ಶಿವಮೊಗ್ಗ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಕುಸಿದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಚಿಟ್ಟೂರು ಗ್ರಾಮದ ಅಶೋಕ (32) ಮೃತ ದುರ್ದೈವಿ.
ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈರಪ್ಪ ಎಂಬುವರ ವಾಸವಿರದ ಮನೆಯೊಂದರ ಬಳಿ ನಿಂತಿದ್ದರು ಎನ್ನಲಾಗಿದೆ. ಆ ವೇಳೆ ದಿಢೀರನೆ ಮನೆ ಕುಸಿದುಬಿದ್ದು ದುರ್ಘಟನೆ ಸಂಭವಿಸಿದೆ. ಅಶೋಕ ಅವರ ತಂದೆ, ತಾಯಿ ಕೆಲವು ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಅದೇ ಗ್ರಾಮದ ಸೋದರತ್ತೆ ಮನೆಯಲ್ಲಿ ನೆಲೆಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಭದ್ರಾ ಜಲಾಶಯದಿಂದ ತಗ್ಗು ಪ್ರದೇಶದ ನಿವಾಸಿಗಳಿಗೆ ಆತಂಕ
ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಸೇತುವೆ ಮುಳುಗಡೆಗೊಂಡಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣ ಮುಳುಗಡೆ ಆಗಿದೆ. ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡಿದೆ. ಜಲಾಶಯದ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಈ ಬಾರಿ ಜಲಾಶಯ ಬಹುಬೇಗನೆ ಭರ್ತಿಗೊಂಡಿದೆ.
ಇದನ್ನೂ ಓದಿ | Weather Report: ಕರಾವಳಿ ಭಾಗಕ್ಕೆ ಭಾರಿ ಮಳೆ ಮುನ್ಸೂಚನೆ: ಮೀನುಗಾರಿಕೆಗೆ ಇಳಿಯದಂತೆ ಅಲರ್ಟ್
ನದಿಗೆ ಹೆಚ್ಚುವರಿ ಬಿಟ್ಟ ನೀರು ನಗರ ಪ್ರವೇಶಿಸುತ್ತಿದ್ದಂತೆ ಹಂತ ಹಂತವಾಗಿ ಏರಿಕೆ ಕಂಡಿದೆ. ಗುರುವಾರ ರಾತ್ರಿ (ಜು.14) ಹೊಸಸೇತುವೆ ಸಂಪೂರ್ಣ ಮುಳುಗಡೆಗೊಂಡಿತ್ತು. ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಿದೆ. ಹಳೇ ಸೇತುವೆ ಸಮೀಪದ ಸಂಗಮೇಶ್ವರ ದೇವಸ್ಥಾನ ಕೂಡ ಸಂಪೂರ್ಣ ಮುಳುಗಡೆ ಆಗಿದೆ. ಎಲ್ಲ ವಾಹನಗಳು ಹಳೇ ಸೇತುವೆ ಮೂಲಕ ಸಂಚಾರ ನಡೆಸುತ್ತಿದ್ದು, ನೀರಿನ ಮಟ್ಟ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭದ್ರಾವತಿಯ ನೆರೆ ಭೀತಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಭೇಟಿ ನೀಡಿದರು. ಒಕ್ಕಲಿಗರ ಭವನದಲ್ಲಿ ನಿರ್ಮಾಣ ಮಾಡಲಾಗಿರುವ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರಿಸಿ, ಪರಿಸ್ಥಿತಿಯನ್ನು ಅವಲೋಕಿಸಿದರು.
ತುಂಗಾ ನದಿಗೆ ಬಾಗಿನ ಅರ್ಪಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ಜಿಲ್ಲೆಯ ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದ ಸಮೀಪ ಉಕ್ಕಿ ಹರಿಯುತ್ತಿರುವ ತುಂಗಾ ನದಿಗೆ ಗೃಹಸಚಿವ ಆರಗ ಜ್ಞಾನೇಂದ್ರ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರಾದ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಮೋಹನ್, ಗೀತಾ, ಜ್ಯೋತಿ ಗಣೇಶ್, ಮುಖ್ಯಾಧಿಕಾರಿ ಕುರಿಯಕೊಸ್, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ಉಪ ವಿಭಾಗಾಧಿಕಾರಿ ದೊಡ್ಡಗೌಡ, ತಹಸೀಲ್ದಾರ್ ಅಮೃತ್ ಅತ್ರೇಶ್, ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ ಮುಂತಾದವರು ಇದ್ದರು.
ಇದನ್ನೂ ಓದಿ | Rain News | ಮಳೆ ನಿಂತರೂ ಮನೆ ಸೇರಲು ಈ ಗ್ರಾಮಕ್ಕೆ ದೋಣಿಯೇ ಆಸರೆ!