ಮಂಗಳೂರು: ಮೊಣಕಾಲು ಮಟ್ಟಕ್ಕೆ ನೀರು ಬಂದು ಮೈಪೂರಾ ಒದ್ದೆಯಾದರೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ (kukke subramanya) ಘಟನೆ ನಡೆದಿದೆ. ಸತತ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ (Rain News) ಸುರಿಯುತ್ತಿದ್ದು, ರಸ್ತೆಗಳೆಲ್ಲವೂ ಜಲಾವೃತಗೊಂಡಿದೆ.
ಈ ನೆರೆ ನೀರಿನಲ್ಲೇ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿದ್ದಾರೆ. ಅಪಾಯವನ್ನು ಲೆಕ್ಕಿಸದೇ ವಿದ್ಯಾರ್ಥಿಗಳು ಈ ರೀತಿ ಹೋಗುತ್ತಿರುವುದಕ್ಕೆ ಪೋಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಆತಂಕದಲ್ಲೇ ದಿನದೂಡುವಂತಾಗಿದೆ.
ಭಾರಿ ಮಳೆಗೆ ಕುಸಿದ ಮನೆ, ಆರು ಮಂದಿ ಪವಾಡ ಸದೃಶ ಪಾರು
ಮುಲ್ಕಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಯೊಂದು ಕುಸಿದಿದೆ. ಕೆಎಸ್‌ರಾವ್ ನಗರದ ಲಿಂಗಪ್ಪಯ್ಯ ಕಾಡು ವಿಜಯಪುರ ಕಾಲೋನಿಯ ಮಲ್ಲಿಕಾರ್ಜುನ ಮಠದ ಬಳಿಯ ನಿವಾಸಿ ಲಕ್ಷ್ಮಿ ಪಕೀರಪ್ಪ ಎಂಬುವರ ಮನೆ ಸಂಪೂರ್ಣ ಕುಸಿದು ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ರಾತ್ರಿ ಹೊತ್ತು ಮಳೆ ಸುರಿದಿದ್ದು, ಮನೆಯ ಮೇಲ್ಭಾಗದಲ್ಲಿ ಭಾರಿ ಶಬ್ಧ ಉಂಟಾಗಿದೆ. ಈ ವೇಳೆ ಮನೆಯೊಳಗಿದ್ದ ಲಕ್ಷ್ಮಿ ಪಕೀರಪ್ಪ ಸಹಿತ ಆರು ಮಂದಿ ಹೊರಗೆ ಓಡಿ ಬಂದಿದ್ದಾರೆ. ಕ್ಷಣಾರ್ಧದಲ್ಲಿ ಮನೆ ಪೂರಾ ಕುಸಿದು ಬಿದ್ದಿದ್ದು, ಮನೆಮಂದಿ ಪವಾಡ ಸದೃಶ ಪಾರಾಗಿದ್ದಾರೆ. ಘಟನೆಯಿಂದ ಮನೆಯೊಳಗಿನ ವಸ್ತುಗಳು ನಾಶವಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಲಕ್ಷ್ಮಿ ಪಕೀರಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಅತಿಕಾರಿ ಬೆಟ್ಟು, ಕೊಳಚಿ ಕಂಬಳ ಪರಿಸರದಲ್ಲಿ ಮಳೆಗೆ ಭಾರೀ ಹಾನಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಹೊಳೆಗಳು ತುಂಬಿ ಹರಿಯುತ್ತಿದೆ. ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿ ಹೊಳೆಗಳ ಹರಿವು ಹೆಚ್ಚಳವಾಗಿದೆ. ಇದರಿಂದಾಗಿ ಸುಬ್ರಹ್ಮಣ್ಯ ರಸ್ತೆಯ ಬೊಳ್ಮಲೆ, ಬಸ್ತಿಕಾಡು ಭಾಗದಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ. ಭಾರೀ ಮಳೆಗೆ ಬಸ್ತಿಕಾಡುವಿನ ಕಿಂಡಿ ಅಣೆಕಟ್ಟು, ಸೇತುವೆ ಮುಳುಗಡೆ ಆಗಿದೆ. ಅಣೆಕಟ್ಟು ಸೇತುವೆ ಮುಳುಗಡೆಯಿಂದ 15ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತವಾಗಿದೆ. ವಾಹನ ಸಂಚಾರ, ಕಾಲುದಾರಿಯೂ ಮುಳುಗಡೆಯಾಗಿ ಗ್ರಾಮಸ್ಥರು ಅತಂತ್ರರಾಗಿದ್ದಾರೆ.
ಹೊಳೆಯಲ್ಲಿ ಮರದ ದಿಮ್ಮಿಗಳು ಉರುಳಿ ಬಂದು ಕಿಂಡಿ ಅಣೆಕಟ್ಟಿಗೆ ಡ್ಯಾಮೇಜ್ ಮಾಡುತ್ತಿದೆ. ಅಣೆಕಟ್ಟಿನ ಪಕ್ಕದ ತೋಟ, ಕೃಷಿ ಭೂಮಿಗೆ ನೀರು ನುಗ್ಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಅಂಕೋಲಾದ ಬಿಳಿಹೊಂಯ್ಗಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ