ರಾಯಚೂರು/ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ (Rain News) ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಪ್ರವಾಹದ ಪೂರ್ವ ಸಮೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 105 ಗ್ರಾಮಗಳಿಗೆ ಪ್ರವಾಹದ ಆತಂಕ ಇದೆ. ಜಿಲ್ಲೆಯಲ್ಲಿರುವ ಒಟ್ಟು 6 ಸೇತುವೆಗಳಿಗೆ ಜಲಾವೃತದ ಭೀತಿ ಇದ್ದು, ಇದಕ್ಕಾಗಿ 35 ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚನೆ ಮಾಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ 21 ಜನರ ಎನ್‌ಡಿಆರ್‌ಎಫ್ (NDRF) ತಂಡ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದೆ. ಪ್ರವಾಹದ ಭೀತಿಯಿರುವ 5 ತಾಲೂಕುಗಳಲ್ಲಿ ರಬ್ಬರ್ ಬೋಟ್, ನದಿ ಪಾತ್ರದಲ್ಲಿ 5 ಟೂಬ್ ಬೋಟ್‌ಗಳಲ್ಲಿ ಗಸ್ತು ಇರಲಿದೆ. ಜಿಲ್ಲೆಯಲ್ಲಿ ಒಟ್ಟು 65 ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಮಾಹಿತಿ ನೀಡಿದ್ದಾರೆ.
ಕಗ್ಗತಲಲ್ಲಿ ಯಾದಗಿರಿಯ ಕೋಟಗೇರಾ ಗ್ರಾಮ
ಯಾದಗಿರಿ ತಾಲೂಕಿನ ಕೋಟಗೇರಾ ಗ್ರಾಮಸ್ಥರು ಕಗ್ಗತಲಲ್ಲಿ ಇದ್ದು, ನರಕಯಾತನೆ ಅನುಭವಿಸುತ್ತಿದ್ದಾರೆ. ಗ್ರಾಮದ ಕ್ರೈಸ್ತ ಸಮುದಾಯದ ಜನರು ವಾಸ ಮಾಡುವ ಓಣಿಗೆ ವಿದ್ಯುತ್ ಪೂರೈಕೆವಿಲ್ಲದೇ ಸಂಕಷ್ಟ ಎದುರಾಗಿದೆ. ಕಳೆದ 12 ದಿನಗಳಿಂದ ಕತ್ತಲಲ್ಲಿ ದಿನ ಕಳೆಯುವಂತಾಗಿದೆ. ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಬಿದ್ದು 12 ದಿನಗಳು ಕಳೆದಿವೆ. ನೂತನ ವಿದ್ಯುತ್ ಕಂಬ ಅಳವಡಿಕೆ ಮಾಡದೆ ಇರುವುದಕ್ಕೆ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ದೂಧ್‌ಗಂಗಾ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ಉಪನದಿ ದೂಧ್‌ಗಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ. ದೂಧ್‌ಗಂಗಾ ನದಿಗೆ 27,456 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ದೂಧ್‌ಗಂಗಾ, ವೇದಗಂಗಾ ಸಂಗಮ ಸ್ಥಾನ ಬಾರವಾಡ ಗ್ರಾಮದಲ್ಲಿ ಪ್ರವಾಹ ಭೀತಿ ಇದ್ದು, ಬಾರವಾಡ ಕುನ್ನೂರು ಕೆಳಹಂತದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಈಗಾಗಲೇ ಪೊಲೀಸರು ಸೇತುವೆಯ ಎರಡು ಬದಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ನದಿ ಪಾತ್ರದ ಜನರು ಮನೆಗೆ ಬೀಗ ಹಾಕಿ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.
ಉಡುಪಿಯಲ್ಲಿ ಮನೆ ಮೇಲೆ ಬಿದ್ದ ಬೃಹತ್ ಮರ
ಉಡುಪಿ ಜಿಲ್ಲೆಯಲ್ಲಿ ಗಾಳಿ ಮಳೆಗೆ ಕಕ್ಕುಂಜೆಯಲ್ಲಿ ಮನೆಯ ಮೇಲೆ ಭಾರಿ ಗಾತ್ರದ ಮರವೊಂದು ಬಿದ್ದಿದೆ. ವಿಪರೀತ ಗಾಳಿಗೆ ಏಕಾಏಕಿ ಮನೆಯ ಮೇಲೆ ಮರ ಬಿದ್ದಿದೆ. ಸುಧಾಕರ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿಯಲ್ಲಿ ನಿರ್ಮಾಣ ಹಂತದ ರಸ್ತೆ ಕುಸಿತ
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನಿರಂತರ ಮಳೆಗೆ ನಿರ್ಮಾಣ ಹಂತದ ರಸ್ತೆ ಕುಸಿಯುತ್ತಿದೆ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾ-ರಾಮನಗರ ಮಾರ್ಗಮಧ್ಯೆ ಇರುವ ನಿರ್ಮಾಣ ಹಂತದ ರಸ್ತೆಯು ಕುಸಿಯುತ್ತಿದೆ. ಈಗಾಗಲೇ ರಸ್ತೆಯಲ್ಲಿ ಸಾಲು ಸಾಲು ಬಿರುಕು ಬಿಟ್ಟಿದ್ದು, ಹೀಗೆ ಮಳೆ ಮುಂದುವರಿದರೆ ಮತ್ತಷ್ಟು ಹಾನಿಯಾಗುವ ಆತಂಕ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕುಸಿಯುವ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಪ್ರಾಧಿಕಾರವು ಪರ್ಯಾಯ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಇದನ್ನೂ ಓದಿ: Rain News: ಮಳೆ ಅಬ್ಬರಕ್ಕೆ ಮತ್ತೆರಡು ಬಲಿ, ಮನೆ ಚಾವಣಿ ಕುಸಿದು 15 ತಿಂಗಳ ಮಗು, ವೃದ್ಧೆ ಬಲಿ
ಕೊಡಗಿನಲ್ಲಿ ತಡೆಗೋಡೆ ಕುಸಿದು ಮಳಿಗೆಗಳಿಗೆ ಹಾನಿ
ಕೊಡಗಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ತಡೆಗೋಡೆ ಕುಸಿದು 6 ಮಳಿಗೆಗಳಿಗೆ ಹಾನಿಯಾಗಿದೆ. ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪ ಅಜ್ಜೇಟಿರ ಬೋಪಣ್ಣ ಎಂಬುವರಿಗೆ ಸೇರಿದ ಮಳಿಗೆಗಳಿಗೆ ಹಾನಿಯಾಗಿದೆ. ತಡೆಗೋಡೆ ಕುಸಿದ ಪರಿಣಾಮ ಹತ್ತು ಲಕ್ಷ ರೂ ಅಧಿಕ ನಷ್ಟವುಂಟಾಗಿದೆ. ಸೂಕ್ತ ಪರಿಹಾರ ನೀಡುವಂತೆ ಅಂಗಡಿ ಮಾಲೀಕ ಬೋಪಣ್ಣ ಆಗ್ರಹಿಸಿದ್ದಾರೆ.
ಇತ್ತ ಹಾಸನ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ವರ್ಷಧಾರೆಗೆ ಮನೆ ಬಳಿಯ ಗೆರೆ ಕುಸಿತಗೊಂಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಚಿಮ್ಮಿಕೋಲು ಗ್ರಾಮದಲ್ಲಿ ನಡೆದಿದೆ. ಗೆರೆ ಕುಸಿತದಿಂದ ಕುಟುಂಬ ಆತಂಕಗೊಂಡಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಕಲೇಶಪುರ ತಾಲೂಕಿನ ಚಳ್ಳ ಹಾಡ್ಯ ಬಳಿ ಗುಡ್ಡ ಕುಸಿತದಿಂದಾಗಿ ಹಳ್ಳಿಬೈಲು, ಹಳ್ಳಿಬೈಲು ಕಾಲೋನಿ, ದಿನೇಕೆರೆ-ಹೆತ್ತೂರು ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿಯುತ್ತಿರುವುದರಿಂದ ಮನೆಗಳಿಗೆ ಹಾನಿಯಾಗುವ ಆತಂಕ ಇದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ