋರಿಕೆಗೆ ಬಕೆಟ್, ಬುಟ್ಟಿಯನ್ನು ಸಿಬ್ಬಂದಿ ಇಟ್ಟಿದ್ದಾರೆ. ಇತ್ತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಪರದಾಡುವಂತಾಗಿದೆ.
ನೆಲಕ್ಕುರಳಿದ ಶತಮಾನದ ಆಲದ ಮರ
ಬಾಗಲಕೋಟೆಯ ತೇರದಾಳ ಪಟ್ಟಣದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಬುಡ ಸಮೇತ ಆಲದ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾರೂ ಇಲ್ಲದ ವೇಳೆ ಮರ ಉರುಳಿದೆ. ಜಮಖಂಡಿ ಸಂಸ್ಥಾನದ ಪಠವರ್ಧನ ಮಹಾರಾಜರ ಕಾಲದಲ್ಲಿ ನೆಟ್ಟಿದ್ದ ಆಲದ ಮರ ಇದಾಗಿದ್ದು, ಶತಮಾನದ ಇತಿಹಾಸವನ್ನು ಹೊಂದಿದೆ.
ಕುಡಚಿ ಸೇತುವೆ ಮುಳುಗಡೆ
ಕರ್ನಾಟಕ ಮಹಾರಾಷ್ಟ್ರ ಸಂಪರ್ಕದ ಕೊಂಡಿಯಾಗಿದ್ದ ಕುಡಚಿ ಸೇತುವೆ ಮುಳುಗಡೆ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯದಲ್ಲಿರುವ ಸೇತುವೆ ಮುಳುಗಡೆ ಆಗಿದೆ. ಸೇತುವೆ ಮುಳುಗಡೆ ಆಗಿದ್ದರಿಂದ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿದ್ದಾರೆ. ದಾರಿ ಬಂದ್ ಆಗಿದೆ ಎಂದು ಎಚ್ಚರಿಕೆಯ ಬ್ಯಾನರ್ ಹಾಕಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ