ಕಲಬುರಗಿ/ ಕಾರವಾರ: ಉತ್ತರ ಕರ್ನಾಟ ಸೇರಿ ಕರಾವಳಿ, ಮಲೆನಾಡಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ನಾನಾ ಅವಾಂತರವನ್ನೇ (Rain effected) ಸೃಷ್ಟಿಸಿದೆ. ರಾತ್ರಿಯಿಡಿ ಸುರಿದ ಮಳೆಗೆ (Rain News) ಜನರು ಜಾಗರಣೆ ಮಾಡುವಂತಾಗಿದೆ. ಶಾಲೆಗೆ, ಮನೆಗಳಿಗೆ ಎಲ್ಲ ನೀರು ನುಗ್ಗಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಕಲಬುರಗಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶಹಾಬಾದ್ ಪಟ್ಟಣ್ಣದ ಗೋಳಾ ಕೆ ಗ್ರಾಮದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಮಳೆ ನೀರಿನಲ್ಲೇ ಮಕ್ಕಳು ಓಡಾಡುತ್ತಿದ್ದಾರೆ. ಈ ಶಾಲೆಯ ಕಟ್ಟಡವು ಸುಮಾರು 65 ವರ್ಷಗಳ ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಅನಾಹುತ ಸಂಭವಿಸುವ ಮುನ್ನ ಈ ಕಟ್ಟಡ ನೆಲಸಮಕ್ಕೆ ಶಾಲಾ ಮುಖ್ಯೋಪಾಧ್ಯಾಯರು ಮನವಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಬೆನಕನಹಳ್ಳಿ ಗ್ರಾಮದ 20 ಕ್ಕೂ ಅಧಿಕ ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಯವರು ನೀರನ್ನು ಹೊರಗೆ ಹಾಕುವುದು ಸಾಹಸವಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು ಸಂಪೂರ್ಣ ನೀರು ಪಾಲಾಗಿದೆ. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ಇದ್ದು, ಯಾವೊಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಕದ್ರಾ ಜಲಾಶಯಕ್ಕೆ ನೀರು ಬಿಡುಗಡೆ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ 30 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯ ಕೆಳಗಿನ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. 34.50 ಮೀಟರ್ ಗರಿಷ್ಠ ಸಾರ್ಮಥ್ಯದ ಕದ್ರಾ ಜಲಾಶಯಕ್ಕೆ ಜಿಲ್ಲಾಡಳಿತವು 31 ಮೀಟರ್ ಗರಿಷ್ಠ ಮಟ್ಟ ನಿಗದಿಪಡಿಸಿದೆ. ಜಲಾಶಯಕ್ಕೆ ಹೆಚ್ಚುವರಿ ಹರಿದು ಬರುತ್ತಿರುವ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಇದನ್ನೂ ಓದಿ: Rain News : ʻಮಹಾʼ ಮಳೆಗೆ ಜನರು ತತ್ತರ; ಹತ್ತಕ್ಕೂ ಹೆಚ್ಚು ಸೇತುವೆಗಳು ಮುಳುಗಡೆ
ಭಾರಿ ಮಳೆ ಗಾಳಿಗೆ ಉರುಳಿದ ಮರ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಬಳಿ ಭಾರೀ ಗಾಳಿ ಮಳೆಗೆ ಮರವೊಂದು ಉರುಳಿದೆ. ಇದರಿಂದಾಗಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೇರಳಕಟ್ಟೆಯಲ್ಲಿ ವಾಹನ ಸಂಚಾರವು ಅಸ್ತವ್ಯಸ್ತಗೊಂಡಿತ್ತು. ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಂಟ್ವಾಳದ ಲೊರೆಟ್ಟೋಪದವು ಬಳಿಯೂ ಮರ ಬಿದ್ದರಿಂದ ಜನರು ಪರದಾಡಬೇಕಾಯಿತು.
ಇತ್ತ ಕೊಡಗು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಷ್ಟ್ರೀಯ ಹೆದ್ದಾರಿ 275ರ ಅರಣ್ಯ ಭವನ ಬಳಿ ಮರವೊಂದು ಬಿದ್ದರಿಂದ ಕೆಲ ಗಂಟೆಗಳ ಕಾಲ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಮಡಿಕೇರಿ ಮಾಂದಲ್‌ಪಟ್ಟಿ ರಸ್ತೆಯಲ್ಲೂ ಮರವೊಂದು ಅಡ್ಡಲಾಗಿ ಬಿದ್ದಿತ್ತು. ಹೀಗಾಗಿ ಮಡಿಕೇರಿ ಅಬ್ಬಿಫಾಲ್ಸ್ ಮಾಂದಲ್‌ಪಟ್ಟಿ ರಸ್ತೆ ಸಂಚಾರ ಬಂದ್ ಆಗಿತ್ತು.
ಮೂರ್ನಾಡು ಸಮೀಪದ ಎಂ.ಬಾಡಗ ಬಳಿ ಶಾಲೆಯ ಮೇಲೆ ಮರವೊಂದು ಉರುಳಿತು. ಅದೃಷ್ಟವಾಶತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಿತ್ರದುರ್ಗ ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಕೆಲಸಕ್ಕೆ ಹೋಗುವವರಿಗೆ, ಶಾಲಾ ಕಾಲೇಜು ಮಕ್ಕಳಿಗೆ ವರುಣ ಅಡ್ಡಿಯಾಗಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ