ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಂಗಳವಾರ (ಮೇ 30) ವರುಣ (Bangalore Rain) ಮತ್ತೆ ಅಬ್ಬರಿಸಿದ್ದಾನೆ. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ (Rain News) ನಗರದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿದರೆ, ಎಂದಿನಂತೆ ಅಂಡರ್ ಪಾಸ್‌ನಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯುಂಟಾಗಿದೆ.
ಸರ್ಕಾರಿ ಕಚೇರಿಗಳಿರುವ ಎಂ.ಎಸ್.ಬಿಲ್ಡಿಂಗ್ ಜಲಾವೃತಗೊಂಡಿದೆ. ಶಿವಾನಂದ ಸರ್ಕಲ್‌ನಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಪಾರ್ಕಿಂಗ್ ಮಾಡಿದ್ದ ವಾಹನಗಳೆಲ್ಲವೂ ಮುಳುಗಡೆ ಆಗಿದೆ. ಮಳೆಯಿಂದಾಗಿ ಟ್ರಾಫಿಕ್ ಜಾಂ ಉಂಟಾಗಿದ್ದು, ವಾಹನಗಳೆಲ್ಲವೂ ನಿಂತಲ್ಲೆ ನಿಂತಿವೆ. ಅಂಡರ್‌ಪಾಸ್‌ನಲ್ಲಿ ನೀರು ತುಂಬುತ್ತಿದ್ದರಿಂದ ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರವನ್ನು ಸಂಚಾರಿ ಪೊಲೀಸರು ಬಂದ್ ಮಾಡಿದ್ದಾರೆ.
ಮೆಜೆಸ್ಟಿಕ್, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ ಸೇರಿದಂತೆ ಅನೇಕ ಕಡೆ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಮಳೆಯೊಂದಿಗೆ ಜೋರಾಗಿ ಗಾಳಿಯೂ ಬೀಸಿದ್ದರಿಂದ ಅನೇಕ ಕಡೆ ಮರಗಳ ರೆಂಬೆಗಳು ಬಿದ್ದು ಅನಾಹುತ ಸೃಷ್ಟಿಯಾಗಿದೆ.
ಕೆಆರ್ ಸರ್ಕಲ್ ಅಂಡರ್‌ಪಾಸ್ ಬಂದ್
ಕೆ.ಆರ್. ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ (underpasses) ಕಳೆದ ಮೇ 21ರಂದು ಮಳೆ ನೀರು ತುಂಬಿ ಕಾರಿನಲ್ಲಿದ್ದ ಯುವತಿ ಭಾನುರೇಖಾ ಎಂಬುವವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಳೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಕೆಆರ್ ಸರ್ಕಲ್ ಅಂಡರ್‌ಪಾಸ್ ಅನ್ನು ಬಂದ್ ಮಾಡಿದ್ದಾರೆ. ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಧರೆಗುರುಳಿದ ಬೃಹತ್ ಮರ, ಆಟೋ ಜಖಂ
ಬೆಂಗಳೂರಿನ ಕಮಲನಗರ ವಾಟರ್ ಟ್ಯಾಂಕ್ ಬಳಿ ಭಾರಿ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಮರದ ಕೆಳಗಿದ್ದ ಆಟೋ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಬದಿ ನಿಲ್ಲಿಸಿದ್ದ ತಳ್ಳುವ ಗಾಡಿಗಳಿಗೂ ಹಾನಿಯಾಗಿದೆ. ಮಳೆ ಕಾರಣಕ್ಕೆ ರಸ್ತೆಯಲ್ಲಿ ಯಾರು ಓಡಾಡದೇ ಇರುವುದರಿಂದ ಯಾವುದೇ ಹೆಚ್ಚಿನ ಅವಘಡ ಸಂಭವಿಸಿಲ್ಲ. ಮರವು ರಸ್ತೆ ಮಧ್ಯೆಯೇ ಬಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಎಮ್. ಶಿವರಾಜು ಭೇಟಿ ನೀಡಿದರು. ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿಗೆ ಕರೆ ಮಾಡಿ ಮರ ತೆರವು ಕಾರ್ಯಕ್ಕೆ ಮುಂದಾದರು. ಇನ್ನು ನಾಲ್ಕು ದಿನ ನಗರದಲ್ಲಿ ಭಾರಿ ಮಳೆ ಬೀಳುವ ಸಂಭವವಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: Rain News: ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆ; ಜನರು ತತ್ತರ, ಸಿಡಿಲಿಗೆ ಆರು ಕುರಿ ಬಲಿ
ಮುಂದಿನ ಮೂರು ಗಂಟೆಗಳಲ್ಲಿ ಬಿರುಗಾಳಿ ಮಳೆ ಎಚ್ಚರಿಕೆ
ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿ.ಮೀ ಇರುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ಕೊಡಗು, ಮೈಸೂರು, ಉತ್ತರಕನ್ನಡ, ಉಡುಪಿ, ರಾಯಚೂರು, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ